
ರಸ್ತೆ ಬದಿ ತಡೆಗೋಡೆ ನಿರ್ಮಿಸುವ ಕಾಮಗಾರಿಗಾಗಿ ಗುತ್ತಿಗೆ ರೂಪದಲ್ಲಿ ಗುತ್ತಿಗೆದಾರ ವಿಜಯ್ ಪೂಜಾರ್ ಅವರಿಂದ 5 ಲಕ್ಷ ರೂಪಾಯಿ ಕಮಿಷನ್ ಪಡೆಯುತ್ತಿದ್ದ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಚಂದ್ರು ಲಮಾಣಿ ಒಡೆತನದ ಬಾಲಾಜಿ ಆಸ್ಪತ್ರೆಯ ಮೇಲೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಲೋಕಾಯುಕ್ತ ಅಧಿಕಾರಿಗಳ ದಾಳಿ ವೇಳೆ ಶಾಸಕ ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎಗಳಾದ ಮಂಜುನಾಥ್ ಹಾಗೂ ಗುರುನಾಯಕ್ ಸಹ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಇತರೆ ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯ ಮುಂದುವರಿದಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಮುಡಾ ಮಾಜಿ ಆಯುಕ್ತ ಡಿಬಿ ನಟೇಶ್ ಅವರಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕೋಟಿ ಕೋಟಿ ಲಂಚ ಪಡೆದಿದ್ದಾರೆ ಎಂಬ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ನಿನ್ನೆ ಸಿಸಿಬಿ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದರು. 23 ಗಂಟೆಗೂ ಹೆಚ್ಚು ಕಾಲ ಸಿಸಿಬಿ ವಿಚಾರಣೆ ಬಳಿಕ ಇದೀಗ ಸ್ನೇಹಮಯಿ ಕೃಷ್ಣ ಉಲ್ಟಾ ಹೊಡೆದಿದ್ದಾರೆ. ವಿನೋದ್ ಮತ್ತು ಮಾಜಿ ಮುಡಾ ಆಯುಕ್ತ ನಟೇಶ್ ನಡುವಿನ ಹಣಕಾಸಿನ ವಿವಾದಕ್ಕೆ ಸಂಬಂಧಿಸಿದ ಆಡಿಯೋದಲ್ಲಿ ಶಾಲಿನಿ ರಜನೀಶ್ ಬಗ್ಗೆ ನೀಡಲಾದ ಮಾಹಿತಿ ಸುಳ್ಳು ಎಂದು ಸ್ನೇಹಮಯಿ ಕೃಷ್ಣ ಒಪ್ಪಿಕೊಂಡಿದ್ದು ತಮ್ಮ ತಪ್ಪಿಗಾಗಿ ಶಾಲಿನಿ ರಜನೀಶ್ಗೆ ಸಾರ್ವಜನಿಕವಾಗಿ ಕ್ಷಮೆ ಕೋರಿದ್ದಾರೆ. ಮತ್ತೊಂದೆಡೆ, ಹಿರಿಯ ಕೆಎಎಸ್ ಅಧಿಕಾರಿ ಮತ್ತು ಅವರನ್ನು ಗುರಿಯಾಗಿಸಿಕೊಂಡು ನಕಲಿ ದಾಖಲೆ ಮತ್ತು ನಕಲಿ ಆಡಿಯೊ ಕ್ಲಿಪ್ ವೈರಲ್ ಮಾಡಿದ್ದ ವಿನೋದ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧದ ಒಳಭಾಗದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಹಿಂಪಡೆಯುವಂತೆ ಪತ್ರಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಹೊರಡಿಸಲಾದ ಹೊಸ ಆದೇಶವು ಇತ್ತೀಚಿನ ವರದಿಗಾರಿಕೆ ಪದ್ಧತಿಗೆ ತೊಡಕನ್ನುಂಟುಮಾಡುವುದಲ್ಲದೆ, ಸಚಿವರು ಮತ್ತು ಶಾಸಕರೊಂದಿಗೆ ಮಾತನಾಡುವುದಕ್ಕೂ ಕಷ್ಟವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಪತ್ರಕರ್ತರ ಪ್ರತಿನಿಧಿ ಮಂಡಳಿ ಮಹಾತ್ಮ ಗಾಂಧಿ ಪ್ರತಿಮೆಯ ಮುಂದೆ ಪ್ರತೀಕಾತ್ಮಕ ಪ್ರತಿಭಟನೆ ನಡೆಸಿದ ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಈ ಆದೇಶವನ್ನು ತಮ್ಮ ಸೂಚನೆಯ ಮೇರೆಗೆ ಹೊರಡಿಸಲಾಗಿದೆ. ಆದರೆ ಇದು ಸಂಪೂರ್ಣ ನಿಷೇಧವಲ್ಲ ಎಂದು ಸಮರ್ಥಿಸಿದರು. ಭದ್ರತಾ ಮತ್ತು ಆಡಳಿತಾತ್ಮಕ ಕಾರಣಗಳಿಂದಾಗಿ ನಿಷೇಧ ಹೇರಲಾಗಿತ್ತು. ಆದರೆ ಈಗ ಪರಿಷ್ಕೃತ ನಿಯಮಗಳಡಿ ಮಾಧ್ಯಮಗಳಿಗೆ ಪ್ರವೇಶ ಸಿಗುತ್ತದೆ ಎಂದರು.
2019 ರಿಂದ 143 ಕೋಟಿ ರೂಪಾಯಿ ಬಾಕಿ ಪಾವತಿ ಆಗಿಲ್ಲ ಎಂದು ಆರೋಪಿಸಿ ಖಾಸಗಿ ಡಯಾಗ್ನೋಸ್ಟಿಕ್ ಸಂಸ್ಥೆಯೊಂದು ಸೇವೆ ಸ್ಥಗಿತಗೊಳಿಸಿರುವುದರಿಂದ ರಾಜ್ಯದ ಹಲವು ಸರ್ಕಾರಿ ಆಸ್ಪತ್ರೆಗಳಲ್ಲಿ CT ಮತ್ತು MRI ಸ್ಕ್ಯಾನ್ ಸೇವೆಗಳು ವ್ಯತ್ಯಯಗೊಂಡಿವೆ. ಫೆ.18ರಿಂದ ಸೇವೆ ಬಂದ್ ಆಗಿದ್ದು, ಇದರಿಂದ ನೂರಾರು ರೋಗಿಗಳು ಆಸ್ಪತ್ರೆಗಳ ಮುಂದೆ ಅಸಹಾಯಕರಾಗಿ ನಿಲ್ಲುವಂತಾಗಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಇದು ಪಾಪರ್ ಸರ್ಕಾರ ಎಂದು ಆರೋಪಿಸಿತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಈ ಕುರಿತು ಸ್ಪಷ್ಟನೆ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 'ರೋಗಿಗಳಿಗೆ ತೊಂದರೆ ಆಗದಂತೆ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನಿಂಗ್ (CT Scanning) ವ್ಯವಸ್ಥೆ ಮಾಡಲಾಗಿದೆ. 13 ಆಸ್ಪತ್ರೆಗಳಲ್ಲಿ ತೊಂದರೆಯಾಗಿತ್ತು. ಆ 13 ಕಡೆ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪ್ರೊಸೆಸರ್ ಸಮಸ್ಯೆ ಇವತ್ತು ನಿವಾರಣೆ ಆಗುತ್ತದೆ. ಸಾರ್ವಜನಿಕರಿಗೆ ಮುಂದೆ ಯಾವುದೇ ಸಮಸ್ಯೆ ಆಗಲ್ಲ ಎಂದರು.
ಶಿವಾಜಿ ಜಯಂತಿ ವೇಳೆ ರಾಜ್ಯದ ಕೆಲವು ಕಡೆಗಳಲ್ಲಿ ಅಶಾಂತಿ ಉಂಟಾಗಿದೆ. ಬಾಗಲಕೋಟೆಯಲ್ಲಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಇದರ ಬೆನ್ನಲ್ಲೇ ಇದೀಗ ಕಲಬುರಗಿಯಲ್ಲೂ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ. ಚಿತ್ತಾಪೂರದ ರಾವೂರ ಗ್ರಾಮದಲ್ಲಿ ನಿನ್ನೆ ಸಂಜೆ ಛತ್ರಪತಿ ಶಿವಾಜಿ ಜಯಂತಿ ಹಿನ್ನೆಲೆ ಹಿಂದೂ ಯುವಕರು ಶಿವಾಜಿ ಭಾವಚಿತ್ರ ಮೆರವಣಿಗೆ ನಡೆಸುತ್ತಿದ್ದರು. ಈ ವೇಳೆ ನಡೆದ ಗಲಾಟೆಯಲ್ಲಿ ಮೂರು ನಾಲ್ಕು ಜನರಿಗೆ ಗಂಭೀರ ಗಾಯವಾಗಿದೆ. ಇನ್ನು ಕೋಮುಗಲಭೆ ಕುರಿತಂತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೇ ಹೀಗೆ ಯಾಕೆ ನಡೆಯುತ್ತೇ? ಬಾಂಬ್ ಹಾಕಿದವರನ್ನ ಬ್ರದರ್ಸ್ ಅಂತಾರೇ, ಗಣೇಶನ ವಿಗ್ರಹಕ್ಕೂ ಮಸೀದಿಯಿಂದ ಕಲ್ಲು ಬಿತ್ತು. ಮಸೀದಿಯಿಂದ ಶಿವಾಜಿ ಮೆರವಣಿಗೆಯಲ್ಲೂ ಕಲ್ಲು ಬೀಳ್ತಿದಾವೆ. ಕಲ್ಲು ಹೊಡೆದವರನ್ನ ಬಂಧಿಸ್ತಾರೆ ನಂತರ ಬಿಟ್ಟು ಕಳುಹಿಸುತ್ತಾರೆ. ಅದರ ಬದಲು ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
Advertisement