

ರಾಯಚೂರು: ಅಣೆಕಟ್ಟಿನ ಹೊಸ ಕ್ರೆಸ್ಟ್ ಗೇಟ್‌ಗಳ ಅಳವಡಿಕೆಯನ್ನು ಜೂನ್ 2026ರೊಳಗೆ ಪೂರ್ಣಗೊಳಿಸಲಾಗುವುದು ಮತ್ತು ಮಳೆಗಾಲದ (ಖರೀಫ್) ಅವಧಿಯಲ್ಲೇ ನೀರು ಪೂರೈಕೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಭರವಸೆ ನೀಡಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಅಂಬಾಮಠದ ಆವರಣದಲ್ಲಿ ಶನಿವಾರ ನಡೆದ ಅಂಬಾದೇವಿ ಮಹಾರಥೋತ್ಸವ ಮತ್ತು ಜಂಬೂ ಸವಾರಿಗೆ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು.
ಈ ಸಂದರ್ಭದಲ್ಲಿ, ಅವರು 300 ಕೋಟಿ ರೂ. ವೆಚ್ಚದ ಅಂದಾಜು ಮೂರು ಏತ ನೀರಾವರಿ ಯೋಜನೆಗಳು ಸೇರಿದಂತೆ 400 ಕೋಟಿ ರೂ. ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯದಲ್ಲಿ ಒಟ್ಟು 42 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. 30 ಲಕ್ಷ ಹೆಕ್ಟೇರ್ ವ್ಯಾಪ್ತಿಯನ್ನು ಹೊಂದಿರುವ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ ಎಂದು ಹೇಳಿದರು.
‘ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ರೂ.431 ಕೋಟಿ ವೆಚ್ಚದಲ್ಲಿ ಪಾಪಯ್ಯ ಟನೆಲ್ ಕಾರ್ಯ ಮತ್ತು 33 ಗೇಟ್ ಅಳವಡಿಸುವ ಕಾರ್ಯ ಈಗಾಗಲೇ ನಡೆದಿದೆ. ಸಿಂಧನೂರ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ನೀಡಿದ ಅನುದಾನವನ್ನು ಶಾಸಕ ಹಂಪನಗೌಡ ಬಾದರ್ಲಿ ಅವರು ಸದ್ಬಳಕೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ.
ಸಿಂಧನೂರ ಕ್ಷೇತ್ರದ ಕುಡಿಯುವ ನೀರಿನ ಕೆರೆಗಳ ನಿರ್ಮಾಣ ಅಭಿವೃದ್ಧಿಗೆ ರೂ.13.42 ಕೋಟಿ, ಸಾಲಗುಂದ ಏತ ನೀರಾವರಿ ಯೋಜನೆಗೆ ರೂ. 71 ಕೋಟಿ ರೂ., ಒಳಬಳ್ಳಾರಿ ಏತ ನೀರಾವರಿ ಯೋಜನೆಗೆ ರೂ.43.10 ಕೋಟಿ, ಮುಳ್ಳೂರ ಗ್ರಾಮದ ಹತ್ತಿರ ಬ್ರಿಜ್ ಕಂ ಬ್ಯಾರೇಜ್ ಯೋಜನೆಗೆ ರೂ.29 ಕೋಟಿ ವೆಚ್ಚ ಮಾಡಿ ಈ ಭಾಗದ ಅನ್ನದಾತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
42 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಸುವ ಪ್ರಯತ್ನದಲ್ಲಿ ಈಗಾಗಲೇ 30 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಕೊಡಲಾಗಿದೆ. ಉಳಿದ 12 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಸಹ ನೀರು ಹರಿಸುವ ಕಾರ್ಯ ನಡೆಯುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಕೊನೆಯ ಭಾಗದ ರೈತರಿಗೆ ನೀರು ಕೊಡಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ ಎನ್ನುವುದು ಅಪ್ಪಟ ಸುಳ್ಳು. ನಾವು ಹಿಂದೆ ಬಿದ್ದಿಲ್ಲ. ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಾರ್ಯ ಎರಡೂ ನಡೆಯುತ್ತಿವೆ. ಅನ್ನಭಾಗ್ಯ, ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ, ಯುವನಿಧಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಇದುವರೆಗೆ ರಾಜ್ಯ ಸರ್ಕಾರವು ರೂ.1,12,000 ಕೋಟಿ ಖರ್ಚು ಮಾಡಿದ್ದೇವೆ. ಪ್ರಸಕ್ತ 2026ನೇ ಸಾಲಿನಲ್ಲೂ ಮತ್ತೆ ರೂ.52 ಸಾವಿರ ಕೋಟಿ ಖರ್ಚು ಮಾಡುತ್ತೇವೆ‘ ಎಂದರು.
Advertisement