

ಬೆಂಗಳೂರು: ಕರ್ನಾಟಕ ಸರ್ಕಾರವು ಪ್ರಸ್ತಾವಿತ ಎಐ ವಿಶ್ವವಿದ್ಯಾಲಯ ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಮಂದಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ಕೈಗಾರಿಕಾ ಬೆಂಬಲಿತ ಪ್ರಮಾಣಪತ್ರ (Certification) ಕಾರ್ಯಕ್ರಮಗಳನ್ನು ಜಂಟಿಯಾಗಿ ರೂಪಿಸಲು ಎಐ ಸಂಸ್ಥೆ Anthropicಯ ಸಹಕಾರ ಕೋರಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಗುರುವಾರ ಆಂಥ್ರೋಪಿಕ್ ಸಂಸ್ಥೆಯ ಅಂತಾರಾಷ್ಟ್ರೀಯ ನೀತಿ ವಿಭಾಗದ ಮುಖ್ಯಸ್ಥ ಮೈಕೆಲ್ ಸೆಲ್ಲಿಟ್ಟೊ ನೇತೃತ್ವದ ನಿಯೋಗದೊಂದಿಗೆ ನಡೆದ ಸಭೆಯಲ್ಲಿ ಈ ಪ್ರಸ್ತಾವನೆ ಮಂಡಿಸಿದರು. ಪ್ರಮಾಣಪತ್ರ ಕೋರ್ಸ್‌ಗಳಿಗೆ ಪಠ್ಯಕ್ರಮ ರೂಪಿಸುವುದು, ಬೋಧನಾ ವಿಷಯ (Content) ಸಿದ್ಧಪಡಿಸುವುದು ಹಾಗೂ ಮೌಲ್ಯಮಾಪನ ಚೌಕಟ್ಟು (Assessment Framework) ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆ ಸಹಕರಿಸುವಂತೆ ಅವರು ಮನವಿ ಮಾಡಿದರು.
ಸಭೆಯನ್ನು ಆಯೋಜಿಸಿದ್ದ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಆಂಥ್ರೋಪಿಕ್ ಜೊತೆಗಿನ ಸಹಭಾಗಿತ್ವದಿಂದ ಕರ್ನಾಟಕದಲ್ಲಿ ಎಐ ಶಿಕ್ಷಣವನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Anthropic ಸಂಸ್ಥೆ ಸ್ವತಂತ್ರವಾಗಿ ಸುಮಾರು 50 ಸಾವಿರ ಮಂದಿಯನ್ನು ತಲುಪಬಹುದು. ಆದರೆ ಕೈಗಾರಿಕೆ ಮತ್ತು ಸರ್ಕಾರದೊಂದಿಗೆ ಕೈಜೋಡಿಸಿದರೆ ನಾವು ಎರಡು ಲಕ್ಷ ಮಂದಿವರೆಗೆ ತಲುಪಬಹುದು. ಒಟ್ಟಾಗಿ ದೊಡ್ಡ ಮಟ್ಟದ ಪರಿವರ್ತನೆಯನ್ನು ಸಾಧಿಸಬಹುದು ಎಂದು ಅವರು ಹೇಳಿದರು.
ಈ ಪ್ರಮಾಣಪತ್ರ ಕಾರ್ಯಕ್ರಮಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಯುವಿಸಿಇ (UVCE) ಹಾಗೂ ಐಐಐಟಿ ಬೆಂಗಳೂರು (IIIT Bangalore) ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ಮೂಲಕ ನಡೆಸುವ ಪ್ರಸ್ತಾವನೆ ಇದೆ. ವಿದ್ಯಾರ್ಥಿಗಳಿಗೆ ಕೈಗಾರಿಕೆ ಮಾನ್ಯತೆ ಪಡೆದ ಎಐ ಕೌಶಲ್ಯಗಳನ್ನು ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಮುಖ್ಯಮಂತ್ರಿಗಳು ಪ್ರಸ್ತಾವಿತ ಎಐ ವಿಶ್ವವಿದ್ಯಾಲಯವನ್ನು ಕೇಂದ್ರವಾಗಿಟ್ಟುಕೊಂಡು, ಬೃಹತ್ ಪ್ರಮಾಣದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಡೀಪ್‌ಟೆಕ್ (Deep-tech) ಆವಿಷ್ಕಾರಗಳಿಗೆ ಬೆಂಬಲ ನೀಡುವ ಸಮಗ್ರ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಕರ್ನಾಟಕದ ದೃಷ್ಟಿಕೋನವನ್ನು ವಿವರಿಸಿದರು.
ಇದೇ ವೇಳೆ, ರಾಜ್ಯದ ನಿಪುಣ (NIPUNA) ಕೌಶಲ್ಯಾಭಿವೃದ್ಧಿ ಯೋಜನೆಯಡಿ ಕ್ಲಾಡ್ ಪ್ರಮಾಣೀಕರಣ ಹಾಗೂ ವಿಶ್ವವಿದ್ಯಾಲಯದ ನೇತೃತ್ವದ ಪ್ರಮಾಣಪತ್ರ ಕಾರ್ಯಕ್ರಮದ ಕುರಿತು ಚರ್ಚೆ ನಡೆಯಿತು.
ಆರೋಗ್ಯ ಮತ್ತು ಜೀವ ವಿಜ್ಞಾನ ಕ್ಷೇತ್ರಗಳಲ್ಲಿ ಎಐ ಬಳಕೆ, ವಿಶೇಷವಾಗಿ ಭಾರತೀಯ ವಿಜ್ಞಾನ ಸಂಸ್ಥೆ (IISc) ಸಹಯೋಗದಲ್ಲಿ ವೈಜ್ಞಾನಿಕ ಸಂಶೋಧನೆಗೆ ಎಐ ಬಳಸುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸಲಾಯಿತು. ಉನ್ನತ ಶಿಕ್ಷಣದಲ್ಲಿ ಎಐ ಆಧಾರಿತ ಸಂಶೋಧನೆ ಹಾಗೂ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ನಿಯೋಗ ಆಸಕ್ತಿ ವ್ಯಕ್ತಪಡಿಸಿತು.
ಎಂಟರ್‌ಪ್ರೈಸ್ ಎಐ ಅಳವಡಿಕೆ ಕುರಿತು ನಡೆದ ಚರ್ಚೆಯಲ್ಲಿ, ಡೇಟಾ ರೆಸಿಡೆನ್ಸಿ (Data Residency) ಹಾಗೂ ಸರ್ಕಾರದ ಸಾರ್ವಭೌಮ (Sovereign) ಡೇಟಾವನ್ನು ರಾಜ್ಯದೊಳಗಿನ ಸರ್ವರ್‌ಗಳಲ್ಲೇ ಸುರಕ್ಷಿತವಾಗಿ ಸಂಗ್ರಹಿಸುವ ಅಗತ್ಯಕ್ಕೆ ಒತ್ತು ನೀಡಲಾಯಿತು.
ರಾಜ್ಯ ಸರ್ಕಾರವು ತನ್ನ "ಸರ್ಕಾರ ಮೊದಲು" ನೀತಿಯನ್ನು ಪುನರುಚ್ಚರಿಸಿ, ನವೀನ ಎಐ ಆಧಾರಿತ ಸಾರ್ವಜನಿಕ ಸೇವಾ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಿ ಡೇಟಾಸೆಟ್‌ಗಳನ್ನು ಸುರಕ್ಷಿತ ರೀತಿಯಲ್ಲಿ ಮುಕ್ತಗೊಳಿಸುವ ಪ್ರಸ್ತಾವನೆ ಸಲ್ಲಿಸಿತು.
ಇದಲ್ಲದೆ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಪಿಎಚ್‌ಡಿ ಸಂಶೋಧಕರಿಗಾಗಿ Claude AI ವೇದಿಕೆಯ ಚಂದಾದಾರಿಕೆಯನ್ನು (Subscription) ರಿಯಾಯಿತಿ ದರದಲ್ಲಿ ಒದಗಿಸುವಂತೆ ಮುಖ್ಯಮಂತ್ರಿಗಳು Anthropic ಸಂಸ್ಥೆಯನ್ನು ಕೋರಿದರು.
ಈ ಪ್ರಸ್ತಾವನೆಯಿಂದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಸಂಯೋಜಿತ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕನಿಷ್ಠ 10,000 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಬಹುದು ಎಂದು ಮುಖ್ಯಮಂತ್ರಿ ಹಣಕಾಸು ಸಲಹೆಗಾರ ಎಲ್.ಕೆ. ಅಥೀಕ್ ತಿಳಿಸಿದ್ದಾರೆ.
ಪ್ರಸ್ತುತ Claude AI ಬಳಕೆಗೆ ಸಂಸ್ಥೆ ತಿಂಗಳಿಗೆ ಸುಮಾರು 2,000 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚು ಶುಲ್ಕ ವಿಧಿಸುತ್ತಿದೆ. ಮುಖ್ಯಮಂತ್ರಿಗಳ ಮನವಿಯನ್ನು ಪರಿಶೀಲಿಸುವುದಾಗಿ ಸಂಸ್ಥೆಯ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಸರ್ಕಾರಿ ವ್ಯವಸ್ಥೆಗಳಲ್ಲಿ ವಂಚನೆ (Fraud) ಪತ್ತೆಹಚ್ಚಲು, ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತವಾಗಿ ಸಿದ್ಧಪಡಿಸಲು, ತೆರಿಗೆ ಆಡಳಿತವನ್ನು ಸುಧಾರಿಸಲು ಹಾಗೂ ಸಾರ್ವಜನಿಕ ಸೇವೆಗಳ ವಿತರಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಎಐ ಬಳಕೆಯ ಕುರಿತು ಸಹ ಸರ್ಕಾರ ಆಂಥ್ರೋಪಿಕ್ ಪರಿಣತಿಯನ್ನು ಕೋರಿದೆ.
ಕರ್ನಾಟಕದ 20,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ, ವಿಶೇಷವಾಗಿ ಡೀಪ್‌ಟೆಕ್ ಕ್ಷೇತ್ರದ ಉದ್ಯಮಗಳಿಗೆ ಬೆಂಬಲ ನೀಡುವ ಬಗ್ಗೆ ಹಾಗೂ ತೆರಿಗೆ ಆಡಳಿತ ಮತ್ತು ನಾಗರಿಕ ಸೇವೆಗಳಲ್ಲಿ ಎಐ ಆಧಾರಿತ ಪೈಲಟ್ ಯೋಜನೆಗಳನ್ನು ಜಾರಿಗೊಳಿಸುವ ಕುರಿತು ಚರ್ಚೆ ನಡೆಸಿದರು.
ಕರ್ನಾಟಕ ಸರ್ಕಾರವು ಪ್ರತ್ಯೇಕ ಎಐ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಕಾನೂನು ಮಸೂದೆ ಸಿದ್ಧಪಡಿಸುತ್ತಿದ್ದು, ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಅದನ್ನು ಮಂಡಿಸುವ ಯೋಜನೆ ಹೊಂದಿದೆ. ಎಐ ಶಿಕ್ಷಣ, ಸಂಶೋಧನೆ ಮತ್ತು ನವೋದ್ಯಮಕ್ಕೆ ಮೀಸಲಾದ ವಿಶೇಷ ಪರಿಸರ ವ್ಯವಸ್ಥೆ ನಿರ್ಮಿಸುವತ್ತ ಇದು ಮಹತ್ವದ ಹೆಜ್ಜೆಯಾಗಲಿದೆ.