
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆಯನ್ನು ಜೂನ್ 30ರೊಳಗೆ ನಡೆಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ವಾರ್ಡ್‌ಗಳ ಮೀಸಲಾತಿ ಪ್ರಕ್ರಿಯೆಯು ಪ್ರಸ್ತುತ ಅಂತಿಮ ಹಂತದಲ್ಲಿದೆ. ಫೆಬ್ರವರಿ 28ರೊಳಗೆ ಮೀಸಲಾತಿ ಪಟ್ಟಿಯು ಅಧಿಕೃತವಾಗಿ ಹೊರಬೀಳಲಿದೆ ಎಂದು ರಾಜ್ಯ ಸರ್ಕಾರ ಪರ ವಕೀಲರು ವಾದ ಮಂಡಿಸಿದರು. ನಂತರ ರಾಜ್ಯ ಚುನಾವಣಾ ಆಯೋಗವು ವಾದ ಮಂಡಿಸಿದ್ದು ಮಾರ್ಚ್ 16ರವರೆಗೆ ಮತದಾರರ ಪಟ್ಟಿಯ ಪರಿಶೀಲನೆ ನಡೆಯಲಿದೆ. ಇದಾದ ಬಳಿಕ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯಲಿರುವುದರಿಂದ ಸಿಬ್ಬಂದಿ ಕೊರತೆ ಎದುರಾಗಬಹುದು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಸಲು ಮೇ ಕೊನೆಯ ವಾರದವರೆಗೂ ಸಮಯಾವಕಾಶಬೇಕು ಎಂದು ವಾದಿಸಿದರು. ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್‌ನ ಸಿಜೆಐ ಪೀಠವು ಜೂನ್ 30ರೊಳಗೆ ಚುನಾವಣೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಗದಗದ ಲಕ್ಕುಂಡಿಯಲ್ಲಿ ಮನೆಗೆ ಅಡಿಪಾಯ ಹಾಕುವಾಗ ಸಿಕ್ಕ ನಿಧಿಯನ್ನು ತಾಯಿ-ಮಗ ಸರ್ಕಾರಕ್ಕೆ ಒಪ್ಪಿಸಿದ್ದರು. ಮನೆಯ ಜಾಗದಲ್ಲಿ ಸಿಕ್ಕ ಚಿನ್ನ ನಿಧಿಯೇ ಅಲ್ಲ, ಅದು ಕುಟುಂಬಕ್ಕೇ ಸೇರಿದ್ದೆಂದು ತಜ್ಞರು ಹೇಳಿದ್ದರು. ಈ ಚರ್ಚೆಗಳ ಬೆನ್ನಲ್ಲೇ ಕುಟುಂಬವೂ ಬಂಗಾವರನ್ನು ವಾಪಸ್ ಕೇಳಿತ್ತು. ಇದೆಲ್ಲದರ ನಡುವೆ ರಾಜ್ಯ ಪುರಾತತ್ವ ಇಲಾಖೆಯ ನಿರ್ದೇಶಕರು ಈ ಕುರಿತು ಸ್ಪಷ್ಟನೆ ನೀಡಿದ್ದು, ನಿಯಮಗಳ ಪ್ರಕಾರ, ನಿಧಿ ಕಂಡ ಕುಟುಂಬಕ್ಕೆ ಅದರ ಮೌಲ್ಯದ ಐದನೇ ಒಂದು ಭಾಗದಷ್ಟು ಪರಿಹಾರವನ್ನು ನೀಡಲಾಗುತ್ತದೆ. ಭಾರತೀಯ ನಿಧಿ ಕಾಯಿದೆ 1878ರ ನಿಯಮದಡಿ ಪ್ರಾಮಾಣಿಕವಾಗಿ ನಿಧಿ ವರದಿ ಮಾಡಿದವರಿಗೆ ಪರಿಹಾರ ನೀಡುವ ವ್ಯವಸ್ಥೆ ಇದೆ. ಅದರಂತೆ ಜಿಲ್ಲಾಡಳಿತವು ನಿಧಿಯ ಮೌಲ್ಯವನ್ನು ನಿರ್ಧರಿಸಿದ ನಂತರ, ಆ ಮೌಲ್ಯದ ಐದನೇ ಒಂದು ಭಾಗವನ್ನು ಹಣಕಾಸಿನ ರೂಪದಲ್ಲಿ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಪುರಾತತ್ವ ಇಲಾಖೆ ನಿರ್ದೇಶಕರು ಹೇಳಿದ್ದಾರೆ. ಈಮಧ್ಯೆ, ಸರ್ಕಾರವು ತಮಗೆ ಮನೆ ಮತ್ತು ಸರಕಾರಿ ಉದ್ಯೋಗ ನೀಡಬೇಕೆಂದು ನಿಧಿ ಹಸ್ತಾಂತರಿಸಿದ ಕುಟುಂಬವು ಒತ್ತಾಯಿಸಿದೆ.
ಬಿಗ್ ಬಾಸ್ 12ರ ನಿರೂಪಣೆ ವೇಳೆ ರಣಹದ್ದು ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ನಟ ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ವಿರುದ್ಧ ಪರಿಸರ ಪ್ರಿಯರು ದೂರು ನೀಡಿದ್ದಾರೆ. ರಾಮನಗರದ ಅರಣ್ಯಾಧಿಕಾರಿಗಳಿಗೆ ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ದೂರು ನೀಡಿದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ರಣಹದ್ದು ಬಗ್ಗೆ ಕಿಚ್ಚ ಸುದೀಪ್ ತಪ್ಪಾದ ಮಾಹಿತಿ ಹರಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಪರ್ಧಿಯೊಬ್ಬರ ಕುತ್ತಿಗೆಗೆ ರಣಹದ್ದು ಫೋಟೋವೊಂದನ್ನ ಹಾಕಿಸಿ ಹೊಂಚುಹಾಕಿ ಸಂಚು ಮಾಡಿ ಕರೆಕ್ಟ್ ಟೈಂ ಲಬಕ್ ಅಂತ ಹಿಡಿಯುವವರು ಯಾರು? ಎಂದು ಕೇಳಿದ್ದರು. ಆದರೆ ರಣಹದ್ದು ಯಾವುದೇ ಜೀವಿಗೆ ಹಾನಿ ಮಾಡುವ ಪಕ್ಷಿ ಅಲ್ಲ. ಅದು ಸತ್ತ ಪ್ರಾಣಿಗಳನ್ನ ಮಾತ್ರ ತಿಂದು ಪರಿಸರದ ಸಮತೋಲನ ಕಾಪಾಡುವ ಪಕ್ಷಿ. ಇಂತಹ ಪಕ್ಷಿ ಬಗ್ಗೆ ನಟ ಸುದೀಪ್ ಅವರು ತಪ್ಪು ಮಾಹಿತಿ ನೀಡಿರೋದು ಸರಿಯಲ್ಲ ಎಂದು ಪರಿಸರ ಪ್ರಿಯರು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶೀಘ್ರದಲ್ಲಿಯೇ ಮತ್ತೆ ದರ ಏರಿಕೆ ಬಿಸಿ ಮುಟ್ಟಲಿದೆ. ಮುಂಬರುವ ಫೆಬ್ರವರಿಯಿಂದ ಶೇಕಡಾ 5 ರಷ್ಟು ಟಿಕೆಟ್ ದರ ಏರಿಕೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ದರ ನಿಗದಿ ಸಮಿತಿ ಶಿಫಾರಸಿನಂತೆ, ಫೆಬ್ರವರಿಯಿಂದ ಪ್ರತಿ ವರ್ಷ ನಮ್ಮ ಮೆಟ್ರೋ ಟಿಕೆಟ್ ದರವನ್ನು ಶೇಕಡಾ ಐದರಷ್ಟು ಹೆಚ್ಚಿಸಲು ಚಿಂತನೆ ನಡೆದಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಶೇಕಡಾ 71ರಷ್ಟು ದರ ಏರಿಕೆ ಮಾಡಲಾಗಿತ್ತು. ಈ ಹೆಚ್ಚಳವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಮೆಟ್ರೋ ರೈಲುಗಳ ಕಾಯ್ದೆ, 2002ರ ಸೆಕ್ಷನ್ 33ರ ಅಡಿಯಲ್ಲಿ ಈ ಶಿಫಾರಸುಗಳು ಕಾನೂನಾತ್ಮಕವಾಗಿ ಕಡ್ಡಾಯವಾಗಿವೆ. ಇದೇ ನಿಯಮದ ಅಡಿಯಲ್ಲಿ, ಹೊಸ ದರ ಪರಿಷ್ಕರಣೆ ಸಮಿತಿ ರಚನೆಯಾಗುವವರೆಗೆ ವಾರ್ಷಿಕ ದರ ಏರಿಕೆಗೆ ಅವಕಾಶವಿದೆ.
ದ್ವೇಷ ಭಾಷಣ ತಡೆ ಮಸೂದೆಯನ್ನು ಕ್ರೂರ, ಸ್ವಾತಂತ್ರ್ಯದ ಮೇಲಿನ ನೇರ ದಾಳಿ ಮತ್ತು ರಾಜಕೀಯ ಸೇಡು ತೀರಿಸಿಕೊಳ್ಳುವ ಅಸ್ತ್ರ ಎಂದು ಕರೆದಿರುವ ಬಿಜೆಪಿ ನಾಯಕರ ನಿಯೋಗ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಮಸೂದೆಗೆ ಒಪ್ಪಿಗೆ ನೀಡದಂತೆ ಮನವಿ ಮಾಡಿದೆ. ವಿಧಾನಸಭೆ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ, ಬಳ್ಳಾರಿ ಘರ್ಷಣೆ ಬಗ್ಗೆ ಸಿಬಿಐ ತನಿಖೆ ಮತ್ತು ಕೋಗಿಲುವಿನಲ್ಲಿ ಅಕ್ರಮವಾಗಿ ನಿರ್ಮಿಸಿದ ಮನೆಗಳ ಧ್ವಂಸಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮಕ್ಕೆ ಒತ್ತಾಯಿಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿತು. ಅಲ್ಲದೇ ಹುಬ್ಬಳ್ಳಿಯಲ್ಲಿನ ಬಿಜೆಪಿ ಮಹಿಳಾ ಕಾರ್ಯಕರ್ತೆ ಮೇಲಿನ ಹಲ್ಲೆ ಆರೋಪ ಪ್ರಸ್ತಾಪಿಸಿದ್ದು, ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದೆ.
Advertisement