3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಗದ್ದಲದ ಹಿನ್ನಲೆಯಲ್ಲಿ ಮೂರು ದಿನಗಳ ಮುಂಚಿತವಾಗಿಯೇ ಸೋಮವಾರೇ ವಿಧಾನಸಭೆ ಮತ್ತು ವಿಧಾನ ಪರಿಷತ್​​ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
Karnataka Assembly session curtailed by 3 days, House adjourned 'sine die' amid Oppn protest
ವಿಧಾನಸಭೆ
Updated on

ಬೆಂಗಳೂರು: ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ಮುಂದುವರೆಸಿದ ಹಿನ್ನೆಲೆಯಲ್ಲಿ ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮೂರು ದಿನಗಳ ಮೊದಲೇ ತೆರೆ ಬಿದ್ದಿದೆ.

ಆಗಸ್ಟ್​​ 13ರಿಂದ ಆಗಸ್ಟ್ 27ರ ವರೆಗೆ ಮುಂಗಾರು ಅಧಿವೇಶನ ನಡೆಸಲು ಆರಂಭದಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಪ್ರತಿಪಕ್ಷಗಳ ಪ್ರತಿಭಟನೆ ಮತ್ತು ಗದ್ದಲದ ಹಿನ್ನಲೆಯಲ್ಲಿ ಮೂರು ದಿನಗಳ ಮುಂಚಿತವಾಗಿಯೇ ಸೋಮವಾರೇ ವಿಧಾನಸಭೆ ಮತ್ತು ವಿಧಾನ ಪರಿಷತ್​​ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಇಂದು ಸಹ ಸದನದೊಳಗೆ ಪ್ರತಿಭಟನೆ ನಡೆಸಿದರು.

Karnataka Assembly session curtailed by 3 days, House adjourned 'sine die' amid Oppn protest
ಪ್ರತಿಪಕ್ಷಗಳ ಪ್ರತಿಭಟನೆ, ಗದ್ದಲದ ನಡುವೆ ಯಾವುದೇ ಚರ್ಚೆಯಿಲ್ಲದೇ ವಿಧಾನ ಪರಿಷತ್ತಿನಲ್ಲಿ ಎರಡು ವಿಧೇಯಕಗಳು ಪಾಸ್

ಸಚಿವರನ್ನು ತಕ್ಷಣ ವಜಾಗೊಳಿಸದಿದ್ದರೆ ಸದನದಲ್ಲಿ ಹಾಹೋರಾತ್ರಿ ಧರಣಿ ನಡೆಸುವುದಾಗಿ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಘೋಷಿಸಿದರು.

ಸದನದ ಬಾವಿಗಿಳಿದು ವಿರೋಧ ಪಕ್ಷದ ಸದಸ್ಯರು ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮತ್ತು ಗದ್ದಲದ ನಡುವೆಯೇ, ಸ್ಪೀಕರ್ ಜಿ.ಎಸ್. ಪಾಟೀಲ್ ಅವರು ಕಲಾಪ ನಡೆಸಿ, ಹಲವಾರು ಮಸೂದೆಗಳ ಅಂಗೀಕರಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಡಿಸಿದ ಪೂರಕ ಅಂದಾಜು ಮತ್ತು ಸಂಬಂಧಿತ ಮಸೂದೆಗಳ ಅಂಗೀಕಾರಾದ ನಂತರ ಸ್ಪೀಕರ್ ಅಂತಿಮವಾಗಿ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು

ರಾಜ್ಯ ಸರ್ಕಾರ ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನವನ್ನು ರದ್ದು ಮಾಡಿದೆ. ಆದ್ದರಿಂದ ಈಗ ರಾಜ್ಯಪಾಲರಿಗೆ ದೂರು ಸಲ್ಲಿಸುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದ್ದಾರೆ.

ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನವನ್ನು ರದ್ದು ಮಾಡಿದೆ. ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ಮಾಡುತ್ತೇವೆಂದು ಘೋಷಿಸಿದ ಬಳಿಕ ಹಾಗೂ ರಾಜ್ಯಪಾಲರಿಗೆ ದೂರು ನೀಡುತ್ತೇವೆಂದು ಹೇಳಿದ ನಂತರ ಸರ್ಕಾರ ಈ ತೀರ್ಮಾನ ಮಾಡಿದೆ ಎಂದರು.

ಕಾಂಗ್ರೆಸ್‌ ಸರ್ಕಾರಕ್ಕೆ ತಾಕತ್ತಿದ್ದರೆ ಅಧಿವೇಶನವನ್ನು ಪೂರ್ತಿಯಾಗಿ ನಡೆಸಬೇಕಿತ್ತು. ಹೊಸ ಸಭಾಧ್ಯಕ್ಷರ ಮೇಲೆ ನಮಗೆ ವಿಶ್ವಾಸವಿತ್ತು. ಆದರೆ ಸಭಾಧ್ಯಕ್ಷರು ಸದನ ನಡೆಸದೆ ರದ್ದು ಮಾಡಿದ್ದಾರೆ. ಆದ್ದರಿಂದ ನಾವು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ ಎಂದರು.

ಈ ವಿಚಾರದಲ್ಲಿ ಬಿಜೆಪಿ-ಜೆಡಿಎಸ್‌ ಹೋರಾಟ ಮಾಡುತ್ತಿದೆಯೇ ಹೊರತು ರಾಜಕೀಯ ಮಾಡುತ್ತಿಲ್ಲ. ದಲಿತರ ಹಣ ನ್ಯಾಯಯುತವಾಗಿ ವಾಪಸ್‌ ಬರಬೇಕೆಂಬುದೇ ನಮ್ಮ ಬೇಡಿಕೆ. ಕೋಟ್ಯಂತರ ದಲಿತರು ರಾಜ್ಯದಲ್ಲಿದ್ದು, ಸರ್ಕಾರದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಉದ್ಯಾನಗಳಲ್ಲಿ ಶೇ.5 ರಷ್ಟು ಭೂಮಿ ಕಬಳಿಕೆ, ಬರಗಾಲ ಮೊದಲಾದ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿತ್ತು. ಕಾಂಗ್ರೆಸ್‌ನ ಭಾರತ್‌ ಜೋಡೋ ಕಾರ್ಯಕ್ರಮಕ್ಕೆ ಸ್ಥಳೀಯ ಸಂಸ್ಥೆಗಳಿಂದ ಕೋಟ್ಯಂತರ ಹಣ ಖರ್ಚು ಮಾಡಲಾಗುತ್ತಿದೆ. ಇದು ಕಾಂಗ್ರೆಸ್‌ನ ಪುಢಾರಿಗಳಿಗೆ ಖರ್ಚು ಮಾಡುತ್ತಿರುವ ಹಣವೇ ಹೊರತು, ಜನರಿಗಾಗಿ ಖರ್ಚು ಮಾಡುತ್ತಿಲ್ಲ. ಇದು ರಾಜ್ಯದ ಬೊಕ್ಕಸದ ಲೂಟಿ ಮಾಡುವ ಕಾರ್ಯಕ್ರಮ. ಇವೆಲ್ಲ ವಿಷಯಗಳ ವಿರುದ್ಧ ಪಾದಯಾತ್ರೆ ಮಾಡಲು ತೀರ್ಮಾನಿಸಲಿದ್ದೇವೆ. ಪಾದಯಾತ್ರೆಯನ್ನು ರದ್ದು ಮಾಡುವುದಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com