

ತುಮಕೂರು: ಉಪ ಮುಖ್ಯಮಂತ್ರಿ ಜಿ ಪರಮೇಶ್ವರು ಅವರು ಈ ಹಿಂದೆ ಗೃಹ ಸಚಿವರಾಗಿದ್ದ ವೇಳೆ ಅವರಿಗೆ ದಯಾಮರಣ ಕೋರಿದ್ದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ತುಮಕೂರು ಜಿಲ್ಲೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ರಾಬಿಯಾ ಪಾಷಾ(39) ಗುರುತಿಸಲಾಗಿದ್ದು, ತನ್ನ ಇಬ್ಬರು ಮಕ್ಕಳಾದ ತಮನ್ನಾ(9), ಸಿಮ್ರಾನ್ (5) ರೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಸ್ಪಿ ಅಶೋಕ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2025ರಲ್ಲಿ ತುಮಕೂರಿನಲ್ಲಿ ನಡೆದ ಸರ್ಕಾರದ ವಿವಿಧ ಸವಲತ್ತು ವಿತರಣೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಬಂದಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಳಿ ರಾಬಿಯಾ ತನ್ನ ಮನವಿ ಆಲಿಸುವಂತೆ ಹೋರಾಟ ನಡೆಸಿದ್ದರು. ರಾಬಿಯಾ ಮನವಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ 20/30 ನಿವೇಶನ ಮಂಜೂರು ಮಾಡಿದ್ದರು.
ಸಿಎಂ ಆದೇಶ ನೀಡಿ ಒಂದೂವರೆ ವರ್ಷ ಕಳೆದಿದ್ದರು ನಿವೇಶನ ನೀಡದೆ ಅಧಿಕಾರಿಗಳು ಸತಾಯಿಸಿದ್ದರು. ಇದರಿಂದ ರೋಸಿಹೋದ ರಾಬಿಯಾ ಅಂದಿನ ಗೃಹಸಚಿವ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ರಂಪಾಟ ಮಾಡಿದ್ದರು. ಸಿಎಂ ಆದೇಶ ಮಾಡಿದ್ರೂ ನನಗೆ ನಿವೇಶನ ಕೊಟ್ಟಿಲ್ಲ ಎಂದು ದಯಾಮರಣ ಕೋರಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಳು.
ಆಗ ಮಹಿಳೆ ಕರೆಸಿ ಸಮಸ್ಯೆ ಆಲಿಸಿದ್ದ ಪರಮೇಶ್ವರ ಅವರು, ಶಿರಾ ನಗರದ ಹೊರವಲಯದಲ್ಲಿ ಸರ್ಕಾರದಿಂದ ಒಂದು ನೀವೇಶನ ನೀಡಿದ್ದರು. ಸರ್ಕಾರ ಜಾಗ ಕೊಟ್ಟು ಮನೆ ಕಟ್ಟಿಸಿ ಕೊಡುತಿದ್ದರೂ, ಮಹಿಳೆ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ನಿಗೂಢವಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ.