

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆ, ಲಕ್ಷಾಂತರ ಜನರ ಕಣ್ಣು ಚಿನ್ನದ ಅಂಬಾರಿಯ ಮೇಲೆ ನೆಟ್ಟಿರುತ್ತದೆ. ಅದರಲ್ಲೂ, ಹಲವು ವರ್ಷಗಳ ಕಾಲ ಯಶಸ್ವಿಯಾಗಿ ತಾಯಿ ಚಾಮುಂಡೇಶ್ವರಿಯ ವಿಗ್ರಹ ಹೊತ್ತಿದ್ದ ಕೂಂಬಿಂಗ್ ಸ್ಟಾರ್ ಅಭಿಮನ್ಯು ನಿವೃತ್ತಿಯ ಬಳಿಕ, ಈ ಬಾರಿಯ ಗಜಪಡೆಯ ಹೊಸ ಸಾರಥಿ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆಮಾಡಿದೆ. ಇದರೊಂದಿಗೆ, ಈ ಬಾರಿಯ ದಸರಾದಲ್ಲಿ ಯಂಗ್ ಹೀರೋ ಭೀಮ ಆನೆ ಬರುತ್ತಾ ಎನ್ನುವುದರ ಕುರಿತ ಊಹಾಪೋಹಗಳಿಗೂ ಅರಣ್ಯ ಇಲಾಖೆ ಉತ್ತರ ಕೊಟ್ಟಿದೆ! ಆ ಕುರಿತ ವರದಿ ಇಲ್ಲಿದೆ:
ಕ್ಯಾಪ್ಟನ್ ಅಭಿಮನ್ಯು ನಿವೃತ್ತಿ
ಕಳೆದ 6 ವರ್ಷಗಳಿಂದ (2020 ರಿಂದ) ಸತತವಾಗಿ ಯಶಸ್ವಿಯಾಗಿ 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದ ಅಭಿಮನ್ಯು ಆನೆಗೆ ಈ ಬಾರಿ ವಿಶ್ರಾಂತಿ ನೀಡಲಾಗಿದೆ. ಸರಕಾರದ ನಿಯಮಾವಳಿಗಳ ಪ್ರಕಾರ ಆನೆಗಳಿಗೆ 60 ವರ್ಷ ತುಂಬಿದ ನಂತರ ದಸರಾದ ಕಠಿಣ ಜವಾಬ್ದಾರಿಗಳಿಂದ ಬಿಡುಗಡೆ ನೀಡಬೇಕಾಗುತ್ತದೆ. ಅದರಂತೆ, ಅಭಿಮನ್ಯುಗೆ ಈಗ 60 ವರ್ಷ ದಾಟಿರುವುದದು ಹಾಗೂ ಶಿಬಿರದಲ್ಲಿ ದಂತ ಮುರಿದ ಕಾರಣ ಆತನನ್ನು ಈ ಬಾರಿಯ ಅಂಬಾರಿ ಹೊರುವ ಆನೆಯ ಪಟ್ಟಿಯಿಂದ ಕೈಬಿಡಲಾಗಿದೆ. ಇದರ ನಡುವೆ, ಹೊಸ ಕ್ಯಾಪ್ಟನ್ ಆಯ್ಕೆ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ಮಾಹಿತಿ ಹಂಚಿಕೊಂಡಿದ್ದಾರೆ. ಅದರಂತೆ, ಅಭಿಮನ್ಯು ಉತ್ತರಧಿಕಾರಿ ಆಯ್ಕೆ ಚಿನ್ನದ ಅಂಬಾರಿ ಹೊರಲು 4 ಪ್ರಮುಖ ಆನೆಗಳ ನಡುವೆ ಒಂದನ್ನು ಆಯ್ಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇವರೆನಾ ಮುಂದಿನ ಕ್ಯಾಪ್ಟನ್?
ಅಭಿಮನ್ಯುವಿನ ನಿವೃತ್ತಿಯ ಬಳಿಕ ಮುಂದಿನ 'ಕ್ಯಾಪ್ಟನ್' ಪಟ್ಟಕ್ಕಾಗಿ ಹಾಗೂ ಚಿನ್ನದ ಅಂಬಾರಿಯನ್ನು ಹೊರಲು 4 ಪ್ರಮುಖ ಆನೆಗಳ ನಡುವೆ ತೀವ್ರ ಪೈಪೋಟಿ ನಡೆದಿದೆ:
ಧನಂಜಯ (45 ವರ್ಷ): ದಸರಾ ಮಹೋತ್ಸವದಲ್ಲಿ 8 ವರ್ಷಗಳಿಗೂ ಹೆಚ್ಚು ಕಾಲ ಪಾಲ್ಗೊಂಡಿರುವ ಅನುಭವ ಹೊಂದಿದ್ದು, ಸದ್ಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾನೆ.
ಮಹೇಂದ್ರ (42 ವರ್ಷ): ಶಾಂತ ಸ್ವಭಾವದ ಮತ್ತು ಬಲಿಷ್ಠವಾದ ಆನೆಯಾಗಿದ್ದು, ಅಂಬಾರಿ ಹೊರಲು ಸೂಕ್ತ ಅಭ್ಯರ್ಥಿ ಎನ್ನಲಾಗುತ್ತಿದೆ.
ಪ್ರಶಾಂತ (54 ವರ್ಷ): ಬರೋಬ್ಬರಿ 18 ವರ್ಷಗಳ ಕಾಲ ದಸರಾದಲ್ಲಿ ಭಾಗವಹಿಸಿದ ಸುದೀರ್ಘ ಅನುಭವ ಈ ಆನೆಗಿದೆ.
ಏಕಲವ್ಯ (41 ವರ್ಷ): ಈ ಬಲಿಷ್ಠ ಆನೆಯೂ ಕೂಡ ತಾಲೀಮಿನಲ್ಲಿ ಭಾಗವಹಿಸಿ ತನ್ನ ಸಾಮರ್ಥ್ಯ ಸಾಬೀತುಪಡಿಸಲು ಸಜ್ಜಾಗಿದೆ.
ಮುಂದುವರೆದು ಮಾತನಾಡಿದ CFO ಎಸ್.ಎಸ್. ರವಿಶಂಕರ್, ಚಿನ್ನದ ಅಂಬಾರಿ ಹೊರಲು ತಾಲೀಮಿಗೆ ಆಯ್ಕೆಯಾಗಿರುವ ಆನೆಗಳಲ್ಲಿ ಧನಂಜಯ ಮೊದಲ ಆಯ್ಕೆಯಾಗಿದ್ದರೆ, ಮಹೇಂದ್ರ ಎರಡನೇ ಆಯ್ಕೆಯಾಗಿ ಮತ್ತು ಏಕಲವ್ಯ ಮೂರನೇ ಆಯ್ಕೆಯಾಗಿ ಪರಿಗಣನೆಗೆ ಬಂದಿವೆ. ಆದರೆ, ಕಠಿಣ ತಾಲೀಮಿನ ನಂತರವೇ ಅಂತಿಮ ನಿರ್ಧಾರವಾಗಲಿದೆ. ಆಯ್ಕೆ ಪ್ರಕ್ರಿಯೆಗಾಗಿ ಈ ನಾಲ್ಕೂ ಆನೆಗಳಿಗೆ ಮರಳು ಮೂಟೆ ತಾಲೀಮು, ಮರದ ಅಂಬಾರಿ ಹೊರುವ ಅಭ್ಯಾಸ, ಫಿರಂಗಿ ಸಿಡಿಮದ್ದು ತಾಲೀಮು ಮತ್ತು ಜಂಬೂಸವಾರಿ ಮಾರ್ಗದಲ್ಲಿ ರಿಹರ್ಸಲ್ ನಡೆಸಲಾಗುತ್ತದೆ. ಈ ಎಲ್ಲ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಮಚಿತ್ತ ಮತ್ತು ದೃಢತೆ ತೋರುವ ಗಜರಾಜನಿಗೆ ಚಿನ್ನದ ಅಂಬಾರಿ ಹೊರುವ ಸುವರ್ಣಾವಕಾಶ ಸಿಗಲಿದೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತನಾಗಿದ್ದರೂ, 2026ರ ದಸರೆಯಲ್ಲಿ ಅಭಿಮನ್ಯು ನಿಶಾನೆ ಆನೆಯಾಗಿ ಭಾಗವಹಿಸಲಿದ್ದಾನೆ. ಈ ನಿರ್ಧಾರವು ಅಭಿಮನ್ಯುಗೆ ನೀಡುವ ಗೌರವಪೂರ್ವಕ ವಿದಾಯವಾಗಿದ್ದು, ಅದರಂತೆ, ಆತನ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಈ ಬಾರಿ ದಸರಾಗೆ ಬರ್ತನಾ ಭೀಮ?
ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವ ಕಿರಿಯ ಆನೆ ಭೀಮನಿಗೆ ಮದ ಬಂದಿರುವ ಕಾರಣ ಸದ್ಯ ಮೀಸಲು ಪಟ್ಟಿಯಲ್ಲಿ ಇರಿಸಲಾಗಿದೆ. ಮದ ಕಡಿಮೆಯಾದರೆ ಆತನನ್ನು ಎರಡನೇ ಹಂತದಲ್ಲಿ ಕರೆತರಬಹುದು ಎನ್ನಲಾಗಿದೆ. ಇನ್ನು, ಭೀಮನೊಂದಿಗೆ, ಹರ್ಷಆನೆಯನ್ನು ಕಾಯ್ದಿರಿಸಿದ ಆನೆಗಳಾಗಿ ಇಡಲಾಗಿದೆ.
ದಸರಾ 2026ರ ಗಜಪಡೆ ಪಟ್ಟಿ:
ದಸರಾ ಮಹೋತ್ಸವಕ್ಕಾಗಿ ನಾಗರಹೊಳೆಯ ವೀರನಹೊಸಹಳ್ಳಿಯಿಂದ ಆಗಸ್ಟ್ 26ರಂದು ಮೊದಲ ಹಂತದ ಗಜಪಯಣ ಆರಂಭವಾಗಲಿದೆ. ಆಗಸ್ಟ್ 28ರಂದು ಶುಭ ತುಲಾ ಲಗ್ನದಲ್ಲಿ ಆನೆಗಳು ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಪ್ರವೇಶಿಸಲಿವೆ. ಮೊದಲ ತಂಡದಲ್ಲಿ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಕಾವೇರಿ, ಮಹೇಂದ್ರ, ಲಕ್ಷ್ಮೀ ಹಾಗೂ ಏಕಲವ್ಯ ಆಗಮಿಸಲಿದ್ದು, ಎರಡನೇ ತಂಡದಲ್ಲಿ ರೂಪ, ಚೈತ್ರಾ ಮತ್ತು ಶ್ರೀಕಂಠ ಬರಲಿದ್ದಾರೆ. ಇನ್ನು, ಅರಮನೆ ನಗರಿಗೆ ಆಗಮಿಸುವ ಗಜಪಡೆಯ 50 ದಿನಗಳ ಪೋಷಣೆ, ಆಹಾರ ಹಾಗೂ ನಿರ್ವಹಣೆಗಾಗಿ ಅರಣ್ಯ ಇಲಾಖೆಯು ಸರ್ಕಾರಕ್ಕೆ ₹2 ಕೋಟಿ ಅನುದಾನದ ಪ್ರಸ್ತಾವನೆ ಸಲ್ಲಿಸಿದೆ.