'ಟೆಲಿಪ್ರಾಂಪ್ಟರ್ ಇಲ್ಲದೆ ಸಂಪೂರ್ಣ 'ವಂದೇ ಮಾತರಂ' ಹಾಡಿದರೆ ನಾನು ರಾಜೀನಾಮೆ ನೀಡುತ್ತೇನೆ': ಮೋದಿ, ಶಾಗೆ ಪ್ರಿಯಾಂಕ್ ಖರ್ಗೆ ಸವಾಲು

ಜಂತರ್ ಮಂತರ್‌ ಪ್ರತಿಭಟನೆ, ಆರ್‌ಎಸ್‌ಎಸ್ ಕುರಿತಾದ ಅನುಮಾನಗಳು, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವೇ 'ವಂದೇ ಮಾತರಂ' ವಿವಾದವಾಗಿದೆ ಎಂದರು.
Priyank Kharge
ಪ್ರಿಯಾಂಕ್ ಖರ್ಗೆ
Updated on

ಬೆಂಗಳೂರು: ಪ್ರತಿಭಟನಾಕಾರರ ವಿರುದ್ಧ ಪೆಲೆಟ್ ಗನ್‌ ಬಳಕೆ ಕುರಿತು ಎಫ್‌ಐಆರ್ ದಾಖಲಿಸಲು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಪೊಲೀಸ್ ಠಾಣೆಯೊಂದರಲ್ಲಿ ಎಂಟು ಗಂಟೆಗಳ ಕಾಲ ಧರಣಿ ನಡೆಸಬೇಕಾದ ಪರಿಸ್ಥಿತಿ ಎದುರಾದ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, 'ಪೆಲೆಟ್ ಗನ್ ಮೂಲಕ ಗುಂಡು ಹಾರಿಸಿದ್ದು ಯಾರು ಎಂಬುದು ಎಲ್ಲರಿಗೂ ತಿಳಿದಿದ್ದರೂ, ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಾಡಲು ವಿರೋಧ ಪಕ್ಷದ ನಾಯಕರು ಸತತ ಎಂಟು ಗಂಟೆಗಳ ಕಾಲ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದ್ದು ಅತ್ಯಂತ ದುರದೃಷ್ಟಕರ. ದೆಹಲಿ ಪೊಲೀಸ್ ಠಾಣೆಯಲ್ಲಿ ಸಾಮಾನ್ಯ ಮನುಷ್ಯನಿಗೆ ನ್ಯಾಯ ಪಡೆಯಲು ಅವಕಾಶವಿಲ್ಲದಿರುವುದು ವಿಷಾದನೀಯ. ಕೇವಲ ದೂರು ದಾಖಲಿಸಲು ರಾಹುಲ್ ಗಾಂಧಿಯವರ ಮಧ್ಯಪ್ರವೇಶದ ಅಗತ್ಯವಿದ್ದರೆ, ಅಶ್ರುವಾಯು ಮತ್ತು ಪೆಲೆಟ್ ಗನ್ ದಾಳಿಗೆ ಒಳಗಾದ ಸಾಮಾನ್ಯ ನಾಗರಿಕರ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಊಹಿಸಿಕೊಳ್ಳಿ' ಎಂದು ಹೇಳಿದರು.

'ಬಿಜೆಪಿಗೆ ಸ್ವಲ್ಪವಾದರೂ ನಾಚಿಕೆಯಿದ್ದಿದ್ದರೆ, ಅವರು ಆಗಲೇ ಸ್ವತಂತ್ರ ತನಿಖೆಗೆ ಆದೇಶಿಸುತ್ತಿದ್ದರು; ಆದರೆ ಅವರು ತಪ್ಪು ಮಾಡಿದವರಾಗಿರುವುದರಿಂದ ಅವರಿಗೆ ಅದರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಸದ್ಯಕ್ಕೆ ಅಮಿತ್ ಶಾ ಮತ್ತು ಮೋದಿ ಅವರು ಎಷ್ಟು ವಿಚಲಿತರಾಗಿದ್ದಾರೆಂದರೆ, ಸಂಸತ್ತಿಗೆ ಬಂದು ಉತ್ತರಿಸುವ ಧೈರ್ಯವನ್ನೂ ಅವರು ತೋರಲಿಲ್ಲ. ಇನ್ನು ಎಫ್‌ಐಆರ್ ದಾಖಲಿಸುವ ಮಾತೆಲ್ಲಿ ಬಂತು?' ಎಂದು ಅವರು ಹೇಳಿದರು.

ಲೋಚಬ್ ಅವರ ದೂರಿನ ಮೇರೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಂಸತ್ ರಸ್ತೆ ಪೊಲೀಸ್ ಠಾಣೆಯಲ್ಲಿ ರಾಹುಲ್ ಗಾಂಧಿ ನಡೆಸಿದ ಧರಣಿ ನಡೆಸಿದ ನಂತರ, ಶುಕ್ರವಾರ ಸಂಜೆ ದೆಹಲಿ ಪೊಲೀಸರು ಅಂತಿಮವಾಗಿ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 118 ಮತ್ತು 125 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದರು.

ಜುಲೈ 20 ರಂದು ಕನ್ನಾಟ್ ಪ್ಲೇಸ್‌ನಲ್ಲಿ ಪೆಲೆಟ್ ಗನ್ ದಾಳಿಯಿಂದಾಗಿ ಗಾಯಗೊಂಡಿದ್ದರೂ, ತನ್ನ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದರು. ತಾವು ಏಮ್ಸ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ, ತಮ್ಮ ದೃಷ್ಟಿಶಕ್ತಿಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ಹೇಳಿಕೊಂಡಿದ್ದರು.

Priyank Kharge
'ವಂದೇ ಮಾತರಂ ವಿರೋಧಿಸುವವರು ದೇಶ ಬಿಟ್ಟು ಹೋಗಿ; ಸೋನಿಯಾ- ರಾಹುಲ್ ಗಾಂಧಿ ಮುಸ್ಲಿಮರ ಜೊತೆ ತೊಲಗಿ; ಸಂಸದ ಮಸೂದ್ ನಂತವರನ್ನು ಗುಂಡಿಕ್ಕಿ ಕೊಲ್ಲಿ'

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ, 'ವಂದೇ ಮಾತರಂ' ಕುರಿತಾದ ವಿವಾದವು ತುರ್ತು ಆರ್ಥಿಕ ಸಮಸ್ಯೆಗಳು, ನಿರುದ್ಯೋಗ ಮತ್ತು ಪ್ರತಿಭಟನಾನಿರತ ವಿದ್ಯಾರ್ಥಿಗಳ ವಿರುದ್ಧದ ಪೊಲೀಸ್ ಕ್ರಮದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಸೃಷ್ಟಿಸಲಾದ ಉದ್ದೇಶಪೂರ್ವಕ ತಂತ್ರವಾಗಿದೆ' ಎಂದರು.

'ಜಂತರ್ ಮಂತರ್‌ ಪ್ರತಿಭಟನೆ, ಆರ್‌ಎಸ್‌ಎಸ್ ಕುರಿತಾದ ಅನುಮಾನಗಳು, ನಿರುದ್ಯೋಗ ಮತ್ತು ಆರ್ಥಿಕ ಸಂಕಷ್ಟದಂತಹ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರವೇ 'ವಂದೇ ಮಾತರಂ' ವಿವಾದವಾಗಿದೆ. ಇಂದು ಡಾಲರ್ ಎದುರು ರೂಪಾಯಿಯ ಮೌಲ್ಯ ಎಷ್ಟಿದೆ? 98 ರೂಪಾಯಿ. ಅವರು ಮಾಡುತ್ತಿರುವುದು ಇದನ್ನೇ. ಅಮೆರಿಕದಿಂದ 500 ಶತಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಖರೀದಿಸಬೇಕಾದ ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದದ ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇವೆಲ್ಲವನ್ನೂ ಮಾಡಲಾಗುತ್ತಿದೆ. ಒಂದು ಎಫ್‌ಐಆರ್ ದಾಖಲಿಸುವುದು 'ವಂದೇ ಮಾತರಂ' ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವೇ? ಮತ್ತು ನಮಗೆ 'ವಂದೇ ಮಾತರಂ' ಬಗ್ಗೆ ಪಾಠ ಮಾಡಲು ಇವರು ಯಾರು? ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಎಲ್ಲಿ ಇದ್ದವು? 1937ರಲ್ಲಿ ಪಂಡಿತ್ ನೆಹರು, ನೇತಾಜಿ ಬೋಸ್, ರವೀಂದ್ರನಾಥ ಟ್ಯಾಗೋರ್ ಮತ್ತು ಸರ್ದಾರ್ ವಲ್ಲಭಬಾಯ್ ಪಟೇಲ್ ಅವರು ಈ ಬಗ್ಗೆ ಚರ್ಚಿಸಿದಾಗ, ಸಂವಿಧಾನ ರಚನಾ ಸಭೆಯಲ್ಲೂ ಇದರ ಬಗ್ಗೆ ಚರ್ಚೆ ನಡೆದಿತ್ತು. ಹಾಗಾದರೆ, ಇವರೆಲ್ಲರೂ ದೇಶವಿರೋಧಿಗಳೇ?' ಎಂದು ಪ್ರಶ್ನಿಸಿದರು.

'ಅವರು ನಿಜವಾಗಿಯೂ ದೇಶಭಕ್ತರಾಗಿದ್ದರೆ, ಅಮಿತ್ ಶಾ ಮತ್ತು ಪ್ರಧಾನಿ ಮೋದಿ ನಾಗಪುರಕ್ಕೆ ಹೋಗಿ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ 'ನಮಸ್ತೆ ಸದಾ ವತ್ಸಲೆ' ಕೈಬಿಡುವಂತೆ ಹಾಗೂ ಎಲ್ಲ ಆರ್‌ಎಸ್‌ಎಸ್ ಶಾಖೆಗಳಲ್ಲಿ ತ್ರಿವರ್ಣ ಧ್ವಜದ ಮುಂದೆ ಕೈಮುಗಿದು 'ವಂದೇ ಮಾತರಂ' ಹಾಡುವುದನ್ನು ಖಚಿತಪಡಿಸುವಂತೆಯೂ ಹೇಳಲಿ. ಟೆಲಿಪ್ರಾಂಪ್ಟರ್ ಸಹಾಯವಿಲ್ಲದೆ ನಮ್ಮ ರಾಷ್ಟ್ರಗೀತೆಯನ್ನು - ಅದರ ಕೊನೆಯ ಎರಡು ಚರಣಗಳನ್ನೂ ಒಳಗೊಂಡಂತೆ - ಪೂರ್ತಿಯಾಗಿ ಹಾಡುವಂತೆ ನಾನು ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ಇಡೀ ಬಿಜೆಪಿ ಸಂಪುಟಕ್ಕೆ ಸವಾಲು ಹಾಕುತ್ತೇನೆ; ಅವರು ಹಾಗೆ ಮಾಡಲು ಸಾಧ್ಯವಾದರೆ ನಾನು ರಾಜೀನಾಮೆ ನೀಡುತ್ತೇನೆ' ಎಂದು ಹೇಳಿದರು.

ಮಾಜಿ ಸಚಿವ ಬಿ ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸಿಬಿಐ ಅನುಮತಿ ಕೋರಿದೆ ಎಂಬ ವರದಿಗಳ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಖರ್ಗೆ, 'ಸಿಬಿಐ ಯಾವ ಆಧಾರದ ಮೇಲೆ ಈ ಕ್ರಮಕ್ಕೆ ಮುಂದಾಗಿದೆ ಎಂಬುದು ನಮಗೆ ತಿಳಿದಿಲ್ಲ. ಅವರು ಮೊದಲು ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕಿತ್ತು. ಕಾನೂನು ಕ್ರಮಕ್ಕೆ ಅನುಮತಿ ಕೋರುವ ಯಾವುದೇ ಮನವಿ ನಮಗೆ ಬಂದಿಲ್ಲ. ತನಿಖೆಗಾಗಿ ಸಿಬ್ಬಂದಿಯನ್ನು ಒದಗಿಸುವಂತೆ ಅವರು ಈ ಹಿಂದೆ ಪತ್ರ ಬರೆದಿದ್ದರು ಅಷ್ಟೇ' ಎಂದು ಅವರು ಹೇಳಿದರು.

ಕರ್ನಾಟಕದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಟೀಕಿಸಿದ ಸಚಿವರು, ರಾಜ್ಯ ವಿಧಾನಸಭೆಯಲ್ಲಿ ಅರ್ಥಪೂರ್ಣ ಚರ್ಚೆಗಳಿಂದ ದೂರ ಉಳಿಯುವ ಉದ್ದೇಶದಿಂದ ಹಾಗೂ ಪಕ್ಷದೊಳಗಿನ ಭಿನ್ನಾಭಿಪ್ರಾಯ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ನಡುವಿನ ನಾಯಕತ್ವದ ಸಂಘರ್ಷವನ್ನು ಮುಚ್ಚಿಹಾಕಲು ವಿರೋಧ ಪಕ್ಷವು ಈ ಪಾದಯಾತ್ರೆಯನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಕಾಣೆಯಾಗಿರುವ ಐಎಎಸ್ ಅಧಿಕಾರಿ ಕುರಿತಾದ ವರದಿಗಳ ಬಗ್ಗೆ ಮಾತನಾಡಿದ ಖರ್ಗೆ, 'ಅವರ ಕುಟುಂಬದಿಂದ ಯಾವುದೇ ದೂರು ಬಂದಿಲ್ಲ. ಅವರನ್ನು ಕೊನೆಯದಾಗಿ ವಿಮಾನ ನಿಲ್ದಾಣದಲ್ಲಿ ನೋಡಲಾಗಿತ್ತು. ಸದ್ಯ ಅವರ ಇರುವಿಕೆ ಬಗ್ಗೆ ಮಾಹಿತಿ ಇಲ್ಲ ಮತ್ತು ಶೋಧ ಕಾರ್ಯ ನಡೆಯುತ್ತಿದೆ' ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com