

ಬೆಂಗಳೂರು: ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಕೈಯಲ್ಲಿ 'ಖಾಲಿ ಟ್ರಂಕ್' ಹಿಡಿದುಕೊಂಡು ಬಂದ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಟೀಕಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ಆರ್‌ವಿ ರಸ್ತೆಯಿಂದ ನ್ಯಾಷನಲ್ ಕಾಲೇಜಿಗೆ ಟಿಕೆಟ್ ಪಡೆದು ಟ್ರಂಕ್ ಜೊತೆ ಮೆಟ್ರೋದಲ್ಲಿ ಪ್ರಯಾಣಿಸಲು ಮುಂದಾದ ಸಂಸದರನ್ನು ಪೊಲೀಸರು ತಡೆದರು. ಮೆಟ್ರೋದಲ್ಲಿ ಪ್ರಯಾಣಿಸುವ ಮುನ್ನವೇ ಸಂಸದರನ್ನು ಹಾಗೂ ಅವರ ಕೈನಲ್ಲಿದ್ದ ಟ್ರಂಕ್ ಅನ್ನು ಪೊಲೀಸರು ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ತೇಜಸ್ವಿ ಸೂರ್ಯ, ನಾನು ಮುಷ್ಕರ ಮಾಡುತ್ತಿಲ್ಲ, ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ಟಿಕೆಟ್ ಪಡೆದು ಪ್ರಯಾಣಿಕನಾಗಿ ಮೆಟ್ರೋ ಏರಲು ಬಂದಿದ್ದೇನೆ. ನನ್ನ ಕೈಯಲ್ಲಿರುವುದು ಬರೀ ಖಾಲಿ ಟ್ರಂಕ್ ಅಲ್ಲ, ಇದು ರಾಜ್ಯ ಸರ್ಕಾರದ ಪ್ರತೀಕ. ಸರ್ಕಾರವೇ ಹೇಳಿಕೊಂಡಂತೆ ಅವರ ಬಳಿ 'ಶ್ಯಾಡೋ ಕ್ಯಾಶ್ ಸಪೋರ್ಟ್' ಕೊಡಲು ಹಣವಿಲ್ಲ, ಖಜಾನೆ ಖಾಲಿಯಾಗಿದೆ. ಅದನ್ನೇ ಈ ಟ್ರಂಕ್ ಸೂಚಿಸುತ್ತಿದೆ," ಎಂದು ವ್ಯಂಗ್ಯವಾಡಿದರು.
ಮೆಟ್ರೋಗೆ ಹಣಕಾಸಿನ ನೆರವು ನೀಡಲು ದುಡ್ಡಿಲ್ಲ ಎನ್ನುತ್ತೀರಿ, ಇನ್ನೊಂದೆಡೆ ಕೋಟಿ ಕೋಟಿ ಖರ್ಚು ಮಾಡಿ ಟನಲ್ ಮಾಡುತ್ತೇವೆ ಎನ್ನುತ್ತೀರಿ. ರಾಜ್ಯದ ನಿಜವಾದ ಆರ್ಥಿಕ ಪರಿಸ್ಥಿತಿ ಏನು ಎಂಬುದು ಜನರಿಗೆ ತಿಳಿಯಬೇಕು. ಈ ಬಜೆಟ್ ಅಧಿವೇಶನದಲ್ಲಿ ರಾಜ್ಯ ಸರ್ಕಾರ ತನ್ನ ಆರ್ಥಿಕ ಸ್ಥಿತಿಗತಿಯ ಬಗ್ಗೆ 'ಶ್ವೇತ ಪತ್ರ' ಹೊರಡಿಸಬೇಕು ಎಂದು ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಜನಾಕ್ರೋಶದ ಬಳಿಕ ಮೆಟ್ರೋ ದರ ಏರಿಕೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಕೊನೆಗೂ ಕೈಬಿಟ್ಟಿದೆ. ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲು ಬಿಡಲ್ಲ ಎಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಇದು ರಾಜಧಾನಿ ಜನರ ಹೋರಾಟಕ್ಕೆ ಸಂದ ಜಯ ಎಂದಿದ್ದಾರೆ ಅಲ್ಲದೇ ದರ ಏರಿಕೆ ತಡೆಯುವಲ್ಲಿ ಕೇಂದ್ರ ಸರ್ಕಾರದ ಪಾತ್ರವಿದೆ ಎಂದು ಹೇಳಿದ್ದಾರೆ.
Advertisement