

ಬೆಂಗಳೂರು: ಪೊಲೀಸರ ಕಣ್ಣು ತಪ್ಪಿಸಿ, ಸಂಚಾರ ನಿಯಮಗಳನ್ನು ಉಲ್ಲಂಘಿಸಿ ನಗರದಲ್ಲಿ ವಾಹನ ಚಲಾಯಿಸುವವರೇ ಎಚ್ಚರ... ಇನ್ನು ಮುಂದೆ ನಿಯಮ ಉಲ್ಲಂಘಿಸುವವರನ್ನು ಟ್ರಾಫಿಕ್ ಪೊಲೀಸರಷ್ಟೇ ಅಲ್ಲ, ಹೆಲ್ಮೆಟ್ ಕೂಡ ಪತ್ತೆ ಮಾಡಲಿದೆ...
ಏನಿದು ಅಂತೀರಾ ಇಲ್ಲಿದೆ ಸ್ಟೋರಿ...
ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ತಂತ್ರಜ್ಞಾನ ಬಳಸಿಕೊಂಡು ಸಂಚಾರ ನಿಯಮ ಉಲ್ಲಂಘಿಸುವ ಚಾಲಕರನ್ನು ತಡೆಯಲು ಅಸಾಧಾರಣ ಹೆಲ್ಮೆಟ್ ವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಹೆಲ್ಮೆಟ್ ಬೆಂಗಳೂರು ನಗರ ಪೊಲೀಸರ ಗಮನ ಸೆಳೆದಿದೆ.
ಹೆಲ್ಮೆಟ್‌ನಲ್ಲಿ ಕ್ಯಾಮೆರಾ ಮತ್ತು ಎಐ ಸಾಫ್ಟ್‌ವೇರ್ ಅಳವಡಿಸಲಾಗಿದ್ದು, ಹೆಲ್ಮೆಟ್ ಧರಿಸದೆ ಸವಾರಿ, ಸಿಗ್ನಲ್ ಜಂಪ್, ತಪ್ಪು ಲೇನ್ ಇತ್ಯಾದಿಗಳಂತಹ ಟ್ರಾಫಿಕ್ ಉಲ್ಲಂಘನೆಗಳನ್ನು ಗುರುತಿಸಿ, ಅದರ ಫೋಟೋ, ಸ್ಥಳ ಮತ್ತು ನಂಬರ್ ಪ್ಲೇಟ್‌ನೊಂದಿಗೆ ಪೊಲೀಸರಿಗೆ ಇಮೇಲ್ ಆಗಿ ಮಾಹಿತಿ ರವಾನಿಸುತ್ತದೆ.
ವಾಹನ ಸವಾರನೊಬ್ಬ ಹೆಲ್ಮೆಟ್ ಧರಿಸದೆ ಸವಾರಿ ಮಾಡುವುದನ್ನು ಲೈವ್‌ನಲ್ಲೇ ರಿಪೋರ್ಟ್ ಮಾಡಿರುವ ಫೋಟೋ ವೈರಲ್ ಆಗಿದೆ.
ಬೆಂಗಳೂರು ಮೂಲಕ ಟೆಕ್ಕಿ ಪಂಕಜ್ ತನ್ವರ್ ಅವರು ಈ ಹೆಲ್ಮೆಟ್'ನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ನಾನು ರಸ್ತೆಯಲ್ಲಿ ಮೂರ್ಖ ಜನರಿಂದ ಬೇಸತ್ತಿದ್ದರಿಂದ ನನ್ನ ಹೆಲ್ಮೆಟ್ ಅನ್ನು ಸಂಚಾರ ಪೊಲೀಸ್ ಸಾಧನವಾಗಿ ಬಳಸಲು ಪ್ರಾರಂಭಿಸಿದೆ. ಈ ಎಐ ವ್ಯವಸ್ಥೆಯು ಬಹುತೇಕ ನೈಜ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ. ಸಂಚಾರ ನಿಯಮ ಉಲ್ಲಂಘನೆಗಳನ್ನು ಗುರುತಿಸುತ್ತದೆ ಎಂದು ವಿವರಿಸಿದ್ದಾರೆ. ಈ ಸಾಧನವು ನಿಯಮ ಉಲ್ಲಂಘಿಸುವವರ ಚಿತ್ರಗಳನ್ನು ಸೆರೆಹಿಡಿಯುತ್ತದೆ, ಸ್ಥಳ ಮತ್ತು ನಂಬರ್ ಪ್ಲೇಟ್‌ನೊಂದಿಗೆ ನೇರವಾಗಿ ಪೊಲೀಸರಿಗೆ ಮಾಹಿತಿ ಕಳುಹಿಸುತ್ತದೆ ಎಂದು ಹೇಳಿದ್ದಾರೆ.
ಈಗಲಾದರೂ ಸುರಕ್ಷಿತವಾಗಿ ವಾಹನ ಸವಾರಿ ಮಾಡಿ ಅಥವಾ ವಿಷಾದಿಸಿ ಎಂದು ಬೆಂಗಳೂರಿಗರಿಗೆ ಕರೆ ನೀಡಿರುವ ಪಂಕಜ್, ಹೆಲ್ಮೆಟ್ ಇಲ್ಲದ ಸ್ಕೂಟರ್ ಸವಾರನ ಬಗ್ಗೆ ಲೈವ್‌ನಲ್ಲೇ ವರದಿ ಮಾಡುವುದನ್ನು ವಿಡಿಯೋದಲ್ಲಿ ಉದಾಹರಣೆಯಾಗಿ ಹಂಚಿಕೊಂಡಿದ್ದಾರೆ. ಪೋಸ್ಟ್ ವೈರಲ್ ಆಗಿದ್ದು, 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
ಹೊಸ ಅನ್ವೇಷಣೆಗೆ ನಗರ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಪಂಕಜ್ ಅವರ ಪೋಸ್ಟ್'ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೆಲ್ಮೆಟ್ ಆಧಾರಿತ ಸಂಚಾರ ಉಲ್ಲಂಘನೆ ಪತ್ತೆ ಪರಿಕಲ್ಪನೆಯ ಕುರಿತು ನಿಮ್ಮ ಇತ್ತೀಚಿನ ಪೋಸ್ಟ್ ಅನ್ನು ನಾವು ನೋಡಿದ್ದೇವೆ. ರಸ್ತೆ ಸುರಕ್ಷತಾ ದೃಷ್ಟಿಕೋನದಿಂದ ಈ ಕಲ್ಪನೆಯು ನವೀನ ಮತ್ತು ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
Advertisement