

ಬೆಂಗಳೂರು: ಬಳ್ಳಾರಿಯಲ್ಲಿ ಇತ್ತೀಚೆಗೆ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದ ಗಲಾಟೆಯಲ್ಲಿ ಒಬ್ಬ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ತಿರಸ್ಕರಿಸಿದ್ದಾರೆ. ವೃತ್ತಿಪರವಾಗಿ ತನಿಖೆ ನಡೆಸುವ ರಾಜ್ಯ ಪೊಲೀಸರ ಸಾಮರ್ಥ್ಯದ ಬಗ್ಗೆ ವಿಶ್ವಾಸವನ್ನು ಅವರು ಪುನರುಚ್ಚರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನಮ್ಮ ಪೊಲೀಸ್ ಇಲಾಖೆಗೆ ತನಿಖೆ ಮಾಡುವ ಸಾಮರ್ಥ್ಯವಿದೆ. ಯಾವುದೇ ಪರಿಸ್ಥಿತಿಯನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಅವರಿಗೆ ಮಾಡಲು ಸಾಧ್ಯವಾಗದ ಪರಿಸ್ಥಿತಿ ಬಂದರೆ ಸಿಬಿಐ ಅಥವಾ ಇತರ ಸಂಸ್ಥೆಗೆ ತನಿಖೆಗೆ ವಹಿಸಬಹುದು ಎಂದು ಹೇಳಬಹುದು. ಸಿಬಿಐಗೆ ನೀಡದಿರಲು ಈಗಾಗಲೇ ಸಂಪುಟದಲ್ಲಿ ತೀರ್ಮಾನಿಸಿದ್ದೇವೆ. ನ್ಯಾಯಾಲಯದ ಆದೇಶ ಬಂದರೆ ಅಥವಾ ಅಂತಹ ಪರಿಸ್ಥಿತಿ ಬಂದರೆ ಸಿಬಿಐಗೆ ಪ್ರಕರಣಗಳನ್ನು ನೀಡುವ ಬಗ್ಗೆ ನಾವು ನಿರ್ಧರಿಸುತ್ತೇವೆ. ತನಿಖೆಯನ್ನು ಈಗ ಸಿಬಿಐಗೆ ನೀಡುವ ಅಗತ್ಯವಿಲ್ಲ, ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಿಲ್ಲ ಎಂದು ಹೇಳಿದರು.
ಕುಮಾರಸ್ವಾಮಿಗೆ ತಿರುಗೇಟು: ಬಳ್ಳಾರಿ ಘಟನೆಯ ಬಗ್ಗೆ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನೀಡಿರುವ ರಬ್ಬರ್ ಸ್ಟಾಂಪ್ ಹೇಳಿಕೆ ಕುರಿತಾಗಿ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಜವಾಬ್ದಾರಿಯುತ ಗೃಹ ಸಚಿವನಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದನ್ನು ಖಾತ್ರಿಪಡಿಸುತ್ತೇನೆ. ಒಂದು ವೇಳೆ ಏನಾದರೂ ಸಂಭವಿಸಿದರೆ ಕಾನೂನಿನ ಚೌಕಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆದವರು. ಈಗ ಕೇಂದ್ರ ಕೈಗಾರಿಕಾ ಸಚಿವರು ಆಗಿದ್ದಾರೆ. ಇಂತಹ ಸಂದರ್ಭಗಳಲ್ಲಿ ಹೇಳಿಕೆ ಕೊಟ್ಟಿದ್ದಾರೆ. ನನ್ನನ್ನು ರಬ್ಬರ್ ಸ್ಟಾಂಪ್ ಎಂದು ಹೇಳಿದ್ದಾರೆ. ನಾನು ಸಹ ಏನು ಬೇಕಾದರು ಹೇಳಬಹುದು. ಅವರ ಹೇಳಿಕೆ ಸ್ವಾಗತ ಮಾಡುತ್ತೇನೆ" ಎಂದು ತಿರುಗೇಟು ನೀಡಿದರು.
38 ವರ್ಷದಿಂದ ರಾಜಕಾರಣದಲ್ಲಿ ಇದ್ದೇನೆ. ವಿವಿಧ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ. ಕುಮಾರಸ್ವಾಮಿ ಅವರೊಂದಿಗೆ ಉಪ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದೇನೆ. ನನ್ನ ಸಾಮರ್ಥ್ಯ ಮತ್ತು ವ್ಯಕ್ತಿತ್ವ ಅವರಿಗೆ ಗೊತ್ತಿದೆ. ಹಾಗಾಗೀ ಅ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಇನ್ನೂ ಹುಬ್ಬಳ್ಳಿಯಲ್ಲಿ ಮಹಿಳೆಯ ವಿರುದ್ಧ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ್, ವಿಪಕ್ಷದವರು ಏನು ಬೇಕಾದರೂ ಹೇಳಬಹುದು. ಹುಬ್ಬಳ್ಳಿ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಪ್ರಕರಣ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಒಬ್ಬ ಕಮಿಷನರ್ ಸ್ಪಷ್ಟನೆ ಕೊಟ್ಟ ಮೇಲೆ ಇನ್ನೇನಿದೆ? ಪೊಲೀಸರು ವಿವಸ್ತ್ರ ಮಾಡಲಿಲ್ಲ, ಆಕೆಯೇ ವಿವಸ್ತ್ರ ಮಾಡಿಕೊಂಡ್ರು ಅಂತ ಹೇಳಿದ್ದಾರೆ. ಬಿಜೆಪಿಯವರಿಗೆ ಕಮಿಷನರ್ ಅವರೇ ಹೇಳಿದ ಮೇಲೆ ಇನ್ನೇನಿದೆ?" ಎಂದು ಸ್ಪಷ್ಟನೆ ನೀಡಿದರು.
ಒಬ್ಬ ಹೆಣ್ಣು ಮಗಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡೋದು ಸರಿಯಲ್ಲ. ಯಾರನ್ನು ಕೂಡಾ ಅವರ ರಾಜಕೀಯ ಪಕ್ಷದ ಹಿನ್ನೆಲೆಯಲ್ಲಿ ಟಾರ್ಗೆಟ್ ಮಾಡಲ್ಲ. ಪೊಲೀಸರೂ ಇದನ್ನು ಮಾಡೋದಿಲ್ಲ, ನಾವು ಅವರಿಗೆ ಅವಕಾಶ ಕೊಡಲ್ಲ. ರಾಜಕೀಯ ದುರುದ್ದೇಶದಿಂದ ಪೊಲೀಸರು ನಡೆದುಕೊಳ್ಳುವುದಿಲ್ಲ ಎಂದರು.
ಕಗ್ಗಲಿಪುರ ಪ್ರದೇಶದಲ್ಲಿ ಕೆಲವು ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂಬ ವರದಿ ಬಗ್ಗೆ ಮಾತನಾಡಿದ ಗೃಹ ಸಚಿವರು, ರಾಜ್ಯದಲ್ಲಿ ಯಾವುದೇ ಬಾಂಗ್ಲಾದೇಶಿ ಪ್ರಜೆಗಳು ಅನಧಿಕೃತವಾಗಿ ವಾಸಿಸುತ್ತಿದ್ದರೆ, ಅವರ ರಾಯಭಾರ ಕಚೇರಿಗೆ ತಿಳಿಸಿದ ನಂತರ ನಾವು ಅವರನ್ನು ಬಂಧಿಸಿ ಗಡೀಪಾರು ಮಾಡುತ್ತೇವೆ. ಇದನ್ನು ಹಲವಾರು ಪ್ರಕರಣಗಳಲ್ಲಿ ಮಾಡಿದ್ದೇವೆ ಎಂದು ತಿಳಿಸಿದರು.
Advertisement