

ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಮಠದಲ್ಲಿ ಸೋಮವಾರ ನಡೆದ ರಥೋತ್ಸವದಲ್ಲಿ ಸುಮಾರು 10 ಲಕ್ಷ ಭಕ್ತರು ಭಾಗವಹಿಸಿದ್ದರು.
ಕೊಪ್ಪಳದವರೇ ಆದ, ಮೇಘಾಲಯ ರಾಜ್ಯಪಾಲ ಎಚ್.ಸಿ. ವಿಜಯಶಂಕರ್ ಅವರು ಧ್ವಜಾರೋಹಣ ಮಾಡುವ ಮೂಲಕ ಗವಿಸಿದ್ಧೇಶ್ವರ ಮಹಾರಥೋತ್ಸವವನ್ನು ಉದ್ಘಾಟಿಸಿದರು. ಐತಿಹಾಸಿಕ ವೈಭವದ ಈ ಜಾತ್ರೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಗವಿ ಮಠದ ಮಠಾಧೀಶ ಅಭಿನವ ಗವಿಸಿದ್ದೇಶ್ವರ ಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದರಾದ ಜಗದೀಶ್ ಶೆಟ್ಟರ್ ಮತ್ತು ಬಸವರಾಜ ಬೊಮ್ಮಾಯಿ ಸೇರಿದಂತೆ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.
ಮಠದ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ರಥವನ್ನು ಪೂಜಿಸಿದ ನಂತರ, ರಥವನ್ನು ಎಳೆಯಲಾಯಿತು. ಜನರು ಉತ್ತತಿ, ಬಿಲ್ಪತ್ರೆ, ಬಾಳೆಹಣ್ಣು ಮತ್ತು ನಾಣ್ಯಗಳನ್ನು ರಥದ ಕಡೆಗೆ ಎಸೆದು ಭಕ್ತಿ -ಭಾವ ಮೆರೆದಿದ್ದಾರೆ.
ಭಕ್ತರು ಒಂದು ವಾರ ಮುಂಚಿತವಾಗಿ ಜಾತ್ರೆಗೆ ಬರಲು ಆರಂಭಿಸಿದ್ದು, ಕಳೆದ ಎರಡು ತಿಂಗಳಿನಿಂದ ಅನೇಕ ಗ್ರಾಮಸ್ಥರು ಟ್ರ್ಯಾಕ್ಟರ್‌ಗಳು ಮತ್ತು ಮಿನಿ ಸರಕು ವಾಹನಗಳಲ್ಲಿ ಜೋಳದ ರೊಟ್ಟಿ, ಗೋಧಿ, ತೊಗರಿ ಬೇಳೆ, ಅಕ್ಕಿ ಮತ್ತು ತರಕಾರಿಗಳಂತಹ ಕಾಣಿಕೆಗಳನ್ನು ತಂದಿದ್ದಾರೆ.
ಹಬ್ಬದ ಭಾಗವಾಗಿ, ಸಿಂಧನೂರು ವಿಜಯ್ ಮತ್ತು ಸ್ನೇಹಿತರ ಗುಂಪು ಈ ವರ್ಷ 10 ಲಕ್ಷ ಮೈಸೂರು ಪಾಕ್ ತಯಾರಿಸಿತು. ಕಳೆದ ಒಂದು ವಾರದಿಂದ ಮಠದ ಆವರಣದ ಮುಂದೆ ಹಾಕಲಾದ ನೂರಾರು ಮಳಿಗೆಗಳು ಉತ್ತಮ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದ್ದು, ಅನೇಕ ಮಳಿಗೆಗಳ ಮಾಲೀಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಮಠದ ಆವರಣದಲ್ಲಿ ದೊಡ್ಡ ವೇದಿಕೆಯನ್ನು ನಿರ್ಮಿಸಲಾಗಿತ್ತು ಮತ್ತು ಲಕ್ಷಾಂತರ ಭಕ್ತರು ಸಮೀಪದ ಗುಡ್ಡ ಮತ್ತು ಇತರ ಸ್ಥಳಗಳಲ್ಲಿ ಕುಳಿತು ಕಾರ್ಯಕ್ರಮಗಳನ್ನು ವೀಕ್ಷಿಸಿದರು.
ದಾಸೋಹದಲ್ಲಿ ಹೊಸ ದಾಖಲೆ
ಈ ಬಾರಿ ದಾಖಲೆ ಪ್ರಮಾಣದ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, 25 ಲಕ್ಷ ರೊಟ್ಟಿ, 20 ಲಕ್ಷ ಮೈಸೂರು ಪಾಕ್, 500 ಕ್ವಿಂಟಾಲ್ ಮಾದಲಿ ಹಾಗೂ ಹತ್ತಾರು ಬಗೆಯ ಪಲ್ಯಗಳನ್ನ ಖುದ್ಧು ಭಕ್ತರೇ ವ್ಯವಸ್ಥೆ ಮಾಡಿದ್ದರು.
ಭಕ್ತರ ಹಸಿವು ನೀಗಿಸಲು ದಾಸೋಹದ ವ್ಯವಸ್ಥೆಗಳನ್ನು ಉತ್ತಮವಾಗಿ ಆಯೋಜಿಸಲಾಗಿದ್ದರಿಂದ, ಜನರು ಸಂಜೆಯವರೆಗೂ ಮಠದ ಸುತ್ತಲಿನ ಜಾತ್ರೆಯ ಜನಸಂದಣಿಯನ್ನು ವೀಕ್ಷಿಸುತ್ತಿದ್ದರು ಮತ್ತು ರಥೋತ್ಸವದ ನಂತರ ಭಕ್ತಿಯಿಂದ ಮನೆಗೆ ಮರಳಿದರು.
ಮಹಾದಾಸೋಹಕ್ಕೆ ಒಂದು ತಿಂಗಳ ಮೊದಲು ಸುತ್ತಮುತ್ತಲಿನ ಹಳ್ಳಿಗಳ ಜನರು ಮಠಕ್ಕೆ ಹೋಳಿಗೆ, ತುಪ್ಪ, ರೊಟ್ಟಿ, ಚಟ್ನಿ ಮತ್ತು ತರಕಾರಿಗಳನ್ನು ತರುವುದು ವಾಡಿಕೆ.
Advertisement