ಪ್ರಾದೇಶಿಕ ಅಸಮತೋಲನ ನಿವಾರಣೆ: ಪ್ರೊ.ಎಂ.ಗೋವಿಂದ ರಾವ್ ನೇತೃತ್ವದ ಸಮಿತಿಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆ

ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿದ್ದ ಈ ಸಮಿತಿಯು ರಾಜ್ಯದ ಪ್ರಾದೇಶಿಕ ಅಸಮತೋಲನಗಳನ್ನು ವಿಶ್ಲೇಷಿಸಿ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಿದೆ.
CM Siddaramaiah
ಸಿಎಂಗೆ ವರದಿ ಸಲ್ಲಿಸಿದ ಸಮಿತಿ.
Updated on

ಬೆಂಗಳೂರು: ರಾಜ್ಯದ ಹಿಂದುಳಿದ ಪ್ರದೇಶಗಳನ್ನು ಅಭಿವೃದ್ಧಿ ಹೊಂದಿದ ಪ್ರದೇಶಗಳ ಸಮಾನ ಮಟ್ಟಕ್ಕೆ ತರುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಮಾರ್ಚ್ 2024ರಲ್ಲಿ ರಚಿಸಿದ್ದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ತನ್ನ ವರದಿಯನ್ನು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

ಖ್ಯಾತ ಅರ್ಥಶಾಸ್ತ್ರಜ್ಞ ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿದ್ದ ಈ ಸಮಿತಿಯು ರಾಜ್ಯದ ಪ್ರಾದೇಶಿಕ ಅಸಮತೋಲನಗಳನ್ನು ವಿಶ್ಲೇಷಿಸಿ ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಿದೆ.

ಈ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆ ಇರುವುದರಿಂದ ಅದನ್ನು ಇನ್ನೂ ಸಾರ್ವಜನಿಕವಾಗಿ ಪ್ರಕಟಿಸಲಾಗಿಲ್ಲ.

ಸಮಿತಿಯ ಮುಖ್ಯ ಉದ್ದೇಶವು ಸಮಗ್ರ ಸಂಯುಕ್ತ ಅಭಿವೃದ್ಧಿ ಸೂಚ್ಯಂಕ (Comprehensive Composite Development Index–CCDI)ವನ್ನು ನವೀಕರಿಸುವುದು ಹಾಗೂ ರಾಜ್ಯದ 236 ತಾಲ್ಲೂಕುಗಳಲ್ಲಿನ ಪ್ರಾದೇಶಿಕ ಅಸಮಾನತೆಗಳನ್ನು ಮೌಲ್ಯಮಾಪನ ಮಾಡುವುದಾಗಿತ್ತು. ಜೊತೆಗೆ, ಹಿಂದೆ ಗುರುತಿಸಲಾಗಿದ್ದ 35 ಹಿಂದುಳಿದ ತಾಲ್ಲೂಕುಗಳಲ್ಲಿ ನಡೆದ ಅಭಿವೃದ್ಧಿ ಪ್ರಗತಿಯನ್ನು ವಿಶೇಷವಾಗಿ ಪರಿಶೀಲಿಸಲಾಗಿದೆ.

ಪ್ರೊ. ಎಂ. ಗೋವಿಂದ ರಾವ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಹಿಸಿದ ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ವಿಶಾಲ್ ಆರ್. ಇದ್ದರು. ಇತರ ಸದಸ್ಯರಾಗಿ ಕಲಬುರಗಿಯ ಸಂಗೀತಾ ಕಟ್ಟಿಮಾನಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊ. ಬಾಗಲಕೋಟೆ ಹಾಗೂ ಎಂ.ಎಸ್. ಸೂರ್ಯನಾರಾಯಣನ್ ಅವರು ಸೇರಿದ್ದರು.

CM Siddaramaiah
ಪ್ರಾದೇಶಿಕ ಅಸಮತೋಲನ ಪರಿಹಾರ ಸಮಿತಿ ತಿಂಗಳಾಂತ್ಯದೊಳಗೆ ವರದಿ ಸಲ್ಲಿಕೆ

ಸಮಿತಿಯ ಸದಸ್ಯರು ರಾಜ್ಯದ ಎಲ್ಲಾ ಪ್ರಾದೇಶಿಕ ಕೇಂದ್ರಗಳಿಗೆ ಭೇಟಿ ನೀಡಿ, ವಿವಿಧ ಹಿತಾಸಕ್ತಿದಾರರು, ಅಧಿಕಾರಿಗಳು ಹಾಗೂ ಸಂಘಟನೆಗಳೊಂದಿಗೆ ಸಭೆ ನಡೆಸಿದ್ದಾರೆ. ಎಲ್ಲಾ ಜಿಲ್ಲೆಗಳಿಗೂ ಭೇಟಿ ನೀಡಿ ಇದೇ ರೀತಿಯ ಸಮಾಲೋಚನೆಗಳನ್ನು ನಡೆಸಿದ್ದಾರೆ.

ಸಮಿತಿ ತನ್ನ ವರದಿಗೆ ಅಗತ್ಯವಾದ ಮಾಹಿತಿಯನ್ನು ಸಂಗ್ರಹಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು, ಹಣಕಾಸು ಸಂಸ್ಥೆಗಳು, ಅಂಕಿಅಂಶ ಇಲಾಖೆ, ನೀರಾವರಿ ಇಲಾಖೆ, ವಿಶ್ವವಿದ್ಯಾಲಯಗಳು ಸೇರಿದಂತೆ ಹಲವು ಮೂಲಗಳಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.

ಈ ಸಂಬಂಧ ಪ್ರಶ್ನಾವಳಿಗಳನ್ನು ಕಳುಹಿಸಿ ನವೀಕೃತ ಮಾಹಿತಿಯನ್ನು ಪಡೆದುಕೊಂಡಿದೆ. ಸಮಿತಿ ತನ್ನ ಕಾರ್ಯಾರಂಭಕ್ಕೂ ಮೊದಲು ಡಾ. ಡಿ.ಎನ್. ನಂಜುಂಡಪ್ಪ ಸಮಿತಿಯ ವರದಿಯನ್ನು ಅಧ್ಯಯನ ಮಾಡಿದ್ದು, ಗೋವಿಂದ ರಾವ್ ಸಮಿತಿಯ ವರದಿ ನಂಜುಂಡಪ್ಪ ಸಮಿತಿಯ ವರದಿಯಿಂದ ಭಿನ್ನವಾಗಿದ್ದು, ಇತ್ತೀಚಿನ ಸ್ಥಿತಿಗತಿಗಳನ್ನು ಪ್ರತಿಬಿಂಬಿಸುತ್ತದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ದೊಡ್ಡ ಕೈಗಾರಿಕೆ ಸ್ಥಾಪಿಸುವುದು ಮತ್ತು ಅದಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವಂತೆ ಸಮಿತಿಯು ಶಿಫಾರಸು ಮಾಡಿದೆ. ಇದರಿಂದ ಉದ್ಯೋಗ ಸೃಷ್ಟಿಗೆ ಸಹಕಾರವಾಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳು ಹೆಚ್ಚಳವಾಗಲಿವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಜೊತೆಗೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸೇರಿದಂತೆ ಪ್ರಾದೇಶಿಕ ಅಭಿವೃದ್ಧಿ ಮಂಡಳಿಗಳ ಕಾರ್ಯಚಟುವಟಿಕೆಗಳು ಮತ್ತು ವೆಚ್ಚಗಳ ಮೇಲೆ ನಿರಂತರ ನಿಗಾವಹಿಸುವ ಅಗತ್ಯವಿದೆ ಎಂದು ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಸಾರಿಗೆ ಮೂಲಸೌಕರ್ಯದ ಕೊರತೆ ಕೈಗಾರಿಕಾ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ ಎಂದು ಸಮಿತಿಯು ಗಮನಿಸಿದ್ದು, ಕೇಂದ್ರ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ.

ಉಡಾನ್ (UDAN) ಯೋಜನೆಯ ಅವಧಿಯನ್ನು ವಿಸ್ತರಿಸಿ ಕಲಬುರಗಿಗೂ ವಿಮಾನ ಸೇವೆ ಕಲ್ಪಿಸುವುದು, ಬೆಂಗಳೂರು–ಕಲಬುರಗಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ನೇರ ರೈಲು ಸಂಚಾರ ಹೆಚ್ಚಿಸುವುದು ಹಾಗೂ ಬಹುಕಾಲದ ಬೇಡಿಕೆಯಾದ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪಿಸುವಂತೆ ಶಿಫಾರಸು ಮಾಡಲಾಗಿದೆ.

ಇದಲ್ಲದೆ, ರಾಯಚೂರಿನಲ್ಲಿ ಏಮ್ಸ್ (AIIMS) ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸಮಿತಿಯು ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಗೋವಿಂದ ರಾವ್ ಸಮಿತಿಯ ಶಿಫಾರಸುಗಳ ಕುರಿತು ಸರ್ಕಾರದ ಇನ್ನೂ ಅಧಿಕೃತ ಮಾಹಿತಿಗಳನ್ನು ನೀಡಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com