

ಬೆಂಗಳೂರು: ನಾನು ಸೇರಿದಂತೆ ನನ್ನ ಸಚಿವ ಸಂಪುಟ ಮತ್ತು ಅಧಿಕಾರಿಗಳು ಎಲ್ಲರೂ ಸರ್ಕಾರಿ ನೌಕರರೇ, "ಟೀಮ್ ಕರ್ನಾಟಕ" ಆಗಿ ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಕಾನೂನು ಚೌಕಟ್ಟಿನೊಳಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ಹೇಳಿದ್ದಾರೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಸರ್ಕಾರಿ ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎ, ಭ್ರಷ್ಟಾಚಾರದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಡಬಲ್ ಬಿಲ್ ಮಾಡುವವರನ್ನು ಮಟ್ಟ ಹಾಕುತ್ತೇನೆ ಎಂದು ಎಚ್ಚರಿಸಿದರು.
ಸಾರ್ವಜನಿಕ ಸೇವೆಯು ಎಲ್ಲಾ ಸರ್ಕಾರಿ ನೌಕರರ ಪ್ರಾಥಮಿಕ ಗುರಿಯಾಗಿರಬೇಕು. "ನಾನು, ನನ್ನ ಸಚಿವ ಸಂಪುಟ ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲರೂ ಸರ್ಕಾರಿ ನೌಕರರು. ನಮ್ಮದು ಟೀಮ್ ಕರ್ನಾಟಕ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಜನರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತು ಅವರ ಕಲ್ಯಾಣವನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಗುರಿ" ಎಂದು ಶಿವಕುಮಾರ್ ಹೇಳಿದರು.
ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಸುಮಾರು 5.50 ಲಕ್ಷ ಸರ್ಕಾರಿ ನೌಕರರಿಗೆ ಅವಕಾಶ ನೀಡಲಾಗಿದೆ ಮತ್ತು ಅದನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ಒತ್ತಾಯಿಸಿದರು.
ಜನರ ಜೀವನದಲ್ಲಿ ಬದಲಾವಣೆ ತರುವ ಜವಾಬ್ದಾರಿ ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ನೌಕರರ ಮೇಲಿದೆ ಎಂದು ಅವರು ಹೇಳಿದರು.
ಅಂಬೇಡ್ಕರ್ ಅವರು ಇತಿಹಾಸ ಮರೆತವ ಇತಿಹಾಸ ಸೃಷ್ಟಿಸಲಾರ ಎಂದು ಹೇಳಿದ್ದಾರೆ. ನೀವು ಸಾಕಷ್ಟು ವಿದ್ಯೆ, ಅನುಭವ ಹೊಂದಿದ್ದೀರಿ. ನಾನು ಹೆಚ್ಚು ಓದಿಲ್ಲ, ಆದರೆ ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ, ಶಾಸಕ, ಮಂತ್ರಿ, ಉಪಮುಖ್ಯಮಂತ್ರಿಯಾಗಿ ಅನುಭವ ಇದೆ. ನೀವು ಶ್ರಮಜೀವಿ, ಸರ್ಕಾರದ ನಾಡಿ ಮಿಡಿತ ಇಟ್ಟುಕೊಂಡು, ಜನ ಮತ್ತು ಸರ್ಕಾರದ ಸೇತುವೆಯಾಗಿದ್ದೀರಿ. ನಾವು ಅಧಿಕಾರದಲ್ಲಿ ಇದ್ದಾಗ ಯಾವ ಸಾಕ್ಷಿಗುಡ್ಡೆ ಬಿಟ್ಟು ಹೋಗುತ್ತೇವೆ ಎಂಬುದು ಮುಖ್ಯ ಎಂದು ಕರೆ ಕೊಟ್ಟರು.
"ಅಧಿಕಾರವು ಜವಾಬ್ದಾರಿಯ ಸಂಕೇತವಾಗಿದೆ. ಅದು ಸಿಂಹಾಸನವಲ್ಲ; ಅದು ಒಂದು ಅವಕಾಶ. ನೀವು ಜನರಲ್ಲಿಯೇ ದೇವರನ್ನು ನೋಡಬಹುದು" ಎಂದು ಸಿಎಂ ಹೇಳಿದರು.
ನಮ್ಮ ನಿಮ್ಮ ಮೇಲೆ ಜನರ ಬದುಕಿನಲ್ಲಿ, ಬದಲಾವಣೆ ತರುವ ಜವಾಬ್ದಾರಿ ಇದೆ. ನಾನು ಇತಿಹಾಸ ಓದಲು ಬರೆಯಲು ಇಚ್ಚಿಸುವುದಿಲ್ಲ. ಇತಿಹಾಸ ಸೃಷ್ಟಿಸಲು ಬಯಸುತ್ತೇನೆ. ಸರ್ಕಾರಿ ನೌಕರರ ಸೇವೆಯಿಂದಲೇ ನಮ್ಮ ರಾಜ್ಯ ಈ ಹಂತಕ್ಕೆ ಬೆಳೆದಿದೆ ಎಂದರು.