

ಬೆಂಗಳೂರು: ನಾನು ಲಾಟರಿ ಬ್ಯಾನ್ ಮಾಡಿದಾಗ ತಮಿಳುನಾಡಿನಿಂದ ಬ್ಯಾಗ್ ಹಿಡ್ಕೊಂಡು ಬಂದಿದ್ದವರನ್ನು ಉಗಿದು ಕಳಿಸಿದೆ. ನನ್ನನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನನ್ನ ಕೊಂಡುಕೊಳ್ಳುವವರು ಈ ರಾಜ್ಯದಲ್ಲಿ ಇನ್ನೂ ಹುಟ್ಟಿಲ್ಲ, ನನ್ನ ಧ್ವನಿಯನ್ನೂ ನಿಲ್ಲಿಸಲು ಆಗಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದರು.
ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಯೋಜನೆಗಳಿಂದ ದುಡ್ಡು ಹೊಡೆಯುವ ಕೆಲಸ ಮಾಡುತ್ತಿದೆ. ಜನರು ನಂಬುವ ಹಾಗೇ ಜಾಹೀರಾತನ್ನು ಕೊಡಿ.
ಬಿಡದಿ ಭೂಮಿ ಫಲವತ್ತಾದ ಭೂಮಿ ಎಂದು ಕಾಂಗ್ರೆಸ್ ಸದನ ಸಮಿತಿ ವರದಿಯಲ್ಲಿ ಎಲ್ಲವೂ ಇದೆ. ಬಿಡದಿ ಪ್ರಾಜೆಕ್ಟ್ ನಿಲ್ಲಿಸುವ ಬಗ್ಗೆ ನಾನೇ ಸದನದಲ್ಲಿ ಹೇಳಿದ್ದೇನೆ. ಈಗ ಬಿಡದಿ ಲೂಟಿ ಹೊಡೆಯಲು ಹೊರಟಿದ್ದಾರೆ. ಇದೇ ಡಿ.ಕೆ.ಶಿವಕುಮಾರ್ ಸದನ ಸಮಿತಿಯಲ್ಲಿ ಇದ್ದರಲ್ಲ... ನಾನು ದಾಖಲೆಗಳನ್ನು ಇಟ್ಟುಕೊಂಡು ಆರೋಪ ಮಾಡಿದ್ದೇನೆ" ಎಂದು ಹೇಳಿದರು.
ಡಿಎಲ್ಎಫ್ ಕಂಪನಿಯಿಂದ ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ತಮ್ಮ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೇರಳದ ಕಾಂಗ್ರೆಸ್ ಮುಖ್ಯಮಂತ್ರಿಗೂ, ಪ್ರಧಾನಿಯಾಗಲು ಹೊರಟಿರುವ ದೆಹಲಿಯ ವ್ಯಕ್ತಿಗೂ– ಡಿಎಲ್‌ಎಫ್‌ಗೂ ಸಂಬಂಧವೇನು ಎಂಬುದನ್ನು ಹೇಳಲಿ, ಆಗ ಸತ್ಯವೆಲ್ಲವೂ ಗೊತ್ತಾಗುತ್ತವೆ. ರಾಜ್ಯದಲ್ಲಿ ಸರ್ಕಾರ ಅವರದೇ ಇದೆಯಲ್ಲವೇ ತನಿಖೆ ಮಾಡಿಸಲಿ ಎಂದರು.
ಬಿಡದಿ ಟೌನ್ಶಿಪ್ನಲ್ಲಿ ನನಗೆ ಯಾವುದೇ ಹಠ ಇಲ್ಲ. ಬಹುಶಃ ಅವರಿಗೆ ಹಠ ಇರಬೇಕು. ಬಿಡದಿ ಟೌನ್‌ಶಿಪ್ ಹೆಸರಲ್ಲಿ ಲೂಟಿ ಹೊಡೆಯುವ ಸ್ಕೀಮ್ ಇದು. ನಾನು ಕಿಕ್ ಬ್ಯಾಕ್ ಪಡೆದಿದ್ದರೆ ತನಿಖೆ ಮಾಡಲಿ. ನನ್ನನ್ನಾಗಲಿ, ದೇವೇಗೌಡರನ್ನಾಗಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ.
"ಬಿಡದಿ ಟೌನ್‌ಶಿಪ್ ಯಾವ ಕಾರಣಕ್ಕೂ ಆಗಲ್ಲ. ದುಡ್ಡು ಹೊಡೆಯೋಕೆ ಮುಂದಾಗಿದ್ದಾರೆ. ರೈತರು, ಹೆಣ್ಮಕ್ಕಳು ಭದ್ರವಾಗಿದ್ದರೆ ಬಿಡದಿ ಟೌನ್‌ಶಿಪ್ ಆಗಲ್ಲ. ಕೆಟ್ಟ ಭ್ರಷ್ಟ ಸರ್ಕಾರಕ್ಕೆ ತಿರುಗೇಟು ಕೊಡಲಿಕ್ಕೆ ನಮ್ಮ ಶಾಸಕರು ಸಿದ್ದರಿದ್ದಾರೆ. ವಿಪಕ್ಷಗಳು ಮಾತನಾಡಿದರೆ ಗೌರವ ಕೊಡುತ್ತಿಲ್ಲ.
ಅಧಿಕಾರದ ಮದದಿಂದ ವಿಪಕ್ಷಗಳಿಗೆ ಮಾನ್ಯತೆ ಕೊಡುತ್ತಿಲ್ಲ. ಬೀದಿ ಬದಿ ವ್ಯಾಪಾರಸ್ಥರನ್ನು ಎತ್ತಿಸಿದ್ದೀರಿ? ಅವರಿಗೆ ಪರ್ಯಾಯ ಮಾರ್ಗ ಕೊಟ್ಟಿದ್ದೀರಾ?. ಕೃಷ್ಣಭೈರೇಗೌಡರು ನಾನು ಖರೀದಿ ಮಾಡಿದ ಜಾಗ ಒತ್ತುವರಿ ಅಂದಿದ್ದಿರಾ?, ಅದಕ್ಕೆ ಎಸ್ಐಟಿ ಕೂಡ ರಚನೆ ಮಾಡಿದ್ದಾರೆ. ಒಂದೂವರೆ ವರ್ಷ ಅಧಿಕಾರ ಮಾತ್ರ ಬಾಕಿ ಇರೋದು" ಎಂದು ಎಚ್ಚರಿಕೆ ನೀಡಿದರು.
ನೈಸ್ ರೋಡ್ ಟೋಲ್ ಸಂಗ್ರಹ ವಿಚಾರವಾಗಿ ಮಾತನಾಡಿ, "ಅಕ್ರಮವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಇದನ್ನು ಹೇಳಿರುವುದು ರಾಜ್ಯ ಸರ್ಕಾರದ ಪರ ವಾದ ಮಂಡಿಸಿರುವ ವಕೀಲರು. ಹೀಗಾಗಿ ನಾನು ರೈತರಿಗೆ ಟೋಲ್ ಕಟ್ಟಬೇಡಿ ಅಂತ ಹೇಳಿದ್ದೀನಿ.
ಪ್ರಿಯಾಂಕ್ ಖರ್ಗೆಯವರು ಕಾಂಪಿಟೇಷನ್ನಲ್ಲಿ ಮಾತನಾಡುತ್ತಾರೆ. ಟೋಲ್ ಸಂಗ್ರಹ ಮಾಡುತ್ತಿರುವುದು ಕೇಂದ್ರ ಸರ್ಕಾರ ಅಂದಿದ್ದಾರೆ. ಯಾರು ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಅರಿವಿರಲಿ" ಎಂದು ಕಿಡಿಕಾರಿದರು.
ದುಡ್ಡು ಹೊಡೆಯುವುದನ್ನೇ ಕೆಲಸ ಮಾಡಿಕೊಳ್ಳಬೇಡಿ. ಮುಂದಿನ ಚುನಾವಣೆಯಲ್ಲಿ ಸರ್ವನಾಶ ಆಗುತ್ತೀರಿ, ಎಚ್ಚರ ವಹಿಸಿ. ಜಾಹೀರಾತು ಕೊಡುವಾಗ, ಜನರು ನಂಬುವಂತೆಯಾದರೂ ಕೊಡಿ. ಬಿಡದಿ ಯೋಜನೆಯಲ್ಲಿ ಲೂಟಿ ಮಾಡಲು ಹೊರಟಿದ್ದಾರೆ. ದುಡ್ಡು ಮಾಡುವ ಕಾರ್ಯಕ್ರಮವಷ್ಟೆ ಇದು’ ಎಂದು ವಾಗ್ದಾಳಿ ನಡೆಸಿದರು.