

ಬಳ್ಳಾರಿ: ಬಳ್ಳಾರಿಯ ಬ್ಯಾನರ್ ಗಲಾಟೆಗೆ ಪ್ರಕರಣಕ್ಕೆಸಂಬಂಧಿಸಿದಂತೆ ಗಲಾಟೆ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆಂದು ಬಳ್ಳಾರಿಗೆ ನೇಮಕವಾಗಿದ್ದ ಎಸ್‌ಪಿ ಪವನ್ ನೆಜ್ಜೂರ್ ಅವರನ್ನು ಅಮಾನತು ಮಾಡಲಾಗಿದೆ.
ಇದರ ಬೆನ್ನಲ್ಲೇ ಪವನ್ ನೆಜ್ಜೂರ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆಂಬ ಮಾತುಗಳು ಕೇಳಿ ಬಂದಿದೆ. ಆದರೆ, ಪವನ್ ನೆಜ್ಜೂರ್ ಅವರು ತಮ್ಮ ಸ್ನೇಹಿತನ ಫಾರ್ಮ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಈ ಕುರಿತು ಪವನ್ ನೆಜ್ಜೂರ್ ಅವರ ತಂದೆ ಸ್ಫಷ್ಟನೆ ನೀಡಿದ್ದಾರೆ. 2016ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಪವನ ನೆಜ್ಜೂರ್ ಅವರ ತಂದೆಯಾಗಿ ಕೆಲ ವಿಷಯಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ. ಐಪಿಎಸ್ ಅಧಿಕಾರಿಯಾಗಿರುವ ನನ್ನ ಪುತ್ರ ಪವನ್ ನೆಜ್ಜೂರು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಶಿಸ್ತು, ಕಾರ್ಯಕ್ಷಮತೆ ಹಾಗೂ ಕಾನೂನು ಪಾಲನೆಗೆ ಬದ್ಧನಾಗಿ ಕೆಲಸ ಮಾಡುತ್ತಿದ್ದಾನೆ ಎಂಬ ಹೆಮ್ಮೆ ನಮಗಿದೆ. ಆದರೆ, ಬಳ್ಳಾರಿಯಲ್ಲಿ ನಡೆದ ಗಲಭೆಯ ಘಟನೆ ನಂತರ ನನ್ನ ಪುತ್ರನ ಬಗ್ಗೆ ಸುಳ್ಳು ವದಂತಿಗಳನ್ನು ಹರಡಿಸುತ್ತಿರುವುದು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ನಡೆದ ಗಲಭೆ ಪ್ರಕರಣದ ಸಂದರ್ಭದಲ್ಲಿ ನನ್ನ ಪುತ್ರ ಪವನ ನೆಜ್ಜೂರು ತಮ್ಮ ಜವಾಬ್ದಾರಿಯನ್ನು ಮರೆತಿಲ್ಲ. ಜನವರಿ 1ರಂದು ಅಧಿಕಾರ ಸ್ವೀಕರಿಸಿ, ಸಂಪ್ರದಾಯದಂತೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ, ಸುಮಾರು ಒಂದು ದಶಕ ಕಾಲ ಸೇವೆ ಸಲ್ಲಿಸಿದ್ದ ಲೋಕಾಯುಕ್ತ ಪೋಲೀಸರಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸ್ವೀಕರಿಸಿದ ನಂತರ ನಡೆದ ಈ ಅಹಿತಕರ ಘಟನೆಯ ಸ್ಥಳಕ್ಕೆ ತಕ್ಷಣವೇ ಧಾವಿಸಿ ಪರಿಸ್ಥಿತಿ ನಿಭಾಯಿಸಿದ್ದು ಅಲ್ಲಿರುವ ಎಲ್ಲರಿಗೂ ಗೊತ್ತು.
ಶಿಸ್ತಿನ ಸಿಪಾಯಿ, ದಕ್ಷ ಅಧಿಕಾರಿ ಆಗಿರುವ ನನ್ನ ಮಗ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆಯ ಘಟನೆ ಅನಿರೀಕ್ಷಿತ. ಆದಾಗ್ಯೂ ಕಾನೂನು ಸುವ್ಯವಸ್ಥೆಯ ಪಾಲನೆಗೆ ಸಂಪೂರ್ಣವಾಗಿ ಶ್ರಮಿಸಿ ಬೆಳಗಿನ ಜಾವವೂ ಮೃತರ ಅಂತ್ಯಕ್ರಿಯೆ ಸಂದರ್ಭ ಬಂದೋಬಸ್ತ್ ವ್ಯವಸ್ಥೆ ಮಾಡಿಯೂ ಅಮಾನತಿಗೆ ಒಳಪಟ್ಟಿದ್ದು, ಆತನಿಗೆ ಸಹಜವಾಗಿ ಬೇಸರ ಮೂಡಿಸಿದೆ. ಇದರಿಂದ ಆಘಾತಕ್ಕೆ ಒಳಗಾಗಿದ್ದು ನಿಜವೇ ಹೊರತು ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ವಿಷಯವಾಗಿ ಕಪೋಲಕಲ್ಪಿತ ವಿಷಯಗಳು ಚರ್ಚೆ ಆಗುತ್ತಿರುವುದು ನಮಗೆ ಬೇಸರ ಹಾಗೂ ಮಗನ ಮರ್ಯಾದೆ, ಭವಿಷ್ಯದ ಬಗ್ಗೆ ಅತ್ಯಂತ ಆತಂಕ ಮೂಡಿಸಿದೆ. ಒಬ್ಬ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ನನ್ನ ಪುತ್ರ ಪವನ್ ನೆಜ್ಜೂರ್ ಆಘಾತಕ್ಕೆ ಒಳಗಾಗಿದ್ದಾನೆ, ಅಲ್ಲಿ ನಡೆಯಬಾರದ ಘಟನೆ ನಡೆದು ಹೋಗಿದೆ, ಅದೂ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ, ಅಲ್ಲದೆ ದಕ್ಷತೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದಾಗಲೂ ಅನುಭವಿಸಬೇಕಾದ ಅಮಾನತಿನ ಶಿಕ್ಷೆ ಆತನನ್ನು ಚಿಂತೆಗೀಡು ಮಾಡಿದೆ. ಅದೇನಿದ್ದರೂ ನನ್ನ ಪುತ್ರ ಐಪಿಎಸ್ ಅಧಿಕಾರಿ ಪವನ ನೆಜ್ಜೂರ್ ಒಬ್ಬ ಸರ್ಕಾರಿ ಅಧಿಕಾರಿಯಾಗಿ ಸರ್ಕಾರದ ಆದೇಶವನ್ನು ಶಿರಸಾ ಪಾಲಿಸಿದ್ದರಲ್ಲಿ ಅನುಮಾನವೇ ಇಲ್ಲ.
ಹೀಗಾಗಿ ನನ್ನ ಪುತ್ರನ ಬಗ್ಗೆ ಅನಗತ್ಯ ಹಾಗೂ ಸುಳ್ಳು ವದಂತಿಗಳನ್ನು ಹರಡಿಸದಂತೆ ಮತ್ತು ಆಘಾತಕ್ಕೆ ಒಳಗಾಗಿರುವ ಪುತ್ರ ಪವನ ನೆಜ್ಜೂರು ಅವರಿಗೆ ಕೊಂಚ ವಿಶ್ರಾಂತಿಯ ಅಗತ್ಯ ಇದೆ ಎಂಬುವುದನ್ನು ತಮ್ಮೆಲ್ಲರ ಗಮನಕ್ಕೆ ತರುವಾಯಸುತ್ತಾ ಓರ್ವ ದಕ್ಷ ಅಧಿಕಾರಿಯ ತಂದೆಯಾಗಿ ನಿಮ್ಮೆಲ್ಲರಲ್ಲಿ ಮನವಿಸುವದರ ಜೊತೆಗೆ ನನ್ನ ಪುತ್ರನ ಅಮಾನತು ಕುರಿತು ಸರ್ಕಾರ ಮರುಪರಿಶೀಲನೆ ನಡೆಸಲು ವಿನಮ್ರವಾಗಿ ಕೋರುತ್ತೇನೆಂದು ತಿಳಿಸಿದ್ದಾರೆ.
ಈ ನಡುವೆ ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದ ಗೃಹ ಸಚಿವ ಪರಮೇಶ್ವರ್ ಅವರನ್ನು ಜಿಲ್ಲೆಯ ಎಸ್‌ಪಿ ಅಶೋಕ್ ಅವರು ಭೇಟಿ ಮಾಡಿದ್ದು, ಪವನ್ ಅವರ ಕುರಿತು ಮಾಹಿತಿ ನೀಡಿದ್ದಾರೆಂದು ಮೂಲಗಳು ತಿಳಿಸಿವೆ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಅಶೋಕ್ ಅವರು ನಿರಾಕರಿಸಿದ್ದು, ಅನುಮಾನಗಳು ಹೆಚ್ಚಾಗುವಂತೆ ಮಾಡಿದೆ.
Advertisement