

ಮಾಗಡಿ: 17 ವರ್ಷದ ಬಾಲಕಿಯನ್ನು ಕಾರಿನಲ್ಲಿಅಪಹರಿಸಿ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಗ್ರಾಮಸ್ಥರಿಂದ ಒದೆ ತಿಂದ ಯು ಟ್ಯೂಬರ್ ನನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಶಿರಾದ ಆರ್‌ಜೆ ಡಿಜಿಟಲ್ ನ್ಯೂಸ್ ಯೂಟ್ಯೂಬ್ ಚಾನೆಲ್‌ನ ರವಿ ಜಮುನಾ ಬಂಧಿತ ಆರೋಪಿ. ಇನ್ನಿಬ್ಬರು ಆರೋಪಿಗಳಾದ ರವಿ ಸ್ನೇಹಿತ ಹಾಗೂ ಮಾಗಡಿಯ ವೆಂಕಟೇಶ್ ಘಟನೆಯಲ್ಲಿವಹಿಸಿರುವ ಪಾತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಡಿಸೆಂಬರ್ 31 ರಂದು ಬಾಲಕಿಯ ಚಿಕ್ಕಮ್ಮನ ಮನೆಯಲ್ಲಿಅವರ ಕುಟುಂಬ ಹೊಸ ವರ್ಷಾಚರಣೆಗೆ ಸೇರಿತ್ತು. ಮನೆಯಲ್ಲಿಸಂಭ್ರಮಾಚರಣೆ ಮುಗಿದ ಬಳಿಕ ಬಾಲಕಿ ರಾತ್ರಿ 2 ಗಂಟೆ ಸುಮಾರಿಗೆ ತನ್ನ ಮನೆಯತ್ತ ಹೋಗುತ್ತಿದ್ದಳು.
ಇದೇ ವೇಳೆ ಪಾರ್ಟಿ ಮುಗಿಸಿಕೊಂಡು ಕಾರಿನಲ್ಲಿ ಬಂದ ರವಿ ಹಾಗೂ ಆತನ ಸ್ನೇಹಿತರು, ಎದುರಿಗೆ ಸಿಕ್ಕ ಬಾಲಕಿಯನ್ನು ವೆಂಕಟೇಶ್ ಅವರ ತೋಟಕ್ಕೆ ಹೋಗುವ ದಾರಿ ಯಾವುದು ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿ ಮನೆಯತ್ತ ಹೋಗುತ್ತಿದ್ದ ಬಾಲಕಿಯನ್ನು ಆರೋಪಿಗಳು ಹಿಂಬಾಲಿಸಿ, ಏಕಾಏಕಿ ಕಾರಿನೊಳಕ್ಕೆ ಎಳೆದುಕೊಂಡಿದ್ದಾರೆ ಎಂದು ಬಾಲಕಿ ತಂದೆ ದೂರಿನಲ್ಲಿ ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ.
ರವಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದು, ತನ್ನೊಂದಿಗೆ ಸಹಕರಿಸುವಂತೆ ಬೆದರಿಸಿದ್ದಾನೆ. ಬಳಿಕ ಮಾಗಡಿಗೆ ಬಂದು ಮಾರ್ಗಮಧ್ಯೆ ಕಾರು ನಿಲ್ಲಿಸಿ ರವಿ ಕೆಳಗಿಳಿದಿದ್ದಾನೆ. ಆಗ ಕಾರಿನಲ್ಲಿಯೇ ಇದ್ದ ರವಿ ಮೊಬೈಲ್‌ನಿಂದ ಬಾಲಕಿಯು ತನ್ನ ಅಣ್ಣನಿಗೆ ಕರೆ ಮಾಡಿ ಘಟನೆ ಹಾಗೂ ತಾನಿರುವ ಜಾಗದ ಮಾಹಿತಿ ನೀಡಿದ್ದಾಳೆ. ಕೂಡಲೇ ಕುಟುಂಬದವರು ಬಾಲಕಿ ಹೇಳಿದ ಜಾಗಕ್ಕೆ ಕಾರಿನಲ್ಲಿ ಹೋಗಿದ್ದು, ಬಾಲಕಿಯನ್ನು ರಕ್ಷಿಸಿ, ಆರೋಪಿ ರವಿಯನ್ನು ಹಿಡಿದು ಒದೆ ನೀಡಿದ್ದಾರೆ. ಬಳಿಕ ಪೊಲೀಸರು ಆತನನ್ನು ಆರೆಸ್ಟ್ ಮಾಡಿದ್ದಾರೆ. ಅಲ್ಲದೆ, ಕೃತ್ಯಕ್ಕೆ ವೆಂಕಟೇಶ್ ಕುಮ್ಮಕ್ಕು ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ರವಿ, ಆತನ ಸ್ನೇಹಿತ ಹಾಗೂ ವೆಂಕಟೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ರವಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಪಾತ್ರದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
Advertisement