ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ... (ಪುಸ್ತಕ ವಿಮರ್ಶೆ: ಸಾಲುಗಳ ನಡುವೆ)

ಸಾಲುಗಳ ನಡುವೆ ಪುಸ್ತಕವನ್ನು ಒಮ್ಮೆಯೇ ಕುಳಿತು ಓದಿ ಮುಗಿಸಬಹುದು. ಆದರೆ ಅದರ ವಿಚಾರಗಳು ಅಷ್ಟು ಬೇಗ ಮನಸ್ಸಿನಿಂದ ಹೊರಗೆ ಹೋಗುವುದಿಲ್ಲ.
Aniruddha Jatkar
ಅನಿರುದ್ಧ ಜತಕರ
Updated on

ಪುಸ್ತಕ: ಸಾಲುಗಳ ನಡುವೆ

ಲೇಖಕ: ಅನಿರುದ್ಧ ಜತಕರ

ಕೆಲವು ಪುಸ್ತಕಗಳು ಓದಿ ಮುಗಿದ ತಕ್ಷಣವೇ ಮರೆತುಹೋಗುತ್ತವೆ. ಇನ್ನೂ ಕೆಲವು ಪುಸ್ತಕಗಳು ಮಾತ್ರ ಓದು ಮುಗಿದ ಬಳಿಕವೂ ನಮ್ಮೊಳಗೆ ಸಂಭಾಷಣೆ ಮುಂದುವರಿಸುತ್ತವೆ. ಅನಿರುದ್ಧ ಜತಕರ ಅವರ ಸಾಲುಗಳ ನಡುವೆ ಅಂತಹ ಕೃತಿಗಳಲ್ಲಿ ಒಂದು.

ಈ ಪುಸ್ತಕವನ್ನು ಒಮ್ಮೆಯೇ ಕುಳಿತು ಓದಿ ಮುಗಿಸಬಹುದು. ಆದರೆ ಅದರ ವಿಚಾರಗಳು ಅಷ್ಟು ಬೇಗ ಮನಸ್ಸಿನಿಂದ ಹೊರಗೆ ಹೋಗುವುದಿಲ್ಲ. ಬದುಕು, ಸಿನಿಮಾ, ಆಧ್ಯಾತ್ಮ, ಸಂಬಂಧಗಳು, ಸಮಾಜ, ಕಾಲ, ನೆನಪುಗಳು, ಕೃತಜ್ಞತೆ, ಮನುಷ್ಯತ್ವ... ಹೀಗೆ ಜೀವನದ ಅನೇಕ ಆಯಾಮಗಳನ್ನು ಲೇಖಕರು ಸರಳ ಭಾಷೆಯಲ್ಲಿ, ಆದರೆ ಆಳವಾದ ಚಿಂತನೆಯೊಂದಿಗೆ ತೆರೆದಿಡುತ್ತಾರೆ.

ಪುಸ್ತಕದ ಹೆಸರೇ ಅದರ ಭಾವವನ್ನು ಹೇಳುತ್ತದೆ. ಎರಡು ಸಾಲುಗಳ ನಡುವಿನ ಖಾಲಿ ಜಾಗವನ್ನು ಗಮನಿಸಿದಾಗ ಮಾತ್ರ ವಾಕ್ಯದ ಪೂರ್ಣ ಅರ್ಥ ಸಿಗುವಂತೆ, ಬದುಕಿನಲ್ಲಿಯೂ ಕಣ್ಣಿಗೆ ತಕ್ಷಣ ಕಾಣದ ಅನುಭವಗಳಲ್ಲೇ ದೊಡ್ಡ ಪಾಠಗಳು ಅಡಗಿವೆ ಎನ್ನುವುದು ಲೇಖಕರ ನಂಬಿಕೆ. ಪ್ರತಿಯೊಂದು ಅಧ್ಯಾಯವೂ ಇದೇ ವಿಚಾರವನ್ನು ಬೇರೆ ಬೇರೆ ಅನುಭವಗಳ ಮೂಲಕ ಓದುಗರ ಮುಂದೆ ತೆರೆದಿಡುತ್ತದೆ.

ಒಂದು ವಿಭಿನ್ನ ಓದಿನ ಅನುಭವ

ಪುಸ್ತಕದ ಮೊದಲ ಪುಟದಲ್ಲೇ ಡಾ. ವಿಷ್ಣುವರ್ಧನ್ ಅವರಿಗೆ ಸಲ್ಲಿಸಿರುವ ಸಮರ್ಪಣೆ ಮನಸ್ಸಿಗೆ ತಟ್ಟುತ್ತದೆ. ತಮ್ಮೊಳಗಿದ್ದ ಬರಹಗಾರನನ್ನು ಮೊದಲು ಗುರುತಿಸಿದವರು ಅವರೇ ಎಂದು ಅನಿರುದ್ಧ ಜತಕರ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ.

ಪುಸ್ತಕದ ಹಲವು ಅಧ್ಯಾಯಗಳಲ್ಲಿ ವಿಷ್ಣುವರ್ಧನ್ ಅವರ ವ್ಯಕ್ತಿತ್ವ ಹೊಸ ಆಯಾಮದಲ್ಲಿ ತೆರೆದುಕೊಳ್ಳುತ್ತದೆ. "ನಾನು ಮನುಷ್ಯರ ಕಣ್ಣುಗಳನ್ನು ನೋಡುತ್ತೇನೆ. ಅವು ಸುಳ್ಳು ಹೇಳುವುದಿಲ್ಲ" ಎಂಬ ಅವರ ಮಾತನ್ನು ಲೇಖಕರು ನೆನಪಿಸಿಕೊಳ್ಳುವ ರೀತಿ ಆತ್ಮೀಯವಾಗಿದೆ. ಅದು ಒಬ್ಬ ನಟನ ನೆನಪಿಗಿಂತಲೂ, ಒಬ್ಬ ಮನುಷ್ಯನ ಮೌಲ್ಯಗಳನ್ನು ದಾಖಲಿಸುವ ಪ್ರಯತ್ನವಾಗಿ ಕಾಣುತ್ತದೆ.

ಈ ಪುಸ್ತಕದಲ್ಲಿ ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ. ಅದು ಸಮಾಜ, ಸಂಸ್ಕೃತಿ ಮತ್ತು ಇತಿಹಾಸದ ಭಾಗವಾಗಿದೆ. ಕನ್ನಡದ ಶ್ರೇಷ್ಠ ಕಲಾವಿದರಿಗೆ ಸಲ್ಲಬೇಕಾದ ರಾಷ್ಟ್ರೀಯ ಗೌರವಗಳು ಏಕೆ ಸಿಗುತ್ತಿಲ್ಲ ಎಂಬ ಪ್ರಶ್ನೆಯನ್ನು ಲೇಖಕರು ನೇರವಾಗಿ ಎತ್ತುತ್ತಾರೆ. 225ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಡಾ. ವಿಷ್ಣುವರ್ಧನ್ ಅವರಿಗೆ ಪದ್ಮ ಪ್ರಶಸ್ತಿ ದೊರಕದಿರುವ ಬಗ್ಗೆ ಅವರು ಬೇಸರ ವ್ಯಕ್ತಪಡಿಸುತ್ತಾರೆ. ಅದೇ ರೀತಿ, ರಾಜ್ ಕಪೂರ್ ಅವರ ಕನಸಿನ ಕೂಸಾಗಿದ್ದ ಆರ್.ಕೆ. ಸ್ಟುಡಿಯೊ (RK Studio) ನೆಲಸಮವಾದ ಘಟನೆ ಅವರಲ್ಲಿ ಮೂಡಿಸಿದ ನೋವನ್ನೂ ಹಂಚಿಕೊಳ್ಳುತ್ತಾರೆ. ಅಂತಹ ಸ್ಥಳವನ್ನು ವಾಣಿಜ್ಯ ಸಂಕೀರ್ಣವನ್ನಾಗಿಸುವ ಬದಲು ಸ್ಮಾರಕವಾಗಿ ಉಳಿಸಬಹುದಿತ್ತೇ ಎಂಬ ಪ್ರಶ್ನೆಯೂ ಓದುಗರನ್ನು ಚಿಂತನೆಗೆ ಹಚ್ಚುತ್ತದೆ.

ಬದುಕು, ಆಧ್ಯಾತ್ಮ ಮತ್ತು ಆತ್ಮಾವಲೋಕನ

ಪುಸ್ತಕದ ಬಹುಪಾಲು ಅಧ್ಯಾಯಗಳು ಬದುಕನ್ನು ಇನ್ನೊಂದು ಕೋನದಿಂದ ನೋಡುವಂತೆ ಮಾಡುತ್ತವೆ. "ಪ್ರೆಸೆಂಟ್" ಅಧ್ಯಾಯದಲ್ಲಿ ಲೇಖಕರು ವರ್ತಮಾನವೇ ಪ್ರಕೃತಿ ಕೊಟ್ಟ ಅತ್ಯಮೂಲ್ಯ ಉಡುಗೊರೆ ಎಂಬ ಸರಳ ಸತ್ಯವನ್ನು ಅವರು ಮನಮುಟ್ಟುವ ರೀತಿಯಲ್ಲಿ ಹೇಳುತ್ತಾರೆ.

ಆಧ್ಯಾತ್ಮವೂ ಈ ಕೃತಿಯ ಪ್ರಮುಖ ಹೂರಣ. ಆದರೆ ಅದು ಉಪದೇಶವಾಗಿ ಬರುವುದಿಲ್ಲ; ಪ್ರಶ್ನೆಗಳ ರೂಪದಲ್ಲಿ ಬರುತ್ತದೆ. ದೇವರು ಯಾರು? ಆತ ಗಂಡಾ, ಹೆಣ್ಣಾ, ಅಥವಾ ಅದಕ್ಕೂ ಮೀರಿದ ಯಾವುದೋ ಶಕ್ತಿ? ದೇವರು ಎಲ್ಲೆಡೆ ಇದ್ದರೆ ನಾವು ಯಾಕೆ ಕಾಣುವುದಿಲ್ಲ? ಇಂತಹ ಪ್ರಶ್ನೆಗಳನ್ನು ಲೇಖಕರು ಓದುಗರ ಮುಂದಿಡುತ್ತಾರೆ. ಉತ್ತರವನ್ನು ಹೇರದೆ, ಪ್ರತಿಯೊಬ್ಬರೂ ತಮ್ಮೊಳಗೆ ಹುಡುಕಿಕೊಳ್ಳುವಂತೆ ಬಿಡುತ್ತಾರೆ.

ತಮ್ಮ ಜೀವನದ ಏಳುಬೀಳುಗಳನ್ನೂ ಲೇಖಕರು ಮುಚ್ಚಿಡುವುದಿಲ್ಲ. ಕಳಸಾ-ಬಂಡೂರಿ ಯೋಜನೆಗೆ ಬೆಂಬಲವಾಗಿ ಮಾಡಿದ ಭಾಷಣಕ್ಕೆ ಆರಂಭದಲ್ಲಿ ನಿರೀಕ್ಷಿಸಿದ ಪ್ರತಿಕ್ರಿಯೆ ಸಿಗದಿದ್ದರೂ, ನಂತರ ವಿಶ್ವ ದಾಖಲೆಗಳಿಂದ ರಾಷ್ಟ್ರೀಯ ಪ್ರಶಸ್ತಿವರೆಗೆ ಸಿಕ್ಕ ಗೌರವಗಳನ್ನು ಅವರು ವಿನಮ್ರವಾಗಿ ದಾಖಲಿಸುತ್ತಾರೆ. ಡಾ. ಬಿ. ಸರೋಜಾ ದೇವಿ ಮತ್ತು ಡಾ. ಭಾರತಿಯಮ್ಮ ಅವರ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಈ ಪುಸ್ತಕದ ದೊಡ್ಡ ಶಕ್ತಿ ಅದರ ಭಾಷೆ. ಎಲ್ಲಿಯೂ ಪದಗಳ ಆಡಂಬರವಿಲ್ಲ. ಓದುಗರನ್ನು ಮೆಚ್ಚಿಸಲು ಕೃತಕ ಪ್ರಯತ್ನಗಳೂ ಇಲ್ಲ. ಸ್ನೇಹಿತನೊಬ್ಬ ಎದುರು ಕುಳಿತು ತನ್ನ ಅನುಭವಗಳನ್ನು ಹಂಚಿಕೊಳ್ಳುವಂತೆ ಲೇಖಕರು ಬರೆಯುತ್ತಾರೆ. ಅದಕ್ಕಾಗಿಯೇ ಪುಸ್ತಕ ಎಲ್ಲಿಯೂ ಭಾರವಾಗುವುದಿಲ್ಲ.

ಸಾಲುಗಳ ನಡುವೆ ಕೇವಲ ನೆನಪುಗಳ ಸಂಕಲನವಲ್ಲ. ಬದುಕನ್ನು ಮತ್ತೊಮ್ಮೆ ಗಮನದಿಂದ ನೋಡಲು ಮಾಡುವ ಆಹ್ವಾನ. ಸಾಧನೆಗಿಂತ ಮನುಷ್ಯತ್ವ ಮುಖ್ಯ, ಖ್ಯಾತಿಗಿಂತ ಕೃತಜ್ಞತೆ ಮುಖ್ಯ, ಭೂತ ಮತ್ತು ಭವಿಷ್ಯಕ್ಕಿಂತ ವರ್ತಮಾನ ಮುಖ್ಯ ಎಂಬ ಸಂದೇಶವನ್ನು ಲೇಖಕರು ಉಪದೇಶದ ಧಾಟಿಯಲ್ಲಿ ಅಲ್ಲ, ತಮ್ಮ ಅನುಭವಗಳ ಮೂಲಕ ಮನದಟ್ಟಾಗಿಸುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com