

ಬೆಂಗಳೂರು: ಖ್ಯಾತ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ತನಿಖೆಯ ಸಮಯದಲ್ಲಿ ವಶಪಡಿಸಿಕೊಂಡ ಹಲವು ದಾಖಲೆಗಳು ಮತ್ತು ಟಿಪ್ಪಣಿಗಳನ್ನು ಪರಿಶೀಲಿಸುತ್ತಿದೆ. ಅದರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೆಂಪು ಶಾಯಿಯಲ್ಲಿ ಬರೆದಿದ್ದಾರೆಂದು ಹೇಳಲಾದ ಒಂಬತ್ತು ಪುಟಗಳ ಟಿಪ್ಪಣಿಯೂ ಸೇರಿದೆ ಎಂದು ಪೊಲೀಸ್ ಮೂಲಗಳು ಸೋಮವಾರ ತಿಳಿಸಿವೆ.
"ನಾವು ಪ್ರಸ್ತುತ ರಾಯ್ ಅವರ ಕುಟುಂಬ ಸದಸ್ಯರು ಮತ್ತು ಅವರ ಆಪ್ತರಿಂದ ಪಡೆದ ಹಲವಾರು ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಇದರಲ್ಲಿ ಅವರು ಕೆಂಪು ಶಾಯಿಯಲ್ಲಿ ಬರೆದಿದ್ದಾರೆಂದು ಹೇಳಲಾದ ಒಂಬತ್ತು ಪುಟಗಳ ಟಿಪ್ಪಣಿ ಸೇರಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟಿಪ್ಪಣಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ, ಅವುಗಳು ಪರಿಶೀಲನೆಯಲ್ಲಿವೆ. ಈ ಹಂತದಲ್ಲಿ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಕರಣವನ್ನು ಪ್ರಸ್ತುತ ಅಸ್ವಾಭಾವಿಕ ಮರಣ ಎಂದು ದಾಖಲಿಸಲಾಗಿದೆ. ಆದರೆ ಆತ್ಮಹತ್ಯೆಗೆ ಪ್ರಚೋದನೆ ವಿಚಾರವನ್ನು ಇನ್ನೂ ಕೈಗೆತ್ತಿಕೊಂಡಿಲ್ಲ ಎಂದಿದ್ದಾರೆ.
"ತನಿಖೆ ಮುಂದುವರೆದಂತೆ, ಫಲಿತಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಅಧಿಕಾರಿ ತಿಳಿಸಿದ್ದಾರೆ.
ತನಿಖೆಯ ಭಾಗವಾಗಿ ರಾಯ್ ಅವರೊಂದಿಗೆ ಸಂಪರ್ಕ ಹೊಂದಿರುವ ವ್ಯಕ್ತಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ, ಆದರೆ ಈ ಹಂತದಲ್ಲಿ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸಿಜೆ ರಾಯ್ ಅವರು ಜನವರಿ 30 ರಂದು ನಗರದ ರಿಚ್‌ಮಂಡ್ ಸರ್ಕಲ್ ಬಳಿಯ ತಮ್ಮ ಕಚೇರಿಯಲ್ಲಿ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಿರಂತರ ಶೋಧ ಮತ್ತು ಕಿರುಕುಳನಿಂದ ನೊಂದು ಸಾವಿಗೆ ಶರಣಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
Advertisement