

'Mr CM, Cut the Drama' (ಮುಖ್ಯಮಂತ್ರಿಗಳೇ, ನಾಟಕ ನಿಲ್ಲಿಸಿ) ಮತ್ತು '#FareHikeBeda' (ದರ ಏರಿಕೆ ಬೇಡ) ಎಂಬ ಬರಹವಿರುವ ಟೀ-ಶರ್ಟ್ ಧರಿಸಿದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು, ಭಾನುವಾರ ಆರ್.ವಿ. ರಸ್ತೆ ನಿಲ್ದಾಣದಲ್ಲಿ ಮೆಟ್ರೋ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.
ಬಿಎಂಆರ್‌ಸಿಎಲ್ ಪ್ರಸ್ತಾಪಿಸಿರುವ ವಾರ್ಷಿಕ ದರ ಪರಿಷ್ಕರಣೆಯ ಕುರಿತು ಅವರು ಈ ಸಂದರ್ಭದಲ್ಲಿ ಚರ್ಚಿಸಿದ್ದು, ಮೆಟ್ರೋ ದರ ಪರಿಷ್ಕರಣೆಯನ್ನು ತಾನು ಕೋರಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ, ಸಂಸದ ತೇಜಸ್ವಿ ಸೂರ್ಯ ಅವರು ದರ ನಿರ್ಧಾರ ಸಮಿತಿ ವರದಿಯ ಆಯ್ದ ಭಾಗವನ್ನು ತಮ್ಮ ಟೀ-ಶರ್ಟ್ ಮೇಲೆ ಮುದ್ರಿಸುವ ಮೂಲಕ ರಾಜ್ಯ ಸರ್ಕಾರದ ಅಧಿಕಾರಿಗಳೇ ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆಗೆ ಒತ್ತಾಯಿಸಿದ್ದರು ಎಂಬ ಸತ್ಯವನ್ನು ಬಯಲು ಮಾಡಿದರು.
"ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಮೆಟ್ರೋ ದರಗಳನ್ನು ಹೆಚ್ಚಿಸುವ ತುರ್ತು ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರದ ಹಣಕಾಸು ಮತ್ತು ನಗರಾಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಎಫ್‌ಎಫ್‌ಸಿ (FFC) ಗಮನಕ್ಕೆ ತಂದಿದ್ದಾರೆ."
"ಇದಲ್ಲದೆ, ವಾರ್ಷಿಕ ಸ್ವಯಂಚಾಲಿತ ದರ ಪರಿಷ್ಕರಣೆ ಸೂತ್ರವನ್ನು ಹೊಂದುವ ಮೂಲಕ ಪ್ರತಿ ವರ್ಷ ದರವನ್ನು ಪರಿಷ್ಕರಿಸಬೇಕು ಎಂಬುದು ಅಧಿಕಾರಿಗಳ ಅಭಿಪ್ರಾಯವಾಗಿತ್ತು. ವಾಸ್ತವವಾಗಿ, ದರ ನಿರ್ಧಾರ ಸಮಿತಿಯನ್ನು ಶೀಘ್ರವಾಗಿ ರಚಿಸುವಂತೆ ನಗರಾಭಿವೃದ್ಧಿ ಇಲಾಖೆಯು ಬಿಎಂಆರ್‌ಸಿಎಲ್‌ಗೆ ಸತತವಾಗಿ ಪತ್ರಗಳನ್ನು ಬರೆಯುತ್ತಿದೆ."
ಸೋಮವಾರದಿಂದ ಜಾರಿಗೆ ಬರಲಿರುವ ಶೇ. 5ರಷ್ಟು ದರ ಏರಿಕೆಯಿಂದ ತಮಗೆ ಎದುರಾಗುವ ಸಂಕಷ್ಟಗಳ ಬಗ್ಗೆ ಪ್ರಯಾಣಿಕರು ಅಳಲು ತೋಡಿಕೊಂಡರು. ಇದನ್ನು ಆಲಿಸಿದ ಸೂರ್ಯ ರವರು, ದರ ನಿಗದಿ ಸಮಿತಿಯನ್ನು ಪುನರ್ ರಚಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಂತರ ಮಾತನಾಡಿದ ತೇಜಸ್ವಿ ಸೂರ್ಯ, "ಕಾಂಗ್ರೆಸ್ ಸರ್ಕಾರದ ಹಣಕಾಸು ದುರುಪಯೋಗದಿಂದಾಗಿ ಮೆಟ್ರೋ ದರ ಏರಿಕೆ ಅನಿವಾರ್ಯವಾಗಿದೆ. ಎಫ್‌ಎಫ್‌ಸಿ ವರದಿಯ 3ನೇ ಅಧ್ಯಾಯದ 9ನೇ ಪುಟವು ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂಬ ಸತ್ಯವನ್ನು ಎತ್ತಿ ತೋರಿಸುತ್ತದೆ," ಎಂದರು.
"ವರದಿಯಲ್ಲಿನ ಲೋಪದೋಷಗಳು ಮತ್ತು ನಾಳೆಯಿಂದ ಜಾರಿಯಾಗಲಿರುವ ಶೇ. 5ರಷ್ಟು ದರ ಏರಿಕೆಯಿಂದಾಗಿ ಬೆಂಗಳೂರಿನ ನಾಗರಿಕರು ದಿನಕ್ಕೆ ಸುಮಾರು ₹250 ಪಾವತಿಸಬೇಕಾದ ಸ್ಥಿತಿಯನ್ನು ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರ ಗಮನಕ್ಕೆ ತರಲಾಗಿದೆ. ಸಚಿವರು ತಮ್ಮ ಕಾರ್ಯದರ್ಶಿಗೆ (MoHUA) ಸೂಚನೆ ನೀಡಿ, ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಮತ್ತು ಬಿಎಂಆರ್‌ಸಿಎಲ್‌ನ ಲೋಪದೋಷಗಳನ್ನು ಪರಿಶೀಲಿಸಲು ಬಿಎಂಆರ್‌ಸಿಎಲ್‌ಗೆ ನಿರ್ದೇಶಿಸಿದ್ದಾರೆ," ಎಂದು ಸೂರ್ಯ ತಿಳಿಸಿದರು.
Advertisement