

ಬೆಂಗಳೂರು: ಜನವರಿ 22 ರ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಗೆ ಪ್ರಯಾಣಿಸುವ ನಿರೀಕ್ಷೆಯಿದ್ದು, ಭೇಟಿ ವೇಳೆ ಹೈಕಮಾಂಡ್ ಜೊತೆ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಖಾಲಿಯಿರುವ ಎರಡು ಸಚಿವ ಸ್ಥಾನವನ್ನು ಭರ್ತಿ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿಗಳು ದೆಹಲಿಗೆ ಪ್ರಯಾಣಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಪಕ್ಷದ ಆಂತರಿಕ ಮೂಲಗಳು ಸಂಪುಟ ಪುನಾರಚನೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿವೆ.
ಕಾರ್ಯಕ್ಷಮತೆಯ ಆಧಾರದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಸಂಪುಟದಲ್ಲಿ ಬದಲಾವಣೆಗಳನ್ನು ತರಬಹುದು ಎಂದ ಮೂಲಗಳು ತಿಳಿಸಿವೆ.
ಮುಂದಿನ ಎರಡು ವರ್ಷಗಳ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ಷಮತೆ ಆಧಾರಿತ ಸಚಿವ ಸಂಪುಟ ಪುನಾರಚನೆಗೆ ಹೈಕಮಾಂಡ್ ಚಿಂತನೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ ಎಂದು ಪರಿಗಣಿಸಲಾದ 8ರಿಂದ 10 ಸಚಿವರ ಕಾರ್ಯಕ್ಷಮತೆಯನ್ನು ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಸರ್ಕಾರಕ್ಕೆ ಹೊಸ ಚೈತನ್ಯ ನೀಡುವ ಉದ್ದೇಶ ಇದಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇತ್ತ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ರಾಯಬರೇಲಿ ಸಂಸದ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ಮರಳಿರುವುದು ಈ ಚರ್ಚೆಗಳಿಗೆ ಮತ್ತಷ್ಟು ಬಲ ನೀಡಿದೆ.
ಈ ಪುನಾರಚನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡುವಿನ ರಾಜಕೀಯ ಜಟಾಪಟಿ ಭಾಗವಾಗಿಯೂ ನೋಡಲಾಗುತ್ತಿದೆ. ಸರ್ಕಾರ ಮತ್ತು ಪಕ್ಷದೊಳಗಿನ ಪ್ರಭಾವಕ್ಕಾಗಿ ಇಬ್ಬರು ನಾಯಕರ ಆಪ್ತ ಬಣಗಳ ನಡುವಿನ ಪೈಪೋಟಿ ಇನ್ನೂ ಮುಂದುವರಿದಿದೆ.
ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆ ಕೈಗೊಳ್ಳುವಾಗ ಪ್ರಾದೇಶಿಕ ಪ್ರತಿನಿಧಿತ್ವ, ಜಾತಿ ಸಮತೋಲನ ಮತ್ತು ಒಳಪಕ್ಷೀಯ ಸಮೀಕರಣಗಳನ್ನು ಸೂಕ್ಷ್ಮವಾಗಿ ಪರಿಗಣಿಸಲಾಗುವುದು. ಪ್ರಸ್ತುತ ಬಿ. ನಾಗೇಂದ್ರ ಮತ್ತು ಕೆ.ಎನ್. ರಾಜಣ್ಣ ಅವರ ನಿರ್ಗಮನದಿಂದ ಉಂಟಾದ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿದ್ದು, ಸಂಪುಟ ಪುನಾರಚನೆ ಹೈಕಮಾಂಡ್ ಅನುಮೋದನೆಯನ್ನು ಅವಲಂಬಿಸಿರುತ್ತದೆ ಎಂದು ಮೂಲಗಳು ತಿಳಿಸಿವೆ.
ದೆಹಲಿಗೆ ಭೇಟಿ ನೀಡುವ ಸಿದ್ದರಾಮಯ್ಯ ಅವರ ಮನವಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದೇ ಆದರೆ, ಗಣರಾಜ್ಯೋತ್ಸವದ ಸ್ವಲ್ಪ ಸಮಯದ ನಂತರ ನೂತನ ಸಚಿವರುಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.
ಆದರೆ, ಪಕ್ಷದೊಳಗಿನ ಕೆಲ ನಾಯಕರು, ಬಜೆಟ್ ಅಧಿವೇಶನ ಹಾಗೂ ವಿಧಾನ ಪರಿಷತ್ ಮತ್ತು ರಾಜ್ಯಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಇದೀಗ ದೊಡ್ಡ ಮಟ್ಟದ ಬದಲಾವಣೆ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement