
ನಮ್ಮ ಮೆಟ್ರೋ ದರ ಮತ್ತೆ ಶೇ. 5ರಷ್ಟು ಹೆಚ್ಚಳ ಮಾಡಲು ದರ ನಿಗದಿ ಸಮಿತಿ ಶಿಫಾರಸ್ಸು ಮಾಡಿತ್ತು. ಅದಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆಯೂ ನೀಡಿತ್ತು. ಆದರೆ ಇದಕ್ಕೆ ಕೇಂದ್ರ ಸರ್ಕಾರ ಬ್ರೇಕ್ ಹಾಕಿದ್ದು, ದರ ಹೆಚ್ಚಳ ಮಾಡದಂತೆ BMRCLಗೆ ಸೂಚಿಸಿದೆ. ನಮ್ಮ ಮೆಟ್ರೋ ದರ ಹೆಚ್ಚಳಕ್ಕೆ ಬ್ರೇಕ್ ಬಿದ್ದಿದ್ದರೂ ಕಾಂಗ್ರೆಸ್ ಸರ್ಕಾರ ಮತ್ತು ಬಿಜೆಪಿ ನಾಯಕರ ಮಧ್ಯೆ ಕಿತ್ತಾಟಕ್ಕೆ ವೇದಿಕೆಯಾಗಿದೆ. ಬೆಂಗಳೂರಿನ ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಕೈಯಲ್ಲಿ 'ಖಾಲಿ ಟ್ರಂಕ್' ಹಿಡಿದು ಬಂದ ಸಂಸದ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯನ್ನು ಟೀಕಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಆದರೆ ಮೆಟ್ರೋದಲ್ಲಿ ಪ್ರಯಾಣಿಸುವ ಮುನ್ನವೇ ಸಂಸದರನ್ನು ಹಾಗೂ ಅವರ ಕೈನಲ್ಲಿದ್ದ ಟ್ರಂಕ್ ಅನ್ನು ಪೊಲೀಸರು ವಶಕ್ಕೆ ಪಡೆದರು. ಮತ್ತೊಂದೆಡೆ, ನಮ್ಮ ಮೆಟ್ರೋ ದರ ಏರಿಕೆ ತಡೆಹಿಡಿಯುವ ನಿರ್ಧಾರವನ್ನು ತೆಗೆದುಕೊಂಡಿದ್ದೇ ರಾಜ್ಯ ಸರ್ಕಾರ. ಇದರಲ್ಲಿ ಕೇಂದ್ರ ಸರ್ಕಾರವು ಪಾತ್ರವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. 2020 ರಲ್ಲಿ ದರ ನಿಗದಿ ಸಮಿತಿ (ಎಫ್‌ಎಫ್‌ಸಿ) ಅಸ್ತಿತ್ವಕ್ಕೆ ಬಂದ ನಂತರ ಮೆಟ್ರೋ ರೈಲು ದರಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಫ್‌ಎಫ್‌ಸಿ ರಚನೆಯಾದ ನಂತರ, ದರಗಳನ್ನು ನಿರ್ಧರಿಸುವ ಅಧಿಕಾರ ಸರ್ಕಾರದ ಕೈರಲ್ಲಿಲ್ಲ. ಎಫ್‌ಎಫ್‌ಸಿ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಅಂತಿಮ. ಬಿಎಂಆರ್‌ಸಿಎಲ್ ತಾನು ಸೂತ್ರವನ್ನು ಮಾತ್ರ ಶಿಫಾರಸು ಮಾಡಬಹುದು. ನಾನು BMRCLಗೆ ಮರು ಲೆಕ್ಕಾಚಾರ ಮಾಡಿ ಪರಿಷ್ಕೃತ ದರವನ್ನು ನಿರ್ಧರಿಸುವಂತೆ ನಿರ್ದೇಶಿಸಿದ್ದೇನೆ. ದರ ಹೆಚ್ಚಳವು ಕೇಂದ್ರ ಅಥವಾ ರಾಜ್ಯ ಸರ್ಕಾರದ ನಿಯಂತ್ರಣದಲ್ಲಿಲ್ಲ ಎಂದು ಡಿಕೆಶಿ ಹೇಳಿದರು.
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧ ದೂರು ದಾಖಲಿಸಿದ್ದ ಸ್ನೇಹಮಯಿ ಕೃಷ್ಣಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದ್ದರೂ, ಮತ್ತೆ ಹೋರಾಟ ಮುಂದುವರೆಸಿರುವ ಸ್ನೇಹಮಯಿ ಕೃಷ್ಣ ಇದೀಗ ಮತ್ತೊಂದು ಗಂಭೀರ ಆರೋಪ ಮಡಿದ್ದಾರೆ. ಮುಡಾ ಹಗರಣದ ತನಿಖೆ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಕೋಟಿ ಕೋಟಿ ಲಂಚ ಪಡೆದು ಬಿ ರಿಪೋರ್ಟ್ ನೀಡಿದ್ದಾರೆ. ಮುಡಾ ಕೇಸ್ ನಲ್ಲಿ ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ಲೋಕಾಯುಕ್ತಕ್ಕೆ 4 ಕೋಟಿ 35 ಲಕ್ಷ ಲಂಚ ನೀಡಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿ ನಟೇಶ್ ಅವರನ್ನು ಕಾಪಾಡುವ ಕೆಲಸವಾಗಿದೆ. ಈ ಬಗೆಗಿನ ಸಾಕ್ಷಿಗಳು ನನ್ನ ಬಳಿಯಿವೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿನ ಪೋಸ್ಟ್‌ಗಳ ಬಗ್ಗೆ ಪ್ರಾಥಮಿಕ ವಿಚಾರಣೆ ನಡೆಸದೆಯೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿರುವುದು ಕಂಡುಬಂದಿದ್ದು, ಇದನ್ನು ತಡೆಯಲು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂಎ ಸಲೀಂ 8 ಅಂಶಗಳ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಅದರಂತೆ ದೂರುದಾರರ ಅರ್ಹತೆ ಪರಿಶೀಲನೆ, ಪ್ರಾಥಮಿಕ ವಿಚಾರಣೆ ಕಡ್ಡಾಯ, ಹಿಂಸಾಚಾರಕ್ಕೆ ಪ್ರಚೋದನೆ ಇದ್ದರೆ ಮಾತ್ರ ಪ್ರಕರಣ, ರಾಜಕೀಯ ಟೀಕೆಗಳಿಗೆ ರಕ್ಷಣೆ, ಮಾನಹಾನಿ ಅಸಂಜ್ಞೇಯ ಅಪರಾಧ, ಬಂಧನದ ನಿಯಮಗಳು, ಕಾನೂನು ಸಲಹೆ ಪಡೆಯಬೇಕು ಎಂದು ರಾಜ್ಯ ಪೊಲೀಸರಿಗೆ ಎಂಎ ಸಲೀಂ ಸೂಚಿಸಿದ್ದಾರೆ. ಒಂದು ವೇಳೆ ದೂರುಗಳು ಸುಳ್ಳು, ದ್ವೇಷಪೂರಿತ ಅಥವಾ ರಾಜಕೀಯ ಪ್ರೇರಿತ ಎಂದು ಕಂಡುಬಂದರೆ, ಅಂತಹ ಪ್ರಕರಣಗಳನ್ನು BNS ಸೆಕ್ಷನ್ 176(1) ಅಡಿಯಲ್ಲಿ ಮುಕ್ತಾಯಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಈ ಮೂಲಕ ಪ್ರತಿಯೊಂದಕ್ಕೂ ಎಫ್ಐಆರ್ ದಾಖಲಿಸುವುದಕ್ಕೆ ಕಡಿವಾಣ ಹಾಕಲಾಗಿದೆ.
ಕೆನಡಾದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕರ್ನಾಟಕ ಮೂಲದ ಯುವಕನೊಬ್ಬ ಬಲಿಯಾಗಿದ್ದಾರೆ. ಮೃತರನ್ನು ನೆಲಮಂಗಲ ಮೂಲದ ಚಂದನ್ ಕುಮಾರ್ ಎಂದು ಗುರುತಿಸಲಾಗಿದೆ. ಚಂದನ್ ಕುಮಾರ್ ಕಳೆದ 6 ವರ್ಷಗಳಿಂದ ಕೆನಡಾದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರೆಕ್ಸ್‌ಡೇಲ್ ಬೌಲೆವಾರ್ಡ್ ಮತ್ತು ಹೆದ್ದಾರಿ 27 ಪ್ರದೇಶದಲ್ಲಿರುವ ವುಡ್‌ಬೈನ್ ಶಾಪಿಂಗ್ ಸೆಂಟರ್ ಬಳಿ ರಾತ್ರಿ 9 ಗಂಟೆಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಂದನ್ ಕುಮಾರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡುಗಳು ದೇಹ ಹೊಕ್ಕಿದ್ದು ಅವರು ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಗನ ಹತ್ಯೆಯ ವಿಷಯ ತಿಳಿಯುತ್ತಿದ್ದಂತೆಯೇ ಚಂದನ್ ಅವರ ನಿವಾಸದಲ್ಲಿ ಶೋಕ ಮಡುಗಟ್ಟಿದೆ. ಮಗನ ಶವನನ್ನು ತವರಿಗೆ ತರಲು ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
Advertisement