

ಬೆಂಗಳೂರು: ಅಲ್-ಹಿಂದ್ ಐಸಿಸ್’ ಭಯೋತ್ಪಾದಕ ಸಂಚಿಗೆ ಸಂಬಂಧಿಸಿದಂತೆ ಆರೋಪಿ ಸೈಯದ್ ಫಸಿಯುರ್ ರೆಹಮಾನ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ವಿಶೇಷ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದೆ. ನ್ಯಾಯಾಲಯವು ಅವರಿಗೆ ಏಳು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 48,000 ರೂಪಾಯಿ ದಂಡ ವಿಧಿಸಿದೆ.
ನಿಷೇಧಿತ ಐಸಿಸ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಸಂಚಿನಲ್ಲಿ ಭಾಗಿಯಾಗಿದ್ದಕ್ಕಾಗಿ ರೆಹಮಾನ್ ಅವರನ್ನು ಅಪರಾಧಿ ಎಂದು ಪರಿಗಣಿಸಲಾಗಿದೆ. ಅಲ್-ಹಿಂದ್ ಸದಸ್ಯರಿಗೆ ಕಾಡಿನಲ್ಲಿ ತರಬೇತಿ ಶಿಬಿರವನ್ನು (jungle camp training) ನಡೆಸಲು ಅಗತ್ಯವಿದ್ದ ಟೆಂಟ್‌ಗಳು ಮತ್ತು ಚಾಕುಗಳನ್ನು 'ಡೆಕಾಥ್ಲಾನ್' ಶೋರೂಮ್‌ನಿಂದ ಖರೀದಿಯಲ್ಲಿ ರೆಹಮಾನ್ ನೆರವಾಗಿದ್ದ ಹಾಗೂ ಸಂಚಿನ ಸಭೆಗಳಲ್ಲಿ ಭಾಗವಹಿಸಿದ್ದರು ಎಂಬುದು ದೃಢಪಟ್ಟಿದೆ ಎಂದು ಎನ್‌ಐಎ (NIA) ಹೇಳಿಕೆಯಲ್ಲಿ ತಿಳಿಸಿದೆ.
ಈ ಸಂಚಿನ ರೂವಾರಿ ಪ್ರಮುಖ ಆರೋಪಿ ಮೆಹಬೂಬ್ ಪಾಷಾ, ತನ್ನ ಬೆಂಗಳೂರಿನ ಗುರುಪ್ಪನಪಾಳ್ಯದಲ್ಲಿರುವ ತಮ್ಮ ನಿವಾಸದಲ್ಲಿ ಹಲವಾರು ಸಭೆಗಳನ್ನು ನಡೆಸಿದ್ದರು.
ಈ ಸಭೆಗಳಲ್ಲಿ ಕೋಮುಗಲಭೆಗಳನ್ನು ಪ್ರಚೋದಿಸುವ ಮತ್ತು ಐಸಿಸ್‌ನ ಅಜೆಂಡಾವನ್ನು ಮುಂದುವರಿಸುವ ಉದ್ದೇಶದಿಂದ ನಿರ್ದಿಷ್ಟ ವ್ಯಕ್ತಿಗಳ ಹತ್ಯೆಗಳನ್ನು (targeted killings) ನಡೆಸಲು ಅಲ್-ಹಿಂದ್ ಸದಸ್ಯರು ಯೋಜನೆ ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಅವರು ಐಸಿಸ್/ದಾಯೇಶ್ (Daesh) ವಿಲಾಯತ್ (ಪ್ರಾಂತ್ಯ) ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಕಂಡುಬಂದಿದೆ.
20 ಮಂದಿಯ ವಿರುದ್ಧ 3 ದೋಷಾರೋಪ ಪಟ್ಟಿ: ಈ ಪ್ರಕರಣವನ್ನು ಆರಂಭದಲ್ಲಿ ಕರ್ನಾಟಕ ಪೊಲೀಸರು 2020ರ ಜನವರಿ 10ರಂದು ಬೆಂಗಳೂರಿನಲ್ಲಿ ದಾಖಲಿಸಿದ್ದರು. ನಂತರ ಎನ್‌ಐಎ ತನಿಖೆಯನ್ನು ವಹಿಸಿಕೊಂಡು 2020ರ ಜನವರಿ 23ರಂದು ಪ್ರಕರಣವನ್ನು ಮರು-ದಾಖಲಿಸಿತು.
ಎನ್‌ಐಎ ಇಲ್ಲಿಯವರೆಗೆ 20 ಆರೋಪಿಗಳ ವಿರುದ್ಧ ಮೂರು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ. ಅಕ್ಟೋಬರ್ 2025ರಲ್ಲಿ ಪ್ರಾರಂಭವಾದ ವಿಚಾರಣೆಯ ಸಂದರ್ಭದಲ್ಲಿ ತಪ್ಪೊಪ್ಪಿಕೊಂಡಿದ್ದ ಹನೀಫ್ ಖಾನ್ ಅವರನ್ನು ಜುಲೈ 14, 2026ರಂದು ಅಪರಾಧಿ ಎಂದು ಘೋಷಿಸಲಾಗಿತ್ತು.
ತನಿಖೆ ಮುಂದುವರಿದಿದ್ದು, ಸಂಚಿನಲ್ಲಿ ಭಾಗಿಯಾದ ಗುಂಪು, ಯೋಜನೆ ರೂಪಿಸಿದ ಮತ್ತು ಸಮನ್ವಯ ಸಾಧಿಸಿದ ಆನ್‌ಲೈನ್ ಹ್ಯಾಂಡ್ಲರ್‌ನನ್ನು ಪತ್ತೆಹಚ್ಚುವ ಪ್ರಯತ್ನಗಳು ನಡೆಯುತ್ತಿವೆ. ಈ ಸಂಚಿನ ರೂವಾರಿ ಪ್ರಮುಖ ಆರೋಪಿ ಮೆಹಬೂಬ್ ಪಾಷಾ ಎಂದು ಎನ್‌ಐಎ ತಿಳಿಸಿದೆ.