

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಕೋರ್ಟ್ ನಲ್ಲಿ ಮತ್ತೊಮ್ಮೆ ಭಾರೀ ಹಿನ್ನಡೆಯಾಗಿದ್ದು, ಖುದ್ದು ಹಾಜರಿ ಕೋರಿದ್ದ ಅರ್ಜಿಯನ್ನು ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಪ್ರಕರಣದ ವಿಚಾರಣೆಯಲ್ಲಿ ತಮಗೆ ವಿಡಿಯೋ ಕಾನ್ಫರೆನ್ಸ್ ಬದಲು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಲು ಅವಕಾಶ ನೀಡಬೇಕು ಎಂದು ಕೋರಿ ನಟ ದರ್ಶನ್ ಅವರು ಮನವಿ ಸಲ್ಲಿಸಿದ್ದರು. ಆದರೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇಂದು ವಜಾಗೊಳಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಆರೋಪಿಗಳ ಸೂಚನೆ ನೀಡಿದೆ.
ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ಖುದ್ದು ಹಾಜರುಪಡಿಸಿದರೆ ಸಾಕ್ಷ್ಯ ವಿಚಾರಣೆ ವೇಳೆ ಸೂಚನೆ ಪಡೆಯಲು ಅನುಕೂಲ ಆಗುತ್ತದೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಎಸ್ಪಿಪಿ ಪ್ರಸನ್ನ ಕುಮಾರ್ ಆಕ್ಷೇಪ ತೀವ್ರ ವ್ಯಕ್ತಪಡಿಸಿದ್ದರು.
‘ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿಗೆ ಕಾನೂನಿನಲ್ಲೇ ಅವಕಾಶವಿದೆ. ದರ್ಶನ್ ಅವರನ್ನು ಖುದ್ದು ಹಾಜರುಪಡಿಸಿದರೆ ಕೋರ್ಟ್ ಕಲಾಪಕ್ಕೆ ಅಡ್ಡಿಯಾಗಬಹುದು. ಆದ್ದರಿಂದ ಖುದ್ದು ಹಾಜರಿ ಅಗತ್ಯವಿಲ್ಲ’ ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದ್ದರು.
ವಾದ, ಪ್ರತಿವಾದ ಆಲಿಸಿದ್ದ ನ್ಯಾಯಾದೇಶೆ ಸುಜಾತಾ ಮಡಿವಾಳಪ್ಪ ಸಾಂಬ್ರಾಣಿ ಅವರು ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಆದೇಶ ಪ್ರಕಟಿಸಿದ್ದು, ದರ್ಶನ್ ಅರ್ಜಿಯನ್ನು ವಜಾಗೊಳಿಸಿದ್ದಾರೆ.