

ಕಲಬುರಗಿ: ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದಿದ್ದ ಮನ್ರೇಗಾ ಯೋಜನೆಯನ್ನು ಬದಲಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿಬಿ ಜಿ ರಾಮ್ ಕಾಯ್ದೆ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೇಡಂ ಪಟ್ಟಣದ ತಾಲೂಕ್ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮನ್ರೇಗಾ ಯೋಜನೆ ವಿಬಿ ಜಿ ರಾಮ್ ಜಿ ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಮಹಾತ್ಮ ಗಾಂಧಿಯವರನ್ನು ಎರಡನೇ ಬಾರಿ ಕೊಲೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಯೋಜನೆಯಡಿ ಕೇಂದ್ರ ಸರ್ಕಾರ ಶೇ. 60 ರಷ್ಟು ಅನುದಾನ, ರಾಜ್ಯಗಳು ಶೇ. 40 ರಷ್ಟು ಅನುದಾನ ನೀಡಬೇಕು. ಇದನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದ್ದು, ಕಾನೂನಿನ ಸಮರಕ್ಕೆ ಮುಂದಾಗಿದೆ. ವಿಶೇಷ ಅಧಿವೇಶನ ಕರೆದು ಈ ಬಗ್ಗೆ ಚರ್ಚೆ ಮಾಡಲಾಗುವುದು ಎಂದರು.
ಈ ಕಾಯ್ದೆಯಲ್ಲಿ ಇರುವುದು ದಶರಥ ಪುತ್ರ ರಾಮನೂ ಅಲ್ಲ, ಕೌಸಲ್ಯಾ ರಾಮನೂ ಅಲ್ಲ. ನಾಥೂರಾಮ. ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ರದ್ದು ಮಾಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು.
ಜೇವರ್ಗಿ ಮತ್ತು ಸೇಡಂ ನಲ್ಲಿ ಇಂದು 1,595 ಕೋಟಿ ರೂ ಗಳ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಸೇಡಂ ಕ್ಷೇತ್ರದಲ್ಲಿ 579.68 ಕೋಟಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೀಡಿ, 108 .35 ಕೋಟಿ ರೂ.ಗಳ ಕಾಮಗಾರಿಗಳನ್ನು ಉದ್ಘಾಟಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಂ ಸಿಂಗ್ ಅವರು ಇಲ್ಲದೇ ಹೋಗಿದ್ದರೆ 371ಜೆ ಜಾರಿಯಾಗುತ್ತಿರಲಿಲ್ಲ. 371 ಜೆ ಕಾಯ್ದೆಯಿಂದಾಗಿ ಈ ಭಾಗದಲ್ಲಿ ಹತ್ತು ಸಾವಿರ ವೈದ್ಯರು, 30,000 ಇಂಜಿನಿಯರ್‌ಗಳು, 12,000 ಜನ ದಂತ ವೈದ್ಯರು ಹಾಗೂ ಇನ್ನಿತರೆ ಉನ್ನತ ಶಿಕ್ಷಣ ಪಡೆದಿದ್ದಾರೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದಲ್ಲಿ 70% ಮೀಸಲಾತಿ ನೀಡಲಾಯಿತು. ಇವೆಲ್ಲವೂ ಸಾಧ್ಯವಾಗಿದ್ದು ಕಾಂಗ್ರೆಸ್ ಸರ್ಕಾರದಿಂದ. ಇದರಿಂದ 85,000 ಜನರಿಗೆ ಸರ್ಕಾರಿ ನೌಕರಿ ದೊರಕಲು ಸಾಧ್ಯವಾಯಿತು. ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಲಾಗುವುದು. ಸೇಡಂ ಪುರಸಭೆಯನ್ನು ನಗರಸಭೆಯನ್ನಾಗಿ ಕೂಡ ಮಾಡಲಾಗಿದೆ ಎಂದರು.
ಎಲ್ಲಾ ಜಿಲ್ಲೆಗಳೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳನ್ನು ಈ ವರ್ಷ ಪ್ರಾರಂಭಿಸಲಾಗುವುದು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದುಬಾರಿಯಾಗಿರುವುದರಿಂದ ಸರ್ಕಾರ ಬಡವರಿಗೆ ಅನುಕೂಲ ಕಲ್ಪಿಸಲು ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುತ್ತಿದೆ. ನಮ್ಮ ಸರ್ಕಾರ ಎಲ್ಲರನ್ನೂ ಒಳಗೊಂಡಿರುವ ಸರ್ಕಾರ. ಎಲ್ಲರ ಅಭಿವೃದ್ಧಿಯೇ ನಾಡಿನ ಅಭಿವೃದ್ಧಿ ಎಂದು ನಂಬಿ, ಅದರಂತೆ ನಡೆಯುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.
Advertisement