

ಪ್ರಧಾನಿ ನರೇಂದ್ರ ಮೋದಿ ಅವರ PM CARES ನಿಧಿಯು ಸಾರ್ವಜನಿಕರ ವಿಶ್ವಾಸಕ್ಕೆ ಮಾಡಿದ ಅತಿದೊಡ್ಡ ಸಾಂಸ್ಥಿಕ ವಂಚನೆ ಹಾಗೂ ದ್ರೋಹಗಳಲ್ಲಿ ಒಂದಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ತುರ್ತು ಪರಿಹಾರಕ್ಕಾಗಿ ದೇಶೀಯ ಹಾಗೂ ವಿದೇಶಿ ದಾನಿಗಳಿಂದ ಹಣ ಸಂಗ್ರಹಿಸುತ್ತಿರುವ ಮೋದಿ ಸರ್ಕಾರ, ಅಗತ್ಯದ ಸಂದರ್ಭದಲ್ಲಿ ಅದನ್ನು ಖರ್ಚು ಮಾಡುವ ಉದ್ದೇಶವೇ ಹೊಂದಿಲ್ಲದಿದ್ದರೆ, ಏಕೆ ಹಣ ಸಂಗ್ರಹಿಸುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದಾರೆ.
2024-25ನೇ ಸಾಲಿನ PM CARES ನಿಧಿಯ ಲೆಕ್ಕಪರಿಶೋಧನಾ ವರದಿಯ ಪ್ರಕಾರ, ಲಭ್ಯವಿದ್ದ 8,452 ಕೋಟಿಯಲ್ಲಿ ಕೇವಲ 0.01 ಪ್ರತಿಶತದಷ್ಟು ಹಣವನ್ನು ಮಾತ್ರ ಬಳಸಲಾಗಿದೆ.
ಕಾರ್ಯಾನುಷ್ಠಾನ ಸಂಸ್ಥೆಗಳು 324 ಕೋಟಿ ರೂಪಾಯಿಯನ್ನು ಹಿಂದಿರುಗಿಸಿರುವುದು ಸೇರಿದಂತೆ ಕೆಲವು ಅನುಮಾನಾಸ್ಪದ ನಮೂದುಗಳೂ ಇವೆ. ಈ ಸಂಸ್ಥೆಗಳು ಯಾರು ಅಥವಾ ಹಣವನ್ನು ಏಕೆ ಹಿಂದಿರುಗಿಸಲಾಗಿದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.
ಇನ್ನೂ ಹೆಚ್ಚು ಅನುಮಾನ ಮೂಡಿಸುವ ಸಂಗತಿಯೆಂದರೆ, ಹಣಕಾಸು ಹೇಳಿಕೆಗೆ ಸಂಬಂಧಿಸಿದ ಟಿಪ್ಪಣಿಗಳನ್ನು (Notes to Accounts) ಕೂಡ ಪ್ರಕಟಿಸಲಾಗಿಲ್ಲ ಎಂದು ಆರೋಪಿಸಿದ್ದಾರೆ.
PM CARES (Prime Minister’s Citizen Assistance and Relief in Emergency Situations) ನಿಧಿಗೆ 2024-25ನೇ ಸಾಲಿನಲ್ಲಿ 480 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಸುಮಾರು 30 ಶೇಕಡಾ ಇಳಿಕೆಯಾಗಿದೆ ಎಂದು ಲಭ್ಯವಾದ 2023-24 ಮತ್ತು 2024-25ನೇ ಸಾಲಿನ ಲೆಕ್ಕಪರಿಶೋಧಿತ ಹಣಕಾಸು ವಿವರಗಳು ತಿಳಿಸಿವೆ.
ಆದರೆ ನಿಧಿಯ ಒಟ್ಟು ಆದಾಯವು 1,279.9 ಕೋಟಿ ರೂಪಾಯಿಗೆ ಏರಿಕೆಯಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ.41ರಷ್ಟು ಹೆಚ್ಚಾಗಿದೆ. ಈ ದಾಖಲೆಗಳನ್ನು 2022-23ನೇ ಹಣಕಾಸು ವರ್ಷದ ಬಳಿಕ ವಾರ್ಷಿಕ ಹಣಕಾಸು ವಿವರಗಳನ್ನು ಅಪ್‌ಲೋಡ್ ಮಾಡದಿದ್ದ ಹಿನ್ನೆಲೆಯಲ್ಲಿ ಇದೀಗ ಬಿಡುಗಡೆ ಮಾಡಲಾಗಿದೆ.