ಬಿಡದಿ ಟೌನ್‌ಶಿಪ್ ಯೋಜನೆಗೆ ಜಮೀನು ನೀಡಲು ಸಿದ್ಧರಿದ್ದೇವೆ, ಶೀಘ್ರ ಅಂತಿಮ ಅಧಿಸೂಚನೆ ಹೊರಡಿಸಿ: ರೈತ ನಿಯೋಗ CM ಡಿ ಕೆ ಶಿವಕುಮಾರ್ ಗೆ ಮನವಿ-Video

ಆದರೆ, ಬಿಡದಿ ಸುತ್ತಮುತ್ತಲಿನ ಮತ್ತೊಂದು ವರ್ಗದ ರೈತರು ಯೋಜನೆಗಾಗಿ ಭೂಸ್ವಾಧೀನ ಮಾಡುವುದನ್ನು ವಿರೋಧಿಸುತ್ತಿದ್ದು, ನಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
 Famers delegation met CM D K Shivakumar
ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ರೈತ ನಿಯೋಗ
Updated on

ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆಯ ಉದ್ದೇಶಿತ ಬಿಡದಿ ಟೌನ್‌ಶಿಪ್ ಯೋಜನೆಯಿಂದ ಬಾಧಿತವಾಗಲಿರುವ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮಗಳ ರೈತರ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ಯೋಜನೆಗಾಗಿ ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಸಿದ್ಧವಿದ್ದು, ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲು ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸುವಂತೆ ಮನವಿ ಮಾಡಿತು.

ಆದರೆ, ಬಿಡದಿ ಸುತ್ತಮುತ್ತಲಿನ ಮತ್ತೊಂದು ವರ್ಗದ ರೈತರು ಯೋಜನೆಗಾಗಿ ಭೂಸ್ವಾಧೀನ ಮಾಡುವುದನ್ನು ವಿರೋಧಿಸುತ್ತಿದ್ದು, ನಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಬಿಡದಿ ಸುತ್ತಮುತ್ತಲಿನ ರೈತರಿಗೆ ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಎರಡು ಆಯ್ಕೆಗಳನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಲ ದಿನಗಳ ಹಿಂದೆ ಮುಂದಿಟ್ಟಿದ್ದರು. ಎಕರೆಗೆ 3 ಕೋಟಿ ರೂಪಾಯಿ ಪರಿಹಾರ ಪಡೆಯುವುದು ಅಥವಾ ಅಭಿವೃದ್ಧಿಪಡಿಸಿದ ಭೂಮಿಯ ರೂಪದಲ್ಲಿ ಶೇ.50ರಷ್ಟು ಪ್ರದೇಶವನ್ನು ಮರಳಿ ಪಡೆಯುವುದು ಈ ಎರಡು ಆಯ್ಕೆಗಳಾಗಿದ್ದವು.

ನಿನ್ನೆ ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ರೈತರ ನಿಯೋಗವು, ತಮ್ಮ ಪ್ರದೇಶಕ್ಕೆ ವಿಧಿಸಲಾಗಿರುವ ‘ರೆಡ್ ಝೋನ್’ ನಿರ್ಬಂಧದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿತು.

ಬೈರಮಂಗಲದ ನಿವಾಸಿ ಸುನಿಲ್, ತಮ್ಮ ಪ್ರದೇಶದ ರೈತರು ಕಳೆದ 20 ವರ್ಷಗಳಿಂದ ‘ರೆಡ್ ಝೋನ್’ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಪ್ರದೇಶ ‘ರೆಡ್ ಝೋನ್’ನಲ್ಲಿದ್ದರೆ ಯಾವುದೇ ಅಭಿವೃದ್ಧಿ ಕಾರ್ಯ ನಡೆಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

‘ರೆಡ್ ಝೋನ್’ ಎಂಬ ಹಣೆಪಟ್ಟಿಯಿಂದಾಗಿ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಲು ಹಾಗೂ ಬ್ಯಾಂಕ್‌ಗಳಿಂದ ಅಗತ್ಯ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಕಷ್ಟ ತೋಡಿಕೊಂಡರು.

 Famers delegation met CM D K Shivakumar
‘ಪ್ರಜಾ ಸೇವೆ’ ಅಡಿ ಜಿಲ್ಲಾ ಉಸ್ತುವಾರಿ ಸಚಿವರು- ಶಾಸಕರು ಪ್ರತಿ 2 ವಾರಕ್ಕೊಮ್ಮೆ ತಾಲೂಕುಗಳಿಗೆ ಭೇಟಿ ನೀಡಬೇಕು: CM ಡಿ ಕೆ ಶಿವಕುಮಾರ್-Video

ಹಿರಿಯ ರೈತ ಯಲ್ಲಕ್ಕಿ ಗೌಡ, ‘ರೆಡ್ ಝೋನ್’ ನಿರ್ಬಂಧದಿಂದ ರೈತರು ತೀವ್ರವಾಗಿ ತೊಂದರೆಗೊಳಗಾಗಿದ್ದಾರೆ. ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಕೆಲವು ರೈತರು ತಮ್ಮ ಜಮೀನುಗಳನ್ನು ಕೇವಲ 1 ಲಕ್ಷ ರೂಪಾಯಿಗೆ ಮಾರಾಟ ಮಾಡುವ ಪರಿಸ್ಥಿತಿ ಎದುರಾಗಿದೆ, ನಮ್ಮ ಪ್ರದೇಶದಲ್ಲಿ ಅಭಿವೃದ್ಧಿಗೆ ಕೇಂದ್ರ ಸಚಿವ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅಡ್ಡಿಯಾಗುತ್ತಿದ್ದಾರೆ ಎಂದು ಆರೋಪಿಸಿದರು. ‘ರೆಡ್ ಝೋನ್’ ನಿರ್ಬಂಧವನ್ನು ತೆರವುಗೊಳಿಸುವಂತೆ ರೈತರು ಮಾಡುತ್ತಿರುವ ಮನವಿಯನ್ನು ಕುಮಾರಸ್ವಾಮಿ ನಿರ್ಲಕ್ಷಿಸುತ್ತಿದ್ದಾರೆ ಎಂದು ದೂರಿದರು.

ರೈತ ಹರೀಶ್ ರೆಡ್ಡಿ, ಬೆಂಗಳೂರು ನಗರಕ್ಕೆ ಸಮೀಪದಲ್ಲಿದ್ದರೂ ಬಿಡದಿ ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂಬ ವಿಷಯವನ್ನು ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದರು.

ರೈತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಭೂಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆ ಹೊರಡಿಸುವ ಭರವಸೆ ನೀಡಿದರು.

ಈ ವೇಳೆ, ಜಮೀನು ಬಿಟ್ಟುಕೊಡುವಂತೆ ರೈತರ ಮೇಲೆ ಒತ್ತಡ ಹೇರುವುದಿಲ್ಲ ಎಂದು ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು.

ಶೀಘ್ರ ಅಧಿಸೂಚನೆ

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಜಮೀನು ನೀಡಲು ಸ್ವಯಂಪ್ರೇರಣೆಯಿಂದ ಒಪ್ಪುವ ರೈತರಿಂದ ಮಾತ್ರ ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ನೂರಾರು ರೈತರು ತಮ್ಮನ್ನು ಭೇಟಿ ಮಾಡಿ, ಅಂತಿಮ ಅಧಿಸೂಚನೆ ಹೊರಡಿಸಿದ ಬಳಿಕ ತಮ್ಮ ಜಮೀನುಗಳನ್ನು ಬಿಟ್ಟುಕೊಡಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.

ಪರಿಹಾರದ ಒಂದು ಭಾಗವನ್ನು ನಗದು ರೂಪದಲ್ಲಿ ಹಾಗೂ ಉಳಿದ ಭಾಗವನ್ನು ಜಮೀನಿನ ರೂಪದಲ್ಲಿ ಸ್ವೀಕರಿಸಲು ಸಿದ್ಧರಿರುವುದಾಗಿ ಹೇಳಿದರು. ಈ ವಿಚಾರವನ್ನು ಅಧಿಕಾರಿಗಳೊಂದಿಗೆ ಚರ್ಚಿಸಿ, ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇರುವ ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸುತ್ತೇನೆ. ಸ್ವಯಂಪ್ರೇರಣೆಯಿಂದ ಜಮೀನು ನೀಡಲು ಒಪ್ಪುವವರಿಂದ ಮಾತ್ರ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು. ಯಾರ ಮೇಲೂ ಒತ್ತಡ ಹೇರುವುದಿಲ್ಲ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com