

ಶೆಟ್ಟಿಹಳ್ಳಿ: ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಲಾದ ಪಾದಚಾರಿ ಸಬ್‌ವೇ ಅನ್ನು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಇಂದು ಉದ್ಘಾಟಿಸಿದರು. ಬಳಿಕ ಕ್ಯಾಸಂದ್ರ ರೈಲು ನಿಲ್ದಾಣದಲ್ಲಿ ಹೊಸ ಪಾದಚಾರಿ ಮೇಲ್ಸೇತುವೆ (FOB) ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದರು.
ಹೊಸ ಪಾದಚಾರಿ ಸಬ್‌ವೇ ಉದ್ಘಾಟನೆ ಬಳಿಕ ಮಾತನಾಡಿದ ವಿ.ಸೋಮಣ್ಣ, ಇದರಿಂದ ಸ್ಥಳೀಯ ಜನರು ರೈಲು ಹಳಿಗಳನ್ನು ಸುರಕ್ಷಿತವಾಗಿ ಮತ್ತು ಸುಲಭವಾಗಿ ದಾಟಲು ಸಾಧ್ಯವಾಗುತ್ತದೆ. ತುಮಕೂರು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದರಿಂದ ಪ್ರಯಾಣಿಕರ ಬೇಡಿಕೆ ಪೂರೈಸಲು ರೈಲ್ವೆ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಬೇಕಾಗಿದೆ ಎಂದರು.
ತುಮಕೂರು–ದಾವಣಗೆರೆ ಮತ್ತು ತುಮಕೂರು–ರಾಯದುರ್ಗ ಹೊಸ ರೈಲು ಮಾರ್ಗಗಳಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿದಿದೆ. ಚಿತ್ರದುರ್ಗ ಮತ್ತು ದಾವಣಗೆರೆ ನಡುವಿನ ರೈಲು ಸಂಚಾರವನ್ನು ಶೀಘ್ರದಲ್ಲೇ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ದೀರ್ಘಕಾಲದಿಂದ ಬಾಕಿ ಉಳಿದಿರುವ ರೈಲ್ವೆ ಯೋಜನೆಗಳಿಗೆ ಈಗ ಆದ್ಯತೆ ನೀಡಲಾಗುತ್ತಿದೆ. ರಾಜ್ಯಾದ್ಯಂತ ಸುಮಾರು ₹52,000 ಕೋಟಿ ರೂ. ಮೊತ್ತದ ರೈಲ್ವೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ರಸ್ತೆ ಮೇಲ್ಸೇತುವೆಗಳು ಮತ್ತು ರಸ್ತೆ ಕೆಳಸೇತುವೆಗಳು ನಿರ್ಮಾಣಕ್ಕೆ ವಿಶೇಷ ಗಮನ ಹರಿಸಲಾಗಿದೆ. ಇದರ ಮೂಲಕ ಸುರಕ್ಷತೆ ಹೆಚ್ಚಿಸಿ, ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.
ತುಮಕೂರು ಗ್ರಾಮೀಣ ಕ್ಷೇತ್ರದ ಶಾಸಕ ಸುರೇಶ್ ಗೌಡ ಮಾತನಾಡಿ, ತುಮಕೂರು–ದಾವಣಗೆರೆ ಮತ್ತು ತುಮಕೂರು–ರಾಯದುರ್ಗ ರೈಲು ಯೋಜನೆಗಳು ಸಮರ್ಪಕವಾಗಿ ಸಾಗುತ್ತಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಬಳಿಕ ವಿ. ಸೋಮಣ್ಣ, ತುಮಕೂರಿನ ಬಡ್ಡಿಹಳ್ಳಿ, ಪಂಡಿತನಹಳ್ಳಿ ಗೇಟ್ ಹಾಗೂ ಮೈದಾಳ ಗೇಟ್ ಗಳಲ್ಲಿ ಪ್ರಗತಿಯಲ್ಲಿರುವ ರಸ್ತೆ ಮೇಲ್ಸೇತುವೆ ಕಾಮಗಾರಿಗಳ ಪರಿವೀಕ್ಷಣೆ ನಡೆಸಿ, ಶೀಘ್ರವೇ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
Advertisement