ಸಂಪುಟ ವಿಸ್ತರಣೆಯಲ್ಲಿ ಬಿಗ್ ಟ್ವಿಸ್ಟ್: ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು; ಕೊನೆ ಕ್ಷಣದಲ್ಲಿ ಒಬ್ಬರಿಗೆ ಕೊಕ್!

ಇಂದು ಸಂಜೆ 5 ಗಂಟೆಗೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು 19 ಸಚಿವರಿಗೆ ಮಾತ್ರ ಪ್ರತಿಜ್ಞಾವಿಧಿ ಬೋಧಿಸಿದರು.
19 ministers inducted into CM Shivakumar-led cabinet in Karnataka
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 19 ಶಾಸಕರು
Updated on

ಬೆಂಗಳೂರು: ಕೊನೆಗೂ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೋಮವಾರ ಸಂಜೆ ವಿಸ್ತರಣೆಯಾಗಿದೆ. ಕಾಂಗ್ರೆಸ್ ಹೈಕಮಾಂಡ್ 20 ನೂತನ ಸಚಿವರ ಹೆಸರನ್ನು ಪ್ರಕಟಿಸಿತ್ತಾದರೂ ಕೊನೆ ಕ್ಷಣದಲ್ಲಿ 19 ಮಂದಿ ಮಾತ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಇಂದು ಸಂಜೆ 5 ಗಂಟೆಗೆ ಲೋಕಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು 19 ಸಚಿವರಿಗೆ ಮಾತ್ರ ಪ್ರತಿಜ್ಞಾವಿಧಿ ಬೋಧಿಸಿದರು.

ಮೊದಲಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್‌ ಅವರ ಪುತ್ರ ಡಾ. ಅಜಯ್‌ ಸಿಂಗ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಕ್ರಮವಾಗಿ ಎಚ್‌.ಸಿ.ಬಾಲಕೃಷ್ಣ, ಕೆ.ಎಸ್‌.ಬಸವಂತಪ್ಪ, ಬಸವರಾಜ್‌ ರಾಯರೆಡ್ಡಿ, ಎನ್‌.ಚಲುವರಾಯಸ್ವಾಮಿ, ಲಕ್ಷ್ಮಣ್‌ ಸವದಿ, ಮಧು ಬಂಗಾರಪ್ಪ, ಎಸ್‌.ಎಸ್‌.ಮಲ್ಲಿಕಾರ್ಜುನ್‌, ಬಿ.ನಾಗೇಂದ್ರ, ಪಿ.ಎಂ.ನರೇಂದ್ರಸ್ವಾಮಿ, ಸಿ.ಪುಟ್ಟರಂಗಶೆಟ್ಟಿ, ಟಿ.ರಘುಮೂರ್ತಿ, ರಿಜ್ವಾನ್‌ ಅರ್ಷದ್‌, ರುದ್ರಪ್ಪ ಲಮಾಣಿ, ಸಂತೋಷ್‌ ಲಾಡ್‌, ಶಿವಲಿಂಗೇಗೌಡ, ಶಿವರಾಜ್‌ ತಂಗಡಗಿ, ವಿಜಯಾನಂದ ಕಾಶಪ್ಪನವರ್‌, ಜಮೀರ್‌ ಅಹ್ಮದ್‌ ಖಾನ್ ಅವರು ಪ್ರಮಾಣವಚನ ಸ್ವೀಕರಿಸಿದರು.

19 ministers inducted into CM Shivakumar-led cabinet in Karnataka
ನೂತನ ಸಚಿವರ ಪಟ್ಟಿ ಪ್ರಕಟ ಬೆನ್ನಲ್ಲೇ ಭುಗಿಲೆದ್ದ ಆಕ್ರೋಶ; ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ರಾಜೀನಾಮೆ!

ಈ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೈರಾಗಿದ್ದರು.

ಗಾಯತ್ರಿ ಶಾಂತೇಗೌಡಗೆ ಕೊಕ್

ಇದಕ್ಕೂ ಮುನ್ನ, ಎಐಸಿಸಿ ಪ್ರಧಾನ ಕಾರ್ಯದರ್ಶಿ(ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಸಿಎಂ ಶಿವಕುಮಾರ್ ಅವರಿಗೆ ಪತ್ರ ಬರೆದು, ಸಂಪುಟಕ್ಕೆ ಸೇರಿಸಿಕೊಳ್ಳಲು 20 ಸಚಿವರ ಹೆಸರುಗಳನ್ನು ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿರುವ ಬಗ್ಗೆ ಮಾಹಿತಿ ನೀಡಿದ್ದರು.

ಆದಾಗ್ಯೂ, ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದ ಅಂತಿಮ ಪಟ್ಟಿಯಲ್ಲಿದ್ದ ಗಾಯತ್ರಿ ಶಾಂತೇಗೌಡ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿಲ್ಲ. ಇದರೊಂದಿಗೆ ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳಾ ಪ್ರಾತಿನಿಧ್ಯ ಇಲ್ಲದಂತಾಗಿದೆ.

ಕೊನೇ ಕ್ಷಣದಲ್ಲಿ ನಡೆದ ದಿಢೀರ್​​ ರಾಜಕೀಯ ಬೆಳವಣಿಗೆಗಳಿಂದಾಗಿ ಈ ನಿರ್ಧಾರಕ್ಕೆ ಬರಲಾಗಿದ್ದು, ಮಹಿಳಾ ಶಾಸಕರ ನಡುವಿನ ತೀವ್ರ ಪೈಪೋಟಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

20 ಮಂದಿ ನೂತನ ಸಚಿವರ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರಿತ್ತು. ಆದರೆ ಪ್ರಮಾಣವಚನ ಸ್ವೀಕರಿಸಲು ಸಿಎಂ ಕಡೆಯಿಂದ ಅವರಿಗೆ ಯಾವುದೇ ಕರೆ ಬಂದಿಲ್ಲ. ಪರಿಷತ್ ಸದಸ್ಯೆಯಾಗಿ ಗಾಯತ್ರಿ ಇನ್ನೂ ಪ್ರಮಾಣ ಸ್ವೀಕರಿಸಿದ ಕಾರಣ ಪಕ್ಷದಲ್ಲಿ ಈ ಬಗ್ಗೆ ಅಸಮಾಧಾನ ಭುಗಿಲೆದ್ದ ಕಾರಣ, ಪಕ್ಷ ಈ ತೀರ್ಮಾನ ಕೈಗೊಂಡಿರುವ ಮಾಹಿತಿ ಇದೆ.

ಮಹಿಳಾ ಸಚಿವ ಸ್ಥಾನಕ್ಕಾಗಿ ಹಗ್ಗಜಗ್ಗಾಟ

ಮಹಿಳಾ ಸಚಿವ ಸ್ಥಾನಕ್ಕೆ ಗಾಯತ್ರಿ ಅವರ ಹೆಸರು ಘೋಷಣೆ ನಡುವೆಯೂ ಲಕ್ಷ್ಮೀ ಹೆಬ್ಬಾಳ್ಕರ್ ಉಮಾಶ್ರೀ ನಡುವೆ ತೀವ್ರ ಪೈಪೋಟಿ ನಡೆದಿದೆ. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಗಿದ್ದು, ಕೊನೆ ಕ್ಷಣದಲ್ಲಿ ಗಾಯತ್ರಿ ಹೆಸರು ಬಿಡಲೇಬೇಕು ಎಂಬ ರಾಜ್ಯ ನಾಯಕರ ಒತ್ತಡಕ್ಕೆ ಕಾಂಗ್ರೆಸ್ ವರಿಷ್ಠರು ಮಣಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com