
ಕೇರಳ ಸರ್ಕಾರದ ಮಲಯಾಳಂ ಭಾಷಾ ಮಸೂದೆ-2025ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂಬಂಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದು ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಭಾಷಾ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾಷೆಯು ಕೇವಲ ಶೈಕ್ಷಣಿಕ ಆಯ್ಕೆಯಲ್ಲ, ಅದು ಅವರ ಅಸ್ಮಿತೆ, ಘನತೆ ಮತ್ತು ಅವಕಾಶಗಳಿಗೆ ದಾರಿಯಾಗಿದೆ. ಒಂದೇ ಭಾಷಾ ಮಾರ್ಗವನ್ನು ಕಡ್ಡಾಯಗೊಳಿಸುವ ಯಾವುದೇ ನೀತಿಯು ಮಕ್ಕಳ ಮೇಲೆ ಅನಗತ್ಯ ಹೊರೆಯಾಗುವ ಸಾಧ್ಯತೆಯಿದೆ. ಕೇರಳ ಸರ್ಕಾರವು ಕಾಯ್ದೆ ಜಾರಿಗೆ ಮುನ್ನ ಭಾಷಾ ಅಲ್ಪಸಂಖ್ಯಾತ ಸಮುದಾಯಗಳು, ಶಿಕ್ಷಣ ತಜ್ಞರು ಮತ್ತು ನೆರೆಯ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕು ಹಾಗೂ ತನ್ನ ಪ್ರಸ್ತಾಪಿತ ಮಸೂದೆಯನ್ನು ಪುನರ್ ಪರಿಶೀಲನೆಗೆ ಒಡ್ಡಬೇಕೆಂದು ಕೋರಿದ್ದರು. ಸಿಎಂ ಸಿದ್ದರಾಮಯ್ಯ ಅವರ ಪತ್ರಕ್ಕೆ ಸ್ಪಷ್ಟನೆ ನೀಡಿರುವ ಕೇರಳ ಸಿಎಂ, ನಮ್ಮ ಸರ್ಕಾರ ಯಾವುದೇ ಭಾಷೆಯನ್ನು ಬಲವಂತವಾಗಿ ಹೇರುವ ಉದ್ದೇಶ ಹೊಂದಿಲ್ಲ. ಭಾಷಾ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗೆ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಸೇರಿಸಲಾಗಿದೆ. ಮಸೂದೆಯ ಕುರಿತು ಎದ್ದಿರುವ ಊಹಾಪೋಹಗಳು ಸತ್ಯಕ್ಕೆ ದೂರವಾದವು. ಕೇರಳದ ಪ್ರಗತಿ ಯಾವಾಗಲೂ ಸಮಾನತೆ ಮತ್ತು ಸಹೋದರತ್ವದಲ್ಲಿ ನೆಲೆಗೊಂಡಿರುವ ಸಮಗ್ರ ಅಭಿವೃದ್ಧಿಯಲ್ಲಿ ಬೇರೂರಿದೆ. ಜಾತ್ಯತೀತತೆ ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಮ್ಮ ಸರ್ಕಾರ ದೃಢವಾಗಿದೆ ಎಂದು ಕೇರಳ ಸಿಎಂ ತಿಳಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ತೀವ್ರ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಒಳನಾಡಿನ ಕೆಲವು ಭಾಗಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ. ಕರ್ನಾಟಕದ ಒಳನಾಡಿನ ಕೆಲವು ಸ್ಥಳಗಳಲ್ಲಿ ಕನಿಷ್ಠ ತಾಪಮಾನವು ಮೂರರಿಂದ ಆರು ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆಯಿದ್ದರೆ, ಇನ್ನು ಕೆಲ ಪ್ರದೇಶಗಳಲ್ಲಿ ಮಂಜು ಕವಿದ ವಾತಾವರಣವಿರಲಿದೆ. ಕಳೆದ 24 ಗಂಟೆಗಳಲ್ಲಿ ವಿಜಯಪುರದಲ್ಲಿ ಶೀತಗಾಳಿ ವಾತಾವರಣ ಕಂಡುಬಂದಿದೆ. ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಕೊಡಗಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಶಿವಮೊಗ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಣ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ ಎಂದು IMD ಹೇಳಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಐದು ಮಹಾನಗರ ಪಾಲಿಕೆಗಳ ಚುನಾವಣೆಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಎ, ಬಿ, ಮಹಿಳೆ ಮತ್ತು ಸಾಮಾನ್ಯ ವರ್ಗದ ವಾರ್ಡ್‌ಗಳಿಗೆ ಮೀಸಲಾತಿಯ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಕುತೂಹಲಕಾರಿ ವಿಚಾರವೆಂದರೆ 369 ವಾರ್ಡ್ ಗಳ ಪೈಕಿ 174 ಸೀಟುಗಳನ್ನು ವಿವಿಧ ವರ್ಗಗಳ ಅಡಿಯಲ್ಲಿ ಮಹಿಳೆಯರಿಗೆ ಮೀಸಲಿಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಘೋಷಿಸಲು 2011ರ ಜನಗಣತಿಯನ್ನು ಪರಿಗಣಿಸಿದೆ. 15 ದಿನಗಳೊಳಗೆ ಅಧಿಸೂಚನೆಗೆ ಸಲಹೆ, ಆಕ್ಷೇಪಣೆ ಸಲ್ಲಿಸಲು ಸಾರ್ವಜನಿಕರು ಅವಕಾಶ ನೀಡಲಾಗಿದೆ. ಬೆಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಬಿಜೆಪಿ ಮುಖಂಡರು ನ್ಯಾಯಾಲಯದ ಮೆಟ್ಟಿಲೇರಿರುವುದಾಗಿ ಮಾಜಿ ಕಾರ್ಪೊರೇಟರ್ ಹಾಗೂ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಹೇಳಿದ್ದಾರೆ. ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ.
ಕನ್ನಡ ಪ್ರಸಿದ್ಧ ಕಾದಂಬರಿಕಾರ್ತಿ, ಪ್ರಕಾಶಕಿ ಆಶಾ ರಘು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ 47 ವರ್ಷದ ಆಶಾ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಶಾ ಅವರ ಪತಿ, ಆಹಾರ ತಜ್ಞ ಹಾಗೂ ಲೇಖಕ ಕೆಸಿ ರಘು ಎರಡು ವರ್ಷಗಳ ಹಿಂದೆ ನಿಧನರಾಗಿದ್ದರು. ಪತಿ ನಿಧನ ನಂತರ ಆಶಾ ಮಾನಸಿಕವಾಗಿ ಬಹಳ ನೊಂದಿದ್ದರು. ಹೀಗಾಗಿ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದರೆ ಎನ್ನಲಾಗಿದೆ. ಆವರ್ತ, ಗತ, 'ಮಾಯೆ', 'ಚಿತ್ತರಂಗ', ಕೆಂಪು ದಾಸವಾಳ ಅವರ ಪ್ರಮುಖ ಕಾದಂಬರಿಗಳಾಗಿವೆ. 2014ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.
Advertisement