

ಬೆಂಗಳೂರು: ತಮಿಳುನಾಡಿಗೆ ಕರ್ನಾಟಕ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಅಖಂಡ ಕರ್ನಾಟಕ ಬಂದ್‌ಗೆ ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಇಂದು ಬೆಳಗ್ಗೆಯಿಂದಲೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕನ್ನಡಿಗರ ಹಿತರಕ್ಷಣೆಯ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದ್‌ಗೆ ಕರೆ ನೀಡಲಾಗಿದ್ದರೂ, ಸಾರ್ವಜನಿಕರು ಹಾಗೂ ಪ್ರಮುಖ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಜನಜೀವನ ಎಂದಿನಂತೆ ಸಹಜವಾಗಿದೆ.
ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕ ಸಾರಿಗೆ ಎಂದಿನಂತೆ ಸಂಚರಿಸುತ್ತಿದೆ. ಸಾರ್ವಜನಿಕರಿಂದ ಬೇರೆ ವಾಹನಗಳು ಕೂಡ ಲಭ್ಯವಾಗುತ್ತಿವೆ. ಶಾಲೆ- ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಲು ಹಾಗೂ ವೈದ್ಯಕೀಯದಂತಹ ತುರ್ತು ಸೇವೆಗಳು ಎಂದಿನಂತೆ ಲಭ್ಯವಿವೆ.
ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘ ಹಾಗೂ ಕರುನಾಡ ಸೇನೆ ಸೇರಿದಂತೆ ಕೆಲವು ಒಕ್ಕೂಟಗಳು ನೇರ ಬೆಂಬಲ ಸೂಚಿಸಿವೆ. ಆದರೆ, ಕರವೇ ನಾರಾಯಣ ಗೌಡ ಬಣ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಶಾಲೆಗಳ ಒಕ್ಕೂಟಗಳು ಬಂದ್‌ನಿಂದ ದೂರ ಉಳಿದಿವೆ. ಇನ್ನು ಓಲಾ - ಊಬರ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಫಿಲಂ ಚೇಂಬರ್ ಸೇರಿದಂತೆ ಹಲವು ಸಂಸ್ಥೆಗಳು ಬಂದ್‌ಗೆ ಕೇವಲ ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿ, ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿವೆ.
ಮೈಸೂರು, ಮಂಡ್ಯ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ
ಕಾವೇರಿ ನದಿಯೇ ಜೀವನಾಡಿಯಾಗಿರುವ ಮಂಡ್ಯ ಹಾಗೂ ಮೈಸೂರಲ್ಲಿಯೂ ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡ್ಯದಲ್ಲಿ ಸಾರಿಗೆ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟು ಬಂದ್ ಆಗಿವೆ, ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಮೈಸೂರಲ್ಲಿ ಪ್ರತಿಭಟನೆಗಳು ಮಾತ್ರ ನಡೆಯುತ್ತಿವೆ.
ಮೈಸೂರಿಂದ ಬೇರೆ ಬೇರೆ ಊರುಗಳಿಗೆ ಸಂಪರ್ಕ ಇರುವ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಬಸ್‌ಗಳ ಸಂಚಾರ ಎಂದಿನಂತೆ ಇವೆ. ಮಳೆ ಬಂದು ಜಲಾಶಯದಲ್ಲಿ ನೀರು ತುಂಬಿದ್ದರಿಂದ ಅನೇಕ ಸಂಘಟನೆಗಳು ಬಂದ್ ನಿಂದ ಹಿಂದೆ ಸರಿದಿವೆ.
ಪೊಲೀಸರು ಮುಂಜಾಗೃತೆ ಕ್ರಮವಾಗಿ ಬಿಗಿ ಬಂದೋಬಸ್ತ್ ವಹಿಸಿದ್ದಾರೆ. ರಾಜ್ಯ ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಯುತ್ತಿದೆ. ಆದರೆ ಹೋಟೆಲ್, ವರ್ತಕರ ಸಂಘ ಹಾಗೂ ಕಾರ್ಮಿಕರು, ಆಟೋ-ಕ್ಯಾಬ್ ಚಾಲಕರ ಸಂಘದಿಂದ ನೈತಿಕ ಬೆಂಬಲ ಮಾತ್ರ ಕೊಡಲಾಗಿದೆ.
ಮಂಡ್ಯ ಜಿಲ್ಲಾಡಳಿತ ಮದ್ಯ ಮಾರಾಟಕ್ಕೆ ನಿಷೇಧ
ಕಾವೇರಿ ನೀರಿನ ವಿಚಾರವಾಗಿ ಇಂದು ರಾಜ್ಯಾದ್ಯಂತ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತವು ಮದ್ಯ ಮಾರಾಟದ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ್ದು, ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.
ಮುಂಜಾಗ್ರತಾ ಕ್ರಮವಾಗಿ ಕೆ.ಆರ್. ಪೇಟೆ, ಶ್ರೀರಂಗಪಟ್ಟಣ, ಮದ್ದೂರು ಹಾಗೂ ಮಂಡ್ಯ ತಾಲೂಕುಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಎಲ್ಲಾ ಬಗೆಯ ಮದ್ಯದಂಗಡಿಗಳು, ಬಾರ್‌ಗಳು ಹಾಗೂ ರೆಸ್ಟೋರೆಂಟ್‌ಗಳನ್ನು ಬಂದ್ ಇಡುವಂತೆ ಸೂಚಿಸಲಾಗಿದೆ. ಅಲ್ಲದೆ, ಇಂದು ಜಿಲ್ಲೆಯಲ್ಲಿ ಮದ್ಯದ ಮಾರಾಟ, ಸಾಗಣೆ ಹಾಗೂ ದಾಸ್ತಾನಿಗೂ ಜಿಲ್ಲಾಧಿಕಾರಿ ನಿರ್ಬಂಧ ವಿಧಿಸಿದ್ದಾರೆ.
ಮಂಡ್ಯ ನಗರದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ನಡೆಯುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ಸಂಜಯ್ ವೃತ್ತದಲ್ಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಬಂದ್ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸ್ಥಳೀಯ ಪೊಲೀಸರು, ಡಿಎಆರ್ ಹಾಗೂ ಕೆಎಸ್‌ಆರ್‌ಪಿ ತುಕಡಿಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.