

ಬೆಂಗಳೂರು: ದೇಶದ ಜನಪ್ರಿಯ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನಲ್ಲಿ (Mann Ki Baat) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಬೀದಿ ಬದಿ ವ್ಯಾಪಾರಿಯೊಬ್ಬರ ಯಶೋಗಾಥೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಇಡ್ಲಿ-ದೋಸೆ ವ್ಯಾಪಾರ ಮಾಡುವ ಟಿ. ಎಸ್. ನಿಂಗಮ್ಮ ಅವರ ಸಾಧನೆಯನ್ನು ಪ್ರಧಾನಿ ಮೋದಿ ಅವರು ದೇಶದ ಮಹಿಳಾ ಸಬಲೀಕರಣ ಮತ್ತು ಸ್ವಾವಲಂಬನೆಗೆ "ಜೀವಂತ ಉದಾಹರಣೆ" ಎಂದು ಬಣ್ಣಿಸಿದ್ದಾರೆ.
ಮೂಲತಃ ಕರ್ನಾಟಕದ ಹಾಸನ ಜಿಲ್ಲೆಯವರಾದ ನಿಂಗಮ್ಮ ಅವರು, ಜೀವನೋಪಾಯಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿದ್ದರು. ನಂತರ ತಮ್ಮ ಪತಿಯೊಂದಿಗೆ ಸೇರಿ ಬೆಂಗಳೂರಿನ ಹೊಸಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಸಣ್ಣದೊಂದು ತಳ್ಳುವ ಗಾಡಿಯಲ್ಲಿ ದೋಸೆ, ಇಡ್ಲಿ ಮತ್ತು ಸಾಂಬಾರ್ ಮಾರಾಟ ಮಾಡುವ ವ್ಯವಹಾರವನ್ನು ಆರಂಭಿಸಿದರು. ಅವರ ಕೈರುಚಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತಾದರೂ, ವ್ಯವಹಾರವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಕೊಂಡೊಯ್ಯಲು ಅವರಿಗೆ ಬಂಡವಾಳದ ಕೊರತೆ ಎದುರಾಗಿತ್ತು.
ಈ ಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರದ ಮೈಕ್ರೋ-ಕ್ರೆಡಿಟ್ ಸೌಲಭ್ಯವಾದ 'ಪಿಎಂ ಸ್ವನಿಧಿ' (PM SVANidhi) ಯೋಜನೆ ನಿಂಗಮ್ಮ ಅವರ ಕೈಹಿಡಿಯಿತು. ಈ ಯೋಜನೆಯಡಿ ಸಿಕ್ಕ ಆರ್ಥಿಕ ನೆರವನ್ನು ಬಳಸಿಕೊಂಡು ಅವರು, ತಮ್ಮ ಆಹಾರದ ಗಾಡಿಯನ್ನು ಸುಸಜ್ಜಿತವಾಗಿ ನವೀಕರಿಸಿದರು. ಅಡುಗೆಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಒಟ್ಟಾರೆ (ಬಲ್ಕ್) ಖರೀದಿಸಿ ವೆಚ್ಚವನ್ನು ಉಳಿಸಿದರು. ಮೆನುವಿನಲ್ಲಿ ಹೊಸ ಆಹಾರ ಪದಾರ್ಥಗಳನ್ನು ಸೇರಿಸಿ ಗ್ರಾಹಕರನ್ನು ಆಕರ್ಷಿಸಿದರು.
ವ್ಯವಹಾರ ಅಭಿವೃದ್ಧಿಗೊಂಡ ಹಿನ್ನೆಲೆಯಲ್ಲಿ ನಿಂಗಮ್ಮ ಅವರ ದೈನಂದಿನ ಗಳಿಕೆ ಮತ್ತು ಕುಟುಂಬದ ಆದಾಯ ಗಣನೀಯವಾಗಿ ಹೆಚ್ಚಾಯಿತು. ಈ ಆರ್ಥಿಕ ಪ್ರಗತಿಯಿಂದಾಗಿ ನಿಂಗಮ್ಮ ಅವರು ಇಂದು ತಮ್ಮ ಮೂವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಅವರು ಹೆಮ್ಮೆಯಿಂದ ತಿಳಿಸಿದ್ದಾರೆ.
ಪಿಎಂ ಸ್ವನಿಧಿ ಯೋಜನೆಯ ಒಟ್ಟು ಫಲಾನುಭವಿಗಳಲ್ಲಿ ಶೇಕಡಾ 46 ರಷ್ಟು ಮಹಿಳೆಯರಿದ್ದಾರೆ ಮತ್ತು ದೇಶಾದ್ಯಂತ ಸುಮಾರು 35 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆದು ತಮ್ಮ ಸಣ್ಣ ಉದ್ಯಮಗಳನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ ಎಂದು ಪ್ರಧಾನಿ ಮಾಹಿತಿ ನೀಡಿದರು. ಬೆಂಗಳೂರಿನ ನಿಂಗಮ್ಮ ಅವರ ಈ ಸಾಧನೆ ಇಂದು ದೇಶದ ಲಕ್ಷಾಂತರ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.