

ಚಾಮರಾಜನಗರ: ತಾಲೂಕಿನ ನಂಜೆದೇವನಪುರದಲ್ಲಿ 5 ಹುಲಿಗಳ ಕೂಂಬಿಂಗ್ ನಡೆದಿದ್ದು, ಮಂಗಳವಾರ ಮಧ್ಯರಾತ್ರಿ ಒಂದು ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ.
ನಂಜೆದೇವನಪುರದಲ್ಲಿ 5 ಹುಲಿಗಳ ಓಡಾಟದಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಕಲ್ಪುರದಲ್ಲಿ ಕಳೆದ ತಿಂಗಳು ಕ್ಯಾಮರಾ ಟ್ರ್ಯಾಪ್ ನಲ್ಲಿ ಸೆರೆಯಾಗಿದ್ದ ಇದೇ ಗಂಡು ಹುಲಿಯನ್ನು ಮಂಗಳವಾರ ಮಧ್ಯರಾತ್ರಿ ಕೂಬಿಂಗ್ ನಡೆಸಿದ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಅರಿವಳಿಕೆ ನೀಡಿ ಸೆರೆ ಹಿಡಿದ್ದಾರೆ.
ಡಿಸೆಂಬರ್ 20ರಂದು ಗ್ರಾಮದ ಪ್ರಶಾಂತ್ ಎಂಬುವರ ತೋಟದಲ್ಲಿ ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿ ಹುಲಿಗಳು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದ್ದವು. ಅಂದಿನಿಂದ ಅರಣ್ಯಾಧಿಕಾರಿಗಳು ಹುಲಿಗಳ ಸೆರೆಗೆ ಆನೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವೀರನಪುರ ಬಳಿಯ ಆನೆಮಾಡು ಸರೋವರದ ಬಳಿ 7 ವರ್ಷದ ಗಂಡು ಹುಲಿಯನ್ನು ಸುರಕ್ಷಿತವಾಗಿ ಸೆರೆಹಿಡಿದು ಹುಲಿ ಕೇಂದ್ರ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನಂಜದೇವನಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬಳಿ ಕಂಡುಬಂದ ತಾಯಿ ಹುಲಿ ಮತ್ತು ಅದರ ನಾಲ್ಕು ಮರಿಗಳಿಗಾಗಿ ಹುಡುಕಾಟ ಮುಂದುವರಿಸಿದ ಅರಣ್ಯ ಇಲಾಖೆ, ಮಂಗಳವಾರ ಸಂಜೆ 6 ಗಂಟೆ ಸುಮಾರಿಗೆ ಥರ್ಮಲ್ ಡ್ರೋಣ್ ಗಳ ಮೂಲಕ ಹುಲಿಯ ಚಲನವಲನವನ್ನು ಗಮನಿಸಿತು.
ಸೆರೆ ಹಿಡಿದ ಹುಲಿಯನ್ನು ಬಿ ಆರ್ ಟಿ ಅರಣ್ಯಕ್ಕೆ ಕೊಂಡೊಯ್ಯಲಾಯಿತು. ಏತನ್ಮಧ್ಯೆ ಈ ಮುಂಚೆ ಪತ್ತೆಯಾಗಿದ್ದ ತಾಯಿ ಮತ್ತು ನಾಲ್ಕು ಮರಿ ಹುಲಿಗಳು ಈಗ ನಂಜೇದೇವನಪುರ ವೀರನಪುರ ಸುತ್ತಮುತ್ತ ಕಂಡು ಬಂದಿಲ್ಲ. ಅವು ಬೇರೆಡೆಗೆ ಹೋಗಿರುವ ಸಾದ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. ಹುಲಿಗಳಿಗಾಗಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement