

ನವದೆಹಲಿ: VB G-RAM-G ಕಾಯ್ದೆ ಹಿಂಪಡೆಯುವಂತೆ ಮತ್ತು MGNREGA ಅನ್ನು ಹಕ್ಕು ಆಧಾರಿತ ಕಾನೂನಾಗಿ, ಕೆಲಸ ಮಾಡುವ ಹಕ್ಕನ್ನು ಮತ್ತು ಪಂಚಾಯತ್‌ಗಳ ಅಧಿಕಾರವನ್ನು ಪುನಃಸ್ಥಾಪಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಜನವರಿ 10 ರಿಂದ ಫೆಬ್ರವರಿ 25 ರವರೆಗೆ ರಾಷ್ಟ್ರವ್ಯಾಪಿ 'MGNREGA ಬಚಾವೋ ಸಂಗ್ರಾಮ್' ಆರಂಭಿಸುವುದಾಗಿ ಶನಿವಾರ ಘೋಷಿಸಿದೆ.
ಇಂದು ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್ ಮತ್ತು ಜೈರಾಮ್ ರಮೇಶ್ ಅವರು, ಈ ಹೊಸ VBG RAM G ಕಾಯ್ದೆಯ ಮೂಲಕ ಕೇಂದ್ರ ಸರ್ಕಾರ ಸಂಪೂರ್ಣ ಕೇಂದ್ರೀಕರಣವನ್ನು ಖಚಿತಪಡಿಸಿದೆ. ಏಕೆಂದರೆ "ಉದ್ಯೋಗವು ಇನ್ನು ಮುಂದೆ ಹೊಸ ಕಾಯ್ದೆಯಡಿಯಲ್ಲಿ ನಮ್ಮ ಹಕ್ಕಾಗುವುದಿಲ್ಲ" ಎಂದರು. ಅಲ್ಲದೆ ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದರು.
ಇಂಡಿಯಾ ಬ್ಲಾಕ್ ಪಕ್ಷಗಳ ಆಡಳಿತದ ರಾಜ್ಯಗಳು ಈ ಹೊಸ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೇ ಅಥವಾ ಅದನ್ನು ವಿರೋಧಿಸುತ್ತವೆಯೇ? ಎಂಬ ಪ್ರಶ್ನೆಗೆ, ಈ ಸಂಬಂಧ ಮುಂದಿನ ದಿನಗಳಲ್ಲಿ ಎಲ್ಲಾ ಮಿತ್ರ ಪಕ್ಷಗಳೊಂದಿಗೆ ಕಾಂಗ್ರೆಸ್ ಸಮಾಲೋಚನೆ ನಡೆಸಲಿದೆ ಎಂದು ವೇಣುಗೋಪಾಲ್ ಹೇಳಿದರು.
ವಿರೋಧ ಪಕ್ಷಗಳು ಆಡಳಿತದಲ್ಲಿರುವ ಮುಖ್ಯಮಂತ್ರಿಗಳಲ್ಲಿ ಒಮ್ಮತ ಮೂಡಿಸಲಾಗುವುದು ಮತ್ತು "ಈ ಕುರಿತು ಹೇಗೆ ಮುಂದುವರಿಯುವುದು ಎಂಬುದರ ಬಗ್ಗೆ ಚರ್ಚಿಸುತ್ತೇವೆ" ಎಂದು ವೇಣುಗೋಪಾಲ್ ತಿಳಿಸಿದರು.
ಬಿಜೆಪಿ ಆಡಳಿತವಿರುವ ಯಾವುದೇ ರಾಜ್ಯಗಳು ಸಹ ಜಿ ರಾಮ್ ಜಿ ಕಾನೂನನ್ನು ಜಾರಿಗೆ ತರುವ ಸ್ಥಿತಿಯಲ್ಲಿಲ್ಲ. ಇದು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ವೇಣುಗೋಪಾಲ್ ಈ ಕಾಯ್ದೆಯನ್ನು ಒಕ್ಕೂಟ ವ್ಯವಸ್ಥೆ ಮೇಲಿನ ದಾಳಿ ಎಂದು ಟೀಕಿಸಿದರು. ಏಕೆಂದರೆ "ಇದನ್ನು ಜಾರಿಗೆ ತರುವ ಮುನ್ನ ಯಾವುದೇ ರಾಜ್ಯಗಳೊಂದಿಗೆ ಚರ್ಚೆ ನಡೆಸಿಲ್ಲ" ಎಂದರು.
'ಎಂಜಿಎನ್‌ಆರ್‌ಇಜಿಎ ಬಚಾವೊ ಸಂಗ್ರಾಮ್' ಮೂಲಕ, ದೇಶದ ಪ್ರತಿಯೊಂದು ಹಳ್ಳಿಗೆ ಈ ವಿಷಯವನ್ನು ಕೊಂಡೊಯ್ಯುವ ಮೂಲಕ, ಜನರ ಕೆಲಸ ಮಾಡುವ ಹಕ್ಕನ್ನು ರಕ್ಷಿಸುತ್ತೇವೆ. ಪಂಚಾಯತ್ ರಾಜ್ ಸಂಸ್ಥೆಗಳನ್ನು ರಕ್ಷಿಸಲು ಮತ್ತು ಮಹಿಳಾ ಕಾರ್ಮಿಕರು, ದಲಿತರು, ಆದಿವಾಸಿಗಳು ಹಾಗೂ ಗ್ರಾಮೀಣ ಬಡವರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ ಎಂದು ಅವರು ಹೇಳಿದರು.
Advertisement