

ಬೆಂಗಳೂರು: ನಾಯಿ ಸಿಟ್ಟಿನಲ್ಲಿದ್ದಾಗ ಹೇಗೆ ವರ್ತಿಸುತ್ತದೆ, ಯಾವ ನಾಯಿಯ ಮನಸ್ಥಿತಿ ಹೇಗಿರುತ್ತದೆ ಎಂಬುದು ಅರ್ಥವಾಗಲ್ಲ. ಅದರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ, ರಸ್ತೆಗಳಲ್ಲಿ ನಾಯಿಗಳಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಸೂಚಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ.
ಪ್ರಾಣಿ ಪ್ರಿಯೆ ಆಗಿರುವ ರಮ್ಯಾ ಅವರು, ಗಂಡಸರ ಮನಸ್ಸನ್ನು ಅರ್ಥ ಮಾಡಿಕೊಳ್ಳೋಕೆ ಆಗಲ್ಲ. ಅವರು ಯಾವಾಗ ಅತ್ಯಾಚಾರ/ಕೊಲೆ ಮಾಡುತ್ತಾರೆಂದು ಗೊತ್ತಿಲ್ಲ. ಹಾಗಾದ್ರೆ ಎಲ್ಲ ಪುರುಷರನ್ನು ಜೈಲಿಗೆ ಹಾಕ್ಬೇಕಾ? ಎಂದು ಸುಪ್ರೀಂ ಕೋರ್ಟ್‌ಗೆ ರಮ್ಯಾ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಸುಪ್ರೀಂಕೋರ್ಟ್ನಲ್ಲಿ ಬೀದಿನಾಯಿಗಳ ಹಕ್ಕಿನ ಪರವಾಗಿ ವಾದಿಸುತ್ತಿರುವ ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ವಾದವನ್ನು ಕೊಂಡಾಡಿದ್ದಾರೆ. ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದರ ವಿರುದ್ಧ ವಾದಿಸಿರುವ ಕೆಕೆ ವೇಣುಗೋಪಾಲ್ ‘ಭಾರತದಲ್ಲಿ 5.25 ಕೋಟಿ ನಾಯಿಗಳಿವೆ. ಅವುಗಳನ್ನು ಆಶ್ರಯ ತಾಣದಲ್ಲಿ ಇಡಲು ದೇಶದಾದ್ಯಂತ 77347 ಆಶ್ರಯ ತಾಣಗಳು ಬೇಕಾಗುತ್ತವೆ. (ಪ್ರತಿ ಆಶ್ರಯ ತಾಣದಲ್ಲಿ 200 ನಾಯಿಗಳು). ಪ್ರತಿ ನಾಯಿಗೆ ಆಹಾರ ನೀಡಲು ದಿನಕ್ಕೆ 40 ರೂಪಾಯಿ ಬೇಕಾಗುತ್ತದೆ ಎಂದಾದರೆ ಅಷ್ಟು ನಾಯಿಗಳನ್ನು ಸಾಕಲು ಪ್ರತಿ ದಿನ ಆಹಾರದ ವೆಚ್ಚವೇ 200 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಈಗ ದೇಶದಲ್ಲಿ ಇರುವ ಲಕ್ಷಾಂತರ ಶಾಲೆಗಳಲ್ಲಿಯೇ ಸರಿಯಾದ ಸೌಕರ್ಯ ಇಲ್ಲ ಹೀಗಿರುವಾಗ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಮೂಲಕ ರಮ್ಯಾ ಅವರು ನ್ಯಾಯಾಲಯದ ಅಭಿಪ್ರಾಯವನ್ನು ಪುರುಷರ ಮನಸ್ಥಿತಿಗೆ ಹೋಲಿಸುವ ಮೂಲಕ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
Advertisement