

ಬೀದರ್: ವಯೋಸಹಜ ರೋಗದಿಂದ ಬಳಲುತ್ತಿರುವ ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಗರದ ಗುದಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಈಶ್ವರ್ ಖಂಡ್ರೆ ಅವರು ತಂದೆಯ ಆರೋಗ್ಯ ವಿಚಾರಿಸಿದರು.
ಬಳಿಕಮಾತನಾಡಿದ ಈಶ್ವರ್ ಖಂಡ್ರೆಯವರು, ನಮ್ಮ ತಂದೆಯವರು ಒಂದು ವಾರದಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ವೈದ್ಯರ ತಂಡ 24 ತಾಸು ಅವರನ್ನು ನಿಗಾ ವಹಿಸಿದೆ. ಇವತ್ತು ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ ಎಂದು ಹೇಳಿದರು.
ನಮ್ಮ ತಂದೆಯವರಿಗೆ 102 ವಯಸ್ಸಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ. ಅವರು ಗುಣಮುಖರಾಗುತ್ತಾರೆ ಎನ್ನುವ ವಿಶ್ವಾಸ ಇದೆ. ಅವರ ಅಭಿಮಾನಿಗಳು ಅವರ ಆರೋಗ್ಯದ ಬಗ್ಗೆ ದೇವರಲ್ಲಿ ಪ್ರಾರ್ಥನೆ ಮಾಡಲಿ ಎಂದು ವಿನಂತಿಸಿದರು.
ಅವರಿಗೆ ಉಸಿರಾಟದಲ್ಲಿ ತೊಂದರೆಯಾಗುತ್ತಿತ್ತು. ರಕ್ತದೊತ್ತಡದಲ್ಲಿ ಏರುಪೇರಾಗುತ್ತಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇವತ್ತು ಬೆಳಿಗ್ಗೆಯಿಂದ ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಇದೆ. ಅವರು ಗುಣಮುಖರಾಗುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement