

ಬಳ್ಳಾರಿ: ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಮುಂದೆ ಬ್ಯಾನರ್ ವಿಚಾರವಾಗಿ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬರು ಉನ್ನತ ಅಧಿಕಾರಿಯ ತಲೆ ದಂಡವಾಗಿದೆ.
ಪೊಲೀಸ್ ಐಜಿ ವರ್ತಿಕಾ ಕಟಿಯಾರ್ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚೆಗೆ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತುಗೊಳಿಸಲಾಗಿತ್ತು. ಅಲ್ಲದೇ ಬಳ್ಳಾರಿ ವಲಯಕ್ಕೆ ನೂತನ ಐಜಿ ಆಗಿ ಪಿಎಸ್ ಹರ್ಷ ಹಾಗೂ ನೂತನ ಎಸ್ಪಿ ಆಗಿ ಡಾ.ಸುಮನ್ ಡಿ ಪೆನ್ನೇಕರ್ ಅವರನ್ನ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಜ.1 ರಂದು ಬಳ್ಳಾರಿ ಎಸ್‌ಪಿಯಾಗಿ ಪವನ್ ನೆಜ್ಜೂರ್ ಶೋಭಾರಾಣಿ ಅವರಿಂದ ಅಧಿಕಾರ ಸ್ವೀಕರಿಸಿದ್ದರು. ಬ್ಯಾನರ್ ಗಲಾಟೆ ಪ್ರಕರಣವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂಬ ಕಾರಣ ನೀಡಿ ಅಮಾನತು ಮಾಡಲಾಗಿತ್ತು. ಅಲ್ಲದೇ ಬಳ್ಳಾರಿ ರೇಂಜ್ ಐಜಿ ಆಗಿದ್ದ ವರ್ತಿಕಾ ಕಟಿಯಾರ್ ಅವರು ಈ ಪ್ರಕರಣವನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ಹೀಗಾಗಿ ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಡಿಜಿ-ಐಜಿಪಿ ಕಡೆಯಿಂದ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿತ್ತು. ಹೀಗಾಗಿ ಐಜಿ ವರ್ತಿಕಾ ಕಟಿಯಾರ್ ಅವರನ್ನ ಸರ್ಕಾರ ವರ್ಗಾವಣೆ ಗೊಳಿಸಿದೆ.
ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣದಲ್ಲಿ 26 ಮಂದಿ ಹಾಗೂ ಒಬ್ಬ ಖಾಸಗಿ ಗನ್‌ಮ್ಯಾನ್ ಬಂಧಿತರಾಗಿದ್ದಾರೆ. ಘಟನೆಯಲ್ಲಿ ಬಳಸಿದ್ದ ಬುಲೆಟ್‌ಗಳು, ಗಾಜಿನ ಬಾಟಲಿಗಳು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Advertisement