

ಕೋಲಾರ: ಸಿಎಂ ಸಿದ್ದರಾಮಯ್ಯ 2028 ರವರೆಗೆ ಪೂರ್ಣ ಅವಧಿಗೆ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಪುನರುಚ್ಛರಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಿದ್ದರಾಮಯ್ಯ ನಂತರವೇ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದಾರೆ.
ಕೋಲಾರದ ಶ್ರೀನಿವಾಸಪುರದ ಲಕ್ಷ್ಮಿಪುರದಲ್ಲಿ ನೂರಾನಿ ಮಸೀದಿಯನ್ನು ಉದ್ಘಾಟಿಸಲು ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜಮೀರ್ ಅಹ್ಮದ್, ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ನಾವು ಯಾವಾಗಲೂ ಹೇಳುತ್ತಲೇ ಬಂದಿದ್ದೇವೆ. ಆದರೆ ಸಿದ್ದರಾಮಯ್ಯ ನಂತರವೇ ಅವರು ಆಗಬೇಕು, ಅದು ನಮ್ಮ ಬೇಡಿಕೆ ಎಂದರು.
ಡಿ ಕೆ ಶಿವಕುಮಾರ್ ಅವರ ಕಾಂಗ್ರೆಸ್ ನಿಷ್ಠೆಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಕಾಂಗ್ರೆಸ್ ಶಿವಕುಮಾರ್ ಅವರ ರಕ್ತದಲ್ಲಿ ಹರಿಯುತ್ತದೆ. ನಮ್ಮಲ್ಲಿ ಹಲವರು ಬೇರೆ ಬೇರೆ ಪಕ್ಷಗಳಿಂದ ಬಂದಿದ್ದೇವೆ, ಆದರೆ ಕಾಂಗ್ರೆಸ್ ಡಿ ಕೆ ಶಿವಕುಮಾರ್ ಅವರ ರಕ್ತದಲ್ಲಿದೆ. ರಕ್ತವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ನಾಯಕತ್ವ ಬದಲಾವಣೆಯ ಬಗ್ಗೆ ಪದೇ ಪದೇ ವದಂತಿಗಳು ಕೇಳಿಬರುತ್ತಿರುವ ಬಗ್ಗೆ ಕೇಳಿದಾಗ, ನವೆಂಬರ್ ಕ್ರಾಂತಿ, ಡಿಸೆಂಬರ್ ಕ್ರಾಂತಿ ಮತ್ತು ಈಗ ಜನವರಿ ಸಂಕ್ರಾಂತಿ ಬಗ್ಗೆ ಮಾತನಾಡಿದವರು ಏನೂ ಆಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೈಕಮಾಂಡ್ ಸಿದ್ದರಾಮಯ್ಯ ಜೊತೆಗಿದೆ ಎಂದರು.
Advertisement