ನಾಗೇಂದ್ರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು: ‘ಸಾಕ್ಷ್ಯವಿದ್ದರೆ ಸದನದ ಮುಂದಿಡಿ, ಚರ್ಚಿಸೋಣ; ಸಿಎಂ ಡಿಕೆ.ಶಿವಕುಮಾರ್

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಸರ್ಕಾರಕ್ಕೂ ಅದರಲ್ಲಿ ಯಾವುದೇ ತಕರಾರಿಲ್ಲ. ಪ್ರತಿಭಟನೆಗೂ ಮುನ್ನ ಸಭಾಪತಿಗೆ ನೋಟಿಸ್ ನೀಡಿ, ನಾಗೇಂದ್ರ ಅವರ ವಿಚಾರವನ್ನು ಸದನದಲ್ಲಿ ಚರ್ಚಿಸಿ, ವಿಷಯವನ್ನು ಜನರ ಮುಂದಿಡುವಂತೆ ಪ್ರತಿಪಕ್ಷಕ್ಕೆ ಮನವಿ ಮಾಡಿದರು.
Shivakumar defends B Nagendra
ಬಿ. ನಾಗೇಂದ್ರ ಜೊತೆಗೆ ಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಡುವೆ ಮತ್ತೆ ವಾಕ್ಸಮರ ತೀವ್ರಗೊಂಡಿದೆ.

ಸಚಿವ ಬಿ. ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಡುವಂತೆ ಪ್ರತಿಪಕ್ಷ ಸದಸ್ಯರು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪಗಳಿಗೆ ಸದನದಲ್ಲೇ ಚರ್ಚೆಯ ಮೂಲಕ ಉತ್ತರ ಪಡೆಯುವಂತೆ ಪ್ರತಿಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.

“ನಾಗೇಂದ್ರ ವಿರುದ್ಧ ನಿಮ್ಮ ಬಳಿ ಇರುವ ಸಾಕ್ಷ್ಯವೇನು ಎಂಬುದನ್ನು ಸದನದ ಮುಂದೆ ಮಂಡಿಸಿ” ಎಂದು ಡಿಕೆಶಿ ಸವಾಲು ಹಾಕಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಎಲ್ಲರಿಗೂ ಇದೆ. ಸರ್ಕಾರಕ್ಕೂ ಅದರಲ್ಲಿ ಯಾವುದೇ ತಕರಾರಿಲ್ಲ. ಪ್ರತಿಭಟನೆಗೂ ಮುನ್ನ ಸಭಾಪತಿಗೆ ನೋಟಿಸ್ ನೀಡಿ, ನಾಗೇಂದ್ರ ಅವರ ವಿಚಾರವನ್ನು ಸದನದಲ್ಲಿ ಚರ್ಚಿಸಿ, ವಿಷಯವನ್ನು ಜನರ ಮುಂದಿಡುವಂತೆ ಪ್ರತಿಪಕ್ಷಕ್ಕೆ ಮನವಿ ಮಾಡಿದರು.

ಸಭಾಪತಿಗೆ ನೋಟಿಸ್ ನೀಡಿ. ನಾಗೇಂದ್ರ ಅವರ ಬಗ್ಗೆ ಚರ್ಚೆ ನಡೆಸಿ. ಈ ವಿಚಾರವನ್ನು ಜನರ ಮುಂದಿಡಿ. ನೀವು ಯಾವುದೇ ನೋಟಿಸ್ ನೀಡುತ್ತಿಲ್ಲ. ಸದನದ ಬಾವಿಗೆ ಬಂದು ಪ್ರತಿಭಟನೆಯನ್ನೂ ಮಾಡುತ್ತಿಲ್ಲ, ಚರ್ಚೆಯನ್ನೂ ನಡೆಸುತ್ತಿಲ್ಲ ಎಂದು ಹೇಳಿದರು.

ಇದೇ ವೇಳೆ ನಾಗೇಂದ್ರ ವಿರುದ್ಧ ಪ್ರತಿಪಕ್ಷದ ಬಳಿ ಇರುವ ಸಾಕ್ಷ್ಯ ಹಾಗೂ ಮಾಹಿತಿಗಳೇನು ಎಂದು ಪ್ರಶ್ನಿಸಿದ ಅವರು, ನಾಗೇಂದ್ರ ಏಕೆ ರಾಜೀನಾಮೆ ನೀಡಬೇಕು? ನೀವು ಏನು ಬಯಲಿಗೆಳೆದಿದ್ದೀರಿ? ಸಿಬಿಐ, ಇಡಿ ಹಾಗೂ ಎಸ್‌ಐಟಿ ತನಿಖೆಯಲ್ಲಿ ಏನು ಪತ್ತೆಯಾಗಿದೆ ಎಂಬುದನ್ನು ಸದನಕ್ಕೂ ಜನರಿಗೂ ತಿಳಿಸಿ” ಎಂದು ಸವಾಲು ಹಾಕಿದರು.

ಬಳಿಕ ಆರೋಪಗಳಿಗೆ ಸರ್ಕಾರ ಉತ್ತರಿಸಲಿದೆ ಎಂದು ಭರವಸೆ ನೀಡಿದ ಡಿಕೆ.ಶಿವಕುಮಾರ್ ಅವರು, ನಾಗೇಂದ್ರ ಅವರನ್ನು ತಮ್ಮ ಸಂಪುಟಕ್ಕೆ ಏಕೆ ಸೇರ್ಪಡೆ ಮಾಡಿಕೊಂಡೆ ಎಂಬುದನ್ನೂ ವಿವರಿಸಬಹುದು ಎಂದು ಹೇಳಿದರು.

Shivakumar defends B Nagendra
ಗಣಿ ಹರಾಜು ಪಡೆದೂ ಗಣಿಗಾರಿಕೆ ಆರಂಭಿಸದವರ ಪಟ್ಟಿ ನೀಡಿ; ಅಧಿಕಾರಿಗಳಿಗೆ ಸಿಎಂ ಡಿಕೆ.ಶಿವಕುಮಾರ್ ಸೂಚನೆ

ಯಾವುದೇ ಚರ್ಚೆಯನ್ನೇ ನಡೆಸದೆ ನಾಗೇಂದ್ರ ಅವರನ್ನು ಭ್ರಷ್ಟರು ಎಂದು ಕರೆಯುವುದು, ಹಣ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಗೆ ಹೋಗಿದೆ ಎಂದು ಆರೋಪಿಸುವುದು ಹಾಗೂ ಸರ್ಕಾರವನ್ನೇ ಭ್ರಷ್ಟ ಎಂದು ಬಿಂಬಿಸುವುದು ಸರಿಯಲ್ಲ.

ಕೇಂದ್ರ ಸಚಿವರು ಹಾಗೂ ಮಾಜಿ ಸಚಿವರ ವಿರುದ್ಧವೂ ಪ್ರಕರಣಗಳು ದಾಖಲಾಗಿರುವುದನ್ನು ತಾನು ಹೇಳಬಹುದು. ಆದರೆ ಆ ವಿಚಾರ ಪ್ರಸ್ತಾಪಿಸಿದರೆ ಪ್ರತಿಪಕ್ಷಕ್ಕೆ ಬೇಸರವಾಗಬಹುದು ಎಂಬ ಕಾರಣಕ್ಕೆ ಹೆಸರುಗಳನ್ನು ಹೇಳುವುದಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ನಾಗೇಂದ್ರ ವಿರುದ್ಧ ಪ್ರತಿಪಕ್ಷಕ್ಕೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಗೇಂದ್ರ ಜಾಮೀನಿನ ಮೇಲೆ ಹೊರಗಿದ್ದಾರೆ, ಅವರ ವಿರುದ್ಧದ ಆರೋಪಗಳಿಂದ ನ್ಯಾಯಾಲಯ ಅವರನ್ನು ಖುಲಾಸೆಗೊಳಿಸಿಲ್ಲ ಎಂದರು.

ವಾಲ್ಮೀಕಿ ಸಮುದಾಯದ ಇತರ ನಾಯಕರನ್ನು ನಾಗೇಂದ್ರ ಬದಲಿಗೆ ಸಚಿವರನ್ನಾಗಿ ನೇಮಿಸಬಹುದು ಎಂದು ಹೇಳಿದ ನಾರಾಯಣಸ್ವಾಮಿ ಅವರು, ನಾಗೇಂದ್ರ ಅವರನ್ನು ಸಂಪುಟದಿಂದ ಕೈಬಿಟ್ಟ ಬಳಿಕ ಚರ್ಚೆಗೆ ಪ್ರತಿಪಕ್ಷ ಸಿದ್ಧವಿದೆ ಎಂದು ತಿಳಿಸಿದರು.

ಸದನದ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ಸದಸ್ಯರು ರಾಜ್ಯ ಸರ್ಕಾರ ಹಾಗೂ ಸಚಿವ ನಾಗೇಂದ್ರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸದನದ ಕಲಾಪ ಸುಗಮವಾಗಿ ನಡೆಯಲು ಸಹಕರಿಸುವಂತೆ ಸಭಾಪತಿ ಸಲೀಂ ಅಹ್ಮದ್ ಮನವಿ ಮಾಡಿದರೂ ಪ್ರತಿಪಕ್ಷದ ಪ್ರತಿಭಟನೆ ಮುಂದುವರಿಯಿತು.

ಇದಕ್ಕೂ ಮುನ್ನ, ಪ್ರಧಾನಿ ಮೋದಿ ಅವರನ್ನು ಟೀಕಿಸುವ ಸಂದರ್ಭದಲ್ಲಿ ದಲಿತ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಆರೋಪಿಸಿ ಸಚಿವ ವಿಜಯಾನಂದ ಕಾಶಪ್ಪನವರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ನಾರಾಯಣಸ್ವಾಮಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com