
ಸಿಎಂ ಕುರ್ಚಿ ಗುದ್ದಾಟದ ನಡುವೆ ಕಾಂಗ್ರೆಸ್ ಗೆ ಭಾರೀ ಹಿನ್ನೆಡೆಯಾಗಿದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅಸಿಂಧುಗೊಳಿಸಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದ ಬಿಜೆಪಿಯ ಅಭ್ಯರ್ಥಿ ಮುನಿರಾಜು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ MGS ಕಮಲ್ ಅವರಿದ್ದ ಪೀಠ, ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಸುಬ್ಬಾರೆಡ್ಡಿ ಆಯ್ಕೆಯನ್ನು ಅಸಿಂಧುಗೊಳಿಸಿದೆ. ಅಸಿಂಧುಗೊಳಿಸಿದ ಆದೇಶವನ್ನು ಚುನಾವಣಾ ಆಯೋಗಕ್ಕೆ ರವಾನೆ ಮಾಡಲು ಹೈಕೋರ್ಟ್ ಆದೇಶಿಸಿದೆ. ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸುಬ್ಬಾರೆಡ್ಡಿಗೆ ಅವಕಾಶ ಇದೆ. ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡದಿದ್ದರೆ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯಲಿದೆ.
ವಿಶ್ವವಿಖ್ಯಾತ ಹಂಪಿಯ ಬಳಿ ಇಸ್ರೇಲಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಅಮೆರಿಕ ಪ್ರಜೆಯ ಕೊಲೆ ಪ್ರಕರಣದ ಅಪರಾಧಿಗಳಿಗೆ ಗಂಗಾವತಿ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದೆ. ಕೇವಲ 9 ತಿಂಗಳಲ್ಲೇ ಗಂಗಾವತಿ ಕೋರ್ಟ್ ಈ ಐತಿಹಾಸಿಕ ತೀರ್ಪು ನೀಡಿದೆ. ಕಳೆದ ಫೆಬ್ರವರಿ 6ರಂದು ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿತ್ತು. ಇಂದು ಗಂಗಾವತಿ 1ನೇ ಹೆಚ್ಚುವರಿ ಜಿಲ್ಲಾ ಸತ್ರ ಮತ್ತು ನ್ಯಾಯಾಲಯದ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ ಅವರು ಮೂವರು ಅಪರಾಧಿಗಳಾದ ಮಲ್ಲೇಶ್ ಅಲಿಯಾಸ್ ಹಂದಿಮಲ್ಲ, ಸಾಯಿ ಮತ್ತು ಶರಣಪ್ಪಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. 2025ರ ಮಾರ್ಚ್ ನಲ್ಲಿ ಕೊಪ್ಪಳದ ಗಂಗಾವತಿ ತಾಲೂಕಿನ ಹಂಪಿಯ ಸಾಣಾಪೂರ ಬಳಿ ಇಸ್ರೇಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದರು. ಇದೇ ವೇಳೆ ಅಮೆರಿಕದ ವ್ಯಕ್ತಿಯ ಹತ್ಯೆ ನಡೆದಿತ್ತು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು.
ಕರ್ನಾಟಕದ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದರಿಂದ ನ್ಯಾಯಾಲಯ ಆವರಣದಲ್ಲಿ ತೀವ್ರ ಆತಂಕ ನಿರ್ಮಾಣವಾಗಿತ್ತು. ಚಿತ್ರದುರ್ಗ, ಧಾರವಾಡ, ದಾವಣಗೆರೆ, ಮಂಡ್ಯ ಮತ್ತು ಬೆಂಗಳೂರು ದಕ್ಷಿಣ ನ್ಯಾಯಾಲಯಗಳಿಗೆ ಈ ಬೆದರಿಕೆ ಕರೆಗಳು ಬಂದಿವೆ. ಎಲ್ಲಾ ಕಡೆಯೂ ಕೋರ್ಟ್ ಕಲಾಪ ಸ್ಥಗಿತಗೊಳಿಸಿ ನ್ಯಾಯಧೀಶರು, ವಕೀಲರು ಮತ್ತು ಸಿಬ್ಬಂದಿಯನ್ನು ಹೊರಗೆ ಕಳುಹಿಸಲಾಯಿತು. ನಂತರ ಬಾಂಬ್ ಶೋಧಕ ದಳ ಮತ್ತು ಪೊಲೀಸರು ತೀವ್ರ ತಪಾಸಣೆ ನಡೆಸಿದರು. ಹೆಚ್ಚಿನ ಕಡೆ ಯಾವುದೇ ವಸ್ತು ಪತ್ತೆಯಾಗದ ಕಾರಣ ಇದು ಸುಳ್ಳು ಬೆದರಿಕೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಪೊಲೀಸರು ಇಮೇಲ್ ಮೂಲವನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸುತ್ತಿದ್ದಾರೆ.
ಮಂಡ್ಯದ ಕಾರೆಕಟ್ಟೆ ಗ್ರಾಮದ ಬಳಿಯ ಕೀರ್ತಿ ಕೆಮಿಕಲ್ಸ್ ಇಂಡಸ್ಟ್ರೀಸ್ ಕಾರ್ಖಾನೆಯೊಂದರಲ್ಲಿ ರಾಸಾಯನಿಕ ಸಂಗ್ರಹಣಾ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಸಾವಿಗೀಡಾಗಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ರಾಸಾಯನಿಕ ಕಾರ್ಖಾನೆಯನ್ನು ಸ್ಥಳಾಂತರಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದ್ದು, ಬಿಹಾರ ಮೂಲಕ ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಬಿಹಾರ ಮೂಲದ ಕಲೂಹ್‌ಖಾನ್ ಮತ್ತು ಅಶೋಕ್ ಮೃತ ಕಾರ್ಮಿಕರು. ಸ್ಫೋಟದಲ್ಲಿ ಖಾಸಿಂ, ರವಿ, ಮಹಾಂತೇಶ್, ರಾಜೀವ್‌ಕುಮಾರ್ ಗಂಭೀರವಾಗಿ ಗಾಯಗೊಂಡು ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲಸಮಯದಿಂದ ಕಾರೆಕಟ್ಟೆಯಿಂದ ಈ ಘಟಕದ ಸಾಮಗ್ರಿಗಳನ್ನು ಹೊಸ ಸ್ಥಳಕ್ಕೆ ಸಾಗಿಸುವ ಪ್ರಕ್ರಿಯೆ ನಡೆಯುತ್ತಿತ್ತು. ನಿನ್ನೆ ರಾಸಾಯನಿಕ ಟ್ಯಾಂಕ್ ಅನ್ನು ತೆರವುಗೊಳಿಸುತ್ತಿದ್ದಾಗ ಅವಘಡ ಸಂಭವಿಸಿದೆ.
40,000 ರೂ. ಲಂಚ ಸ್ವೀಕರಿಸುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿಯ ವಿಶೇಷ ಭೂ ಸ್ವಾಧೀನಾಧಿಕಾರಿ ಸಿದ್ದಲಿಂಗ ರೆಡ್ಡಿ ಮತ್ತು ಗ್ರಾಮ ಸಹಾಯಕ ರಾಜೇಶ್ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಶಿವಮೊಗ್ಗ ವಿಶೇಷ ಭೂ ಸ್ವಾಧೀನಾಧಿಕಾರಿ ಕಛೇರಿಗೆ ಓತಿಘಟ್ಟ ಗ್ರಾಮದ ಕೇಶವಮೂರ್ತಿ ಎಂಬುವವರು ತಮ್ಮ ಎರಿಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ಬಾಡಿಗೆಗೆ ನೀಡಿದ್ದರು. 2025ರ ನವೆಂಬರ್ ತಿಂಗಳ ಬಾಡಿಗೆ ಹಣದ ಚೆಕ್ ನೀಡಲು ಸಿದ್ದಲಿಂಗ ರೆಡ್ಡಿ ಕೇಶವಮೂರ್ತಿಗೆ 40,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಕೇಶವಮೂರ್ತಿ ಲೋಕಾಯುಕ್ತರಿಗೆ ದೂರು ನೀಡಿದ್ದರು.
Advertisement