

ಬೆಂಗಳೂರು: ಮಾಜಿ ಸಚಿವ ಗಲಿ ಜನಾರ್ಧನ ರೆಡ್ಡಿ ಅವರ ನಿವಾಸದ ಹೊರಗೆ ನಡೆದ ಬ್ಯಾನರ್ ಘರ್ಷಣಾ ಪ್ರಕರಣದಲ್ಲಿ ಗನ್‌ಮ್ಯಾನ್ ಗುರುಚರಣ್ ಸಿಂಗ್ ಸೇರಿ 26 ಆರೋಪಿಗಳನ್ನು ಬಳ್ಳಾರಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತರಲ್ಲಿ 13 ಮಂದಿ ಬಿಜೆಪಿ ಮತ್ತು 10 ಮಂದಿ ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ. ಬಂಧಿತ ಆರೋಪಿಗಳಿಗೆ ಬಳ್ಳಾರಿ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್'ನಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿದ್ದಾರೆ.
ಹೊಸ ವರ್ಷದ ಮೊದಲ ದಿನವೇ ಗಣಿನಾಡು ಬಳ್ಳಾರಿ ಹೊತ್ತಿ ಉರಿದಿತ್ತು. ಘರ್ಷಣೆ ವೇಳೆ ನಡೆದಿದ್ದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರು ಸಾವನ್ನಪ್ಪಿದ್ದರು.
ಶಾಸಕ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್‌ನಿಂದಲೇ ಈ ಫೈರಿಂಗ್ ಆಗಿದೆ ಎನ್ನಲಾಗುತ್ತಿದ್ದು. ಗನ್‌ಮ್ಯಾನ್ ಗುರುಚರಣ್ ಸಿಂಗ್ ವಿರುದ್ಧವೇ ಪೊಲೀಸರು ಬೊಟ್ಟು ಮಾಡಿದ್ದರು. ಗುರುಚರಣ್ ಹಾರಿಸಿದ್ದ ಬುಲೆಟ್‌ಗೆ ರಾಜಶೇಖರ್ ಮೃತಪಟ್ಟಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಇದರಂತೆ ಗುರುಚರಣ್ ಸೇರಿದ 26 ಮಂದಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ಮೃತ ಕಾಂಗ್ರೆಸ್ ಕಾರ್ಯಕರ್ತನ ಮನೆಗೆ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಭೇಟಿ ನೀಡಲಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆಂದು ತಿಳಿದುಬಂದಿದೆ.
ಭಾನುವಾರ ಸಂಜೆ, ಎಂಆರ್‌ವಿ ಲೇಔಟ್‌ನಲ್ಲಿರುವ ಗುರುಚರಣ್ ಸಿಂಗ್ ಅವರ ನಿವಾಸದಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆಗೆ ಸಂಬಂಧಿಸಿದ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ನಡುವೆ ಶಾಸಕ ಭರತ್ ರೆಡ್ಡಿ ಮತ್ತು ಅವರ ಬೆಂಬಲಿಗರನ್ನು ಉಳಿಸಲು ಘರ್ಷಣೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗಿದೆ ಎಂದು ಬಿಜೆಪಿ ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.
Advertisement