

ಬೆಂಗಳೂರು: ದುರಾಡಳಿತ ಮತ್ತು ವ್ಯಾಪಕ ಭ್ರಷ್ಟಾಚಾರ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಎಲ್ಲ 25 ಗ್ರಾಮ ಪಂಚಾಯಿತಿಗಳ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ಇದೀಗ ಈ ಎಲ್ಲಾ ಪಂಚಾಯಿತಿಗಳು ಸಲ್ಲಿಸಬೇಕಾದ ವರದಿಗಳನ್ನು ಪರಿಶೀಲಿಸಲು ಕರ್ನಾಟಕ ಪಂಚಾಯತ್ ರಾಜ್ ಆಯುಕ್ತರು ಮೂವರು ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ.
ಉಪ ಲೋಕಾಯುಕ್ತರು ಪ್ರತಿ ಗ್ರಾಮ ಪಂಚಾಯಿತಿಯಿಂದ ಉತ್ತರಿಸಬೇಕಾದ 30 ಕ್ಕೂ ಹೆಚ್ಚು ಪ್ರಶ್ನೆಗಳನ್ನು ಪಟ್ಟಿ ಮಾಡಿದ್ದಾರೆ. ನ್ಯಾಯಮೂರ್ತಿ ವೀರಪ್ಪ ಅವರು ಇತ್ತೀಚೆಗೆ ಈ ಗ್ರಾಮ ಪಂಚಾಯಿತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿದಾಗ, ಅಲ್ಲಿ ಹಣದ ದುರುಪಯೋಗ, ದುರಾಡಳಿತ ಮತ್ತು ಇತರ ಅಕ್ರಮಗಳನ್ನು ಕಂಡುಬಂದಿದ್ದವು.
ಪಂಚಾಯತ್ ರಾಜ್ ಆಯುಕ್ತರು ಜನವರಿ 23 ರಂದು ಗ್ರಾಮ ಪಂಚಾಯಿತಿಗಳು ಸಲ್ಲಿಸಬೇಕಾದ ವರದಿಗಳನ್ನು ಪರಿಶೀಲಿಸಲು ಮೂವರು ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ. ಉಪ ಲೋಕಾಯುಕ್ತರು ಎತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು 15 ದಿನಗಳಲ್ಲಿ ವರದಿಯನ್ನು ಸಲ್ಲಿಸಲು ಈ ಸಮಿತಿಗೆ ನಿರ್ದೇಶನ ನೀಡಿದ್ದಾರೆ.
"ಗ್ರಾಮ ಸ್ವರಾಜ್" ಅನ್ನು ಸಾಕಾರಗೊಳಿಸಲು ಸುಧಾರಣೆಗಳನ್ನು ತರುವ ಮೂಲಕ ಶ್ರೀನಿವಾಸಪುರವನ್ನು ರಾಜ್ಯದಲ್ಲಿ ಮಾದರಿ ತಾಲೂಕನ್ನಾಗಿ ಮಾಡುವುದು ನ್ಯಾಯಮೂರ್ತಿ ವೀರಪ್ಪ ಅವರ ಉದ್ದೇಶವಾಗಿದೆ ಎಂದು ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ವೇಶ್ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇಲ್ಲಿ ಪರಿಚಯಿಸಲಾದ ಸುಧಾರಣೆಗಳನ್ನು ನಂತರ ರಾಜ್ಯದ ಇತರ ತಾಲ್ಲೂಕುಗಳಿಗೂ ವಿಸ್ತರಿಸಬಹುದು ಎಂದು ಅವರು ಹೇಳಿದ್ದಾರೆ.
ಸರ್ವೇಶ್, "ಉಪ ಲೋಕಾಯುಕ್ತರು ಎತ್ತಿರುವ ಸಮಸ್ಯೆಗಳನ್ನು ಸರಿಪಡಿಸುವತ್ತ ನಾವು ಕೆಲಸ ಮಾಡುತ್ತಿದ್ದೇವೆ. ಕಾನೂನಿನ ಪ್ರಕಾರ ಗ್ರಾಮ ಸಭೆಗಳು ಮತ್ತು ಗ್ರಾಮ ಪಂಚಾಯತಿಗಳ ಸಾಮಾನ್ಯ ಸಭೆಗಳನ್ನು ನಡೆಸುವುದು. ವಿವಿಧ ವಸ್ತುಗಳ ಖರೀದಿ ಮತ್ತು ಕಾಮಗಾರಿಗಳ ಅನುಷ್ಠಾನದಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಟೆಂಡರ್‌ಗಳನ್ನು ಆಹ್ವಾನಿಸುವುದು. ಎಲ್ಲಾ ಗ್ರಾಮ ಪಂಚಾಯತಿಗಳಿಗೆ ಡಾಂಗಲ್‌ಗಳನ್ನು ಒದಗಿಸುವುದು. ಪಂಚಾಯತ್‌ಗಳ ಅಡಿಯಲ್ಲಿ ರಿವರ್ಸ್ ಆಸ್ಮೋಸಿಸ್ ನೀರಿನ ಸ್ಥಾವರಗಳನ್ನು ತರುವುದು. ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಮತ್ತು ಹಾಜರಾತಿಯ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮತ್ತು ಪಂಚಾಯತ್ ಕಚೇರಿಗಳಲ್ಲಿನ ಸಿಸಿಟಿವಿಗಳನ್ನು ಅಳವಡಿಸಲಾಗುವುದು" ಎಂದು ಹೇಳಿದರು.
Advertisement