
ನಮ್ಮ ಮೆಟ್ರೋದ ಟಿಕೆಟ್ ದರ ಏರಿಕೆ ಮಾಡುತ್ತಿರುವುದಕ್ಕೆ BMRCL ವಿರುದ್ಧ ಜನಾಕ್ರೋಶ ಹೆಚ್ಚಾಗಿದೆ. ಅಲ್ಲದೆ ರಾಜಕೀಯ ಜಟಾಪಟಿಗೂ ಕಾರಣವಾಗಿತ್ತು. ಈ ಮಧ್ಯೆ ಸೋಮವಾರದಿಂದ ಜಾರಿಗೆ ಬರಬೇಕಿದ್ದ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆಗೆ ಸದ್ಯ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಮೆಟ್ರೋ ದರ ಏರಿಕೆ ಆಗಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಹಿತಿ ನೀಡಿದ್ದಾರೆ. ಮೆಟ್ರೋ ದರ ಏರಿಕೆ ಬಗ್ಗೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಜತೆ ದೂರವಾಣಿ ಕರೆ ಮಾಡಿ ಮಾತನಾಡಿದೆ. ಫೆ. 9ರಿಂದ ಮೆಟ್ರೋ ಟಿಕೆಟ್ ದರ ಹೆಚ್ಚಿಸದಂತೆ ಅಧಿಕಾರಿಗಳಿಗೆ ಖಟ್ಟರ್ ಸೂಚಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು. ಈ ಮಧ್ಯೆ ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಮೆಟ್ರೋ ದರ ಏರಿಕೆ ಮಾಡಲು ಹೇಗೆ ಸಾಧ್ಯ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರವಾಗಿ ಮಾತನಾಡಿ ಡಿಸಿಎಂ ಡಿಕೆ ಶಿವಕುಮಾರ್, ತೇಜಸ್ವಿ ಸೂರ್ಯನದ್ದು ಬರೀ ಟ್ವೀಟ್, ಸ್ಟೇಟ್ಮೆಂಟ್ ಅಷ್ಟೇ. ಅವನಿಗೆ ಇನ್ನೂ ಅನುಭವವಿಲ್ಲ. ರಾಜ್ಯಕ್ಕೆ ಹಣ ತಂದಿದ್ದು ಏನಾದರೂ ಇದ್ದರೆ ಅದರ ಬಗ್ಗೆ ಮಾತಾಡಲಿ, ಬರೀ ಖಾಲಿ ಟ್ರಂಕ್ ಮಾತನಾಡುವುದು ಬೇಡವೆಂದು ವಾಗ್ದಾಳಿ ನಡೆಸಿದರು.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಕ್ವಾಲ್ಕಾಮ್ ಟೆಕ್ನಾಲಜೀಸ್ ತಯಾರಿಸಿದ ಹೈಟೆಕ್ 2-ನ್ಯಾನೊಮೀಟರ್ ಚಿಪ್ ಅನ್ನು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು. ನಮ್ಮ ದೇಶವು ಸೆಮಿಕಂಡಕ್ಟರ್ ಉತ್ಪಾದನಾ ವಿನ್ಯಾಸದಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸುತ್ತಿದೆ. ಭಾರತದಲ್ಲಿ ಇದು ಹೊಸ ಉದ್ಯಮವಾಗಿ ರೂಪ ತಳೆಯುತ್ತಿದೆ ಎಂದು ಹೇಳಿದರು. ಚಿಪ್ ವೇಫರ್ ಅನ್ನು ಕೈಯಲ್ಲಿ ಹಿಡಿದು ತೋರಿಸಿದ ಸಚಿವ ಅಶ್ವಿನಿ ವೈಷ್ಣವ್ ಅದರ ಸಾಮರ್ಥ್ಯಗಳು ಮತ್ತು ಅದರಲ್ಲಿ ಒಳಗೊಂಡಿರುವ ಉತ್ಪಾದನೆಯನ್ನು ವಿವರಿಸಿದರು. ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಉದ್ಯಮವನ್ನು ನಿರ್ಮಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಭಾರತಕ್ಕೆ ಇದು ಬಹಳ ಮುಖ್ಯವಾದ ಹೆಜ್ಜೆಯಾಗಿದೆ ಎಂದು ಹೇಳಿದರು.
ಕರ್ನಾಟಕ ಮೂಲದ ಉದ್ಯಮಿಯೊಬ್ಬರು ಕೇರಳದ ವಯನಾಡಿನಲ್ಲಿ ಕಾರಿನಲ್ಲಿ ಕುಟುಂಬ ಸಮೇತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ನಡೆದಿದೆ. ಕೊಡಗಿನ ಪೊನ್ನಂಪೇಟೆಯ ಕುಟ್ಟ ಗ್ರಾಮದ ನಿವಾಸಿ ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ. ಆದರೆ ಅದೃಷ್ಟವಶಾತ್ ಸಜೀರ್ ನ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ಸಜೀರ್ ಪತ್ನಿ ಗಂಭೀರ ಗಾಯವಾಗಿದ್ದು, ಕಲ್ಲಿಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿದ್ದಾರೆ. ಕುಟ್ಟ ಗ್ರಾಮದಲ್ಲಿ ಸಜೀರ್ ಹಲವು ವ್ಯಾಪಾರ ಮಳಿಗೆ ಹೊಂದಿದ್ದರು. ಬಾಪು ಎಂಬಾತ ಸಜೀರ್ಗೆ 20 ಲಕ್ಷ ರೂ. ನೀಡಬೇಕಿತ್ತು. ಸಾಲ ಪಡೆದಿದ್ದ ಬಾಪು ಹಣ ವಾಪಸ್ ಕೊಡದಿದ್ದಕ್ಕೆ ಆತನ ಮನೆ ಎದುರೇ ಸಜೀರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಆತ್ಮಹತ್ಯೆಗೂ ಮುನ್ನ ಸಜೀರ್ ವಿಡಿಯೋ ರೆಕಾರ್ಡ್ ಮಾಡಿದ್ದು ನಮ್ಮ ಸಾವಿಗೆ ಬಾಪು ಕಾರಣ ಎಂದು ಹೇಳಿದ್ದಾರೆ.
ಕನ್ನಡದ ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ ಕೆಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ಮಾತನಾಡಿದ್ದರು. ಚಿತ್ರರಂಗದಲ್ಲಿ ಇರುವವರೆಲ್ಲರೂ ತಮಗೆ ಮೋಸ ಮಾಡಿದ್ದಾರೆ. ತಮ್ಮನ್ನು ಹೊರತಾಗಿ ಚಿತ್ರರಂಗದಲ್ಲಿರುವವರೆಲ್ಲ ದುರುಳರು ಎಂಬ ರೀತಿ ಮಾತನಾಡಿದ್ದರು. ಪ್ರೇಮ್, ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಈ ಬಗ್ಗೆ ನಿರ್ದೇಶಕ ಪ್ರೇಮ್ ಕೋಪಗೊಂಡಿದ್ದು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ. ಖುದ್ದಾಗಿ ಫಿಲಂ ಚೇಂಬರ್ಗೆ ಆಗಮಿಸಿದ ನಿರ್ದೇಶಕ ಪ್ರೇಮ್, ನೂತನ ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ ಅವರನ್ನು ಭೇಟಿ ಆಗಿ ಕನಕಪುರ ಶ್ರೀನಿವಾಸ್ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡು ಜಾಹೀರಾತಿನಲ್ಲಿ ಮಹಾತ್ಮ ಗಾಂಧಿಯವರ ಫೋಟೋವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ನಿನ್ನೆ ಗೃಹ ಇಲಾಖೆ ಮತ್ತು ಪೊಲೀಸ್ ಮಹಾ ನಿರ್ದೇಶಕ ಎಂ ಎ ಸಲೀಮ್ ಅವರಿಗೆ ದೂರು ನೀಡಿದೆ. ಬಿಜೆಪಿಯ 'ನುಂಗಪ್ಪ' ಜಾಹೀರಾತಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಮಹಾತ್ಮ ಗಾಂಧಿಯವರು ಕೋಲಿನಿಂದ ಹೊಡೆಯಲು ಹೋಗುತ್ತಿರುವಂತೆ ತೋರಿಸಲಾಗಿದೆ. ಈ ಜಾಹೀರಾತು ಹಲವಾರು ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಇಂತಹ ಜಾಹಿರಾತುಗಳು ಗಾಂಧಿಯವರ ಪರಂಪರೆಯನ್ನು ವಿರೂಪಗೊಳಿಸುತ್ತದೆ. ಸಾರ್ವಜನಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಸಾರ್ವಜನಿಕ ಸುವ್ಯವಸ್ಥೆ ಭಂಗಗೊಳಿಸುವ ಸಾಮರ್ಥ್ಯವನ್ನು ಈ ಜಾಹೀರಾತು ಹೊಂದಿದೆ ಎಂದು ಕಾಂಗ್ರೆಸ್ ಎಂಎಲ್‌ಸಿ ರಮೇಶ್ ಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Advertisement