News wrap 25-02-2026| ಅಜೀಂ ಪ್ರೇಮ್ ಜಿ ವಿವಿ ವಿರುದ್ಧ ABVP ಪ್ರತಿಭಟನೆ, ಅಮಿತ್ ಶಾ ಗೆ ಪತ್ರ; ನಮಗೂ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಿ; ಖರ್ಗೆಗೆ MLC ಗಳ ಒತ್ತಾಯ; ಕಬ್ಬು ಬೆಳೆಗಾರರ ನೆರವಿನ ಮೊತ್ತ ಬಿಡುಗಡೆ

News wrap 25-02-2026| ಅಜೀಂ ಪ್ರೇಮ್ ಜಿ ವಿವಿ ವಿರುದ್ಧ ABVP ಪ್ರತಿಭಟನೆ, ಅಮಿತ್ ಶಾ ಗೆ ಪತ್ರ; ನಮಗೂ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಿ; ಖರ್ಗೆಗೆ MLC ಗಳ ಒತ್ತಾಯ; ಕಬ್ಬು ಬೆಳೆಗಾರರ ನೆರವಿನ ಮೊತ್ತ ಬಿಡುಗಡೆ

1. ಅಜೀಂ ಪ್ರೇಮ್ ಜಿ ವಿವಿ ವಿರುದ್ಧ ABVP ಪ್ರತಿಭಟನೆ, ಅಮಿತ್ ಶಾ ಗೆ ಪತ್ರ

ಆನೇಕಲ್ ಬಳಿಯಿರುವ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಎಬಿವಿಪಿ ಪ್ರತಿಭಟನೆ ನಡೆಸಿದೆ. ಈ ವೇಳೆ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ಉಂಟಾಗಿ, ಪೊಲೀಸರು 21 ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. 1991 ರ ಕುನಾನ್ ಪೋಷ್ಪೋರಾ ಘಟನೆಯನ್ನು ಚರ್ಚಿಸಲು ನಡೆಸಲಾಗಿದೆ ಎನ್ನಲಾದ ಕಾರ್ಯಕ್ರಮದ ವಿರುದ್ಧ ಈ ಪ್ರತಿಭಟನೆ ನಡೆಯಿತು. ಎಬಿವಿಪಿ ಕಾರ್ಯಕರ್ತರು ವಿಧ್ವಂಸಕ ಕೃತ್ಯ ಎಸಗಿದ್ದಾರೆಂದು ವರದಿಯಾದ ನಂತರ, ಸರ್ಜಾಪುರ ಪೊಲೀಸರು ಹಲವರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದರು. ಸ್ಪಾರ್ಕ್ ಎಂಬ ಸಂಘಟನೆಯು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮವನ್ನು ನಡೆಸಿತು ಎಂದು ಎಬಿವಿಪಿ ತಿಳಿಸಿದೆ. ಸ್ಪಾರ್ಕ್ ಎನ್ನುವ ಸಂಘಟನೆಯ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆ ಮಾಡಲಾಗುತ್ತಿದೆ ಎಂದು ಎಬಿವಿಪಿ ಸಂಘಟನೆ ಆರೋಪಿಸಿದೆ. ಕಾಶ್ಮೀರ ಭಾರತದ ಭೂಭಾಗವಲ್ಲ, ಭಾರತದವರು ಅಲ್ಲಿಗೆ ಹೋಗಿ ದೌರ್ಜನ್ಯ ಎಸಗುತ್ತಿದ್ದಾರೆ. ಸೈನಿಕರು ಅಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂಬ ಹೇಳಿಕೆಗಳನ್ನು ಸ್ಪಾರ್ಕ್ ಸಂಘಟನೆಯವರು ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಪಾರ್ಕ್ ಸಂಘಟನೆಗೆ ನಿಷೇಧ ಹೇರಬೇಕು ಮತ್ತು ವಿಶ್ವವಿದ್ಯಾಲಯ ಕ್ಷಮೆಯಾಚಿಸಬೇಕು, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರವನ್ನೂ ಬರೆದಿದೆ.

2. Mandya: ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ ಶೇ.96 ರಷ್ಟು ಅಕ್ರಮ ಇ-ಖಾತಾ; PDO ಸೇರಿ ನಾಲ್ವರು ಅಮಾನತು

ಇಂಡುವಾಳು ಗ್ರಾಮ ಪಂಚಾಯಿತಿಯಲ್ಲಿ 1,844 ಇ-ಖಾತಾಗಳನ್ನು ನಿಯಮಬಾಹಿರವಾಗಿ ವಿತರಿಸಿದ್ದಕ್ಕೆ ಮೂವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಮಂಡ್ಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಮಾನತುಗೊಳಿಸಿದ್ದಾರೆ. ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ನೀಡಿದ ಆದೇಶದ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ವಿತರಣೆಯಾಗಿರುವ ಒಟ್ಟು 1,929 ಇ-ಖಾತಾಗಳ ಪೈಕಿ ಶೇ 4 ರಷ್ಟು ಅಂದರೆ ಕೇವಲ 85 ಇ-ಖಾತಾಗಳು ಮಾತ್ರ ಕಾನೂನುಬದ್ಧವಾಗಿದ್ದು, ಉಳಿದ ಶೇ 96 ರಷ್ಟು ಅಕ್ರಮವೆಂದು ಕಂಡುಬಂದಿದೆ.

3. ದ್ವೇಷ ಭಾಷಣ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಸ್ 

ಯಾದಗಿರಿ ಜಿಲ್ಲೆಯಲ್ಲಿ ನಡೆದ ಶಿವಾಜಿ ಜಯಂತಿ ಆಚರಣೆ ಸಂದರ್ಭದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಫೆಬ್ರುವರಿ 21 ರಂದು ಶಿವಾಜಿ ಜಯಂತಿ ಕಾರ್ಯಕ್ರಮಕ್ಕೆ ಶಾಸಕರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಫ್‌ಐಆರ್ ಪ್ರಕಾರ, ಯತ್ನಾಳ್ ತಮ್ಮ ಭಾಷಣದ ಸಮಯದಲ್ಲಿ ಹಲವಾರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂದಿ ಕವಿತೆ ಉಲ್ಲೇಖಿಸಿ ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರು ಬಗ್ಗೆ ಹೇಳಿಕೆಗಳನ್ನು ನೀಡಿ, ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು 'ಲವ್ ಜಿಹಾದ್' ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ ಎಂದು ಆರೋಪ್[ಇಸಲಾಗಿದೆ.

4. ನಮಗೂ ಸಂಪುಟದಲ್ಲಿ ಪ್ರಾತಿನಿಧ್ಯ ಕೊಡಿ; ಖರ್ಗೆಗೆ MLC ಗಳ ಒತ್ತಾಯ

ಇತ್ತೀಚೆಗಷ್ಟೇ ಸಚಿವ ಸಂಪುಟ‌ ಪುನಾರಚನೆಗೆ 31 ಶಾಸಕರು ಒತ್ತಾಯ ಮಾಡಿ ಹೈಕಮಾಂಡ್‌ ನಾಯಕರಿಗೆ ಪತ್ರ ಬರೆದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನ 24 ಮಂದಿ ವಿಧಾನ ಪರಿಷತ್‌ ಸದಸ್ಯರೂ ಪತ್ರ ಬರೆದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿಯಾದ ಪರಿಷತ್‌ ಸದಸ್ಯರು, ಸೂಕ್ತ ಪ್ರಾತಿನಿಧ್ಯ ನೀಡುವಂತೆ ಒತ್ತಾಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಂತೆ 24 ಎಂಎಲ್‌ಸಿಗಳು ಸಹಿ ಮಾಡಿದ ಪತ್ರವನ್ನ ಖರ್ಗೆ ಅವರಿಗೆ ಸಲ್ಲಿಸಿದ್ದಾರೆ. ಸಂಪುಟದಲ್ಲಿ ಎಂಎಲ್‌ಸಿಗಳಿಗೆ ಪ್ರಾತಿನಿಧ್ಯ ಇಲ್ಲದಿರುವುದು ಅಸಮಾನತೆ, ನಿರುತ್ಸಾಹ ಭಾವನೆ ಉಂಟುಮಾಡುತ್ತೆ. ಇದು ಗುಂಪುಗಾರಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಕನಿಷ್ಠ 5 MLC ಗಳನ್ನು ಸಚಿವ ಸಂಪುಟದಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

5. ಕಬ್ಬು ಬೆಳೆಗಾರರ ನೆರವಿನ ಮೊತ್ತ ಬಿಡುಗಡೆ

ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ 2025-26 ನೇ ಸಾಲಿನಲ್ಲಿ ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಿದ ರೈತರಿಗೆ ಪ್ರತಿ ಟನ್ ಗೆ 50 ರೂಪಾಯಿ ಆರ್ಥಿಕ ನೆರವಿನ ಮೊತ್ತ 300 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ 2025 ರ ನವೆಂಬರ್ 8 ರಂದು ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ಎಫ್ಆರ್ ಪಿ ಮೇಲೆ 100 ರೂಪಾಯಿ ಆರ್ಥಿಕ ನೆರವು ನೀಡುವ ನಿರ್ಧಾರ ಪ್ರಕಟಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com