ಗಣರಾಜ್ಯೋತ್ಸವ 2026: ಜ 14ರಿಂದ ಲಾಲ್​​ಬಾಗ್​ನಲ್ಲಿ ಫ್ಲವರ್ ಶೋ: ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ, ಈ ಬಾರಿ ಥೀಮ್ ಏನು ಗೊತ್ತಾ?

ಈ ಬಾರಿ, ಫಲಪಷ್ಟ ಪ್ರದರ್ಶನಕ್ಕೆ 3.20 ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದ್ದು, ಈ ಬಾರಿ 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ.
Lalbagh
ಲಾಲ್ ಬಾಗ್
Updated on

ಬೆಂಗಳೂರು: ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.14 ರಿಂದ 26ರವರೆಗೆ 219ನೇ ಫಲಪುಷ್ಪ ಪ್ರದರ್ಶನ ನಡೆಯಲಿದ್ದು, ಫಲಪುಷ್ಪ ಪ್ರದರ್ಶನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ.

ತೋಟಗಾರಿಕೆ ಇಲಾಖೆ ಈ ಬಾರಿ ರಾಷ್ಟ್ರಕವಿ ಕುವೆಂಪು ಅವರ ಪುತ್ರ, ಖ್ಯಾತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬದುಕು-ಬರಹ ಕುರಿತ 'ತೇಜಸ್ವಿ ವಿಸ್ಮಯ' ವಿಷಯ ಆಧರಿಸಿದ ಈ ಪ್ರದರ್ಶನದಲ್ಲಿ ಗಾಜಿನ ಮನೆಯಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ನೆಚ್ಚಿನ ಕಾಡನ್ನು ನಿರ್ಮಿಸುತ್ತಿದೆ.

ಫಲಪುಷ್ಪ ಪ್ರದರ್ಶನಕ್ಕೆ ತಮಿಳುನಾಡು, ಕೇರಳ, ಮಹಾರಾಷ್ಟ, ಡಾರ್ಜಿಲಿಂಗ್, ವಯನಾಡು ಕಡೆಯಿಂದ ಹೂಗಳು ಬಂದಿದ್ದು, 95ಕ್ಕೂ ಹೆಚ್ಚು ವೈವಿಧ್ಯಮಯ ಹಾಗೂ 35 ಲಕ್ಷಕ್ಕೂ ಹೆಚ್ಚು ಹೂಗಳಿಂದ ಅಲಂಕಾರ ಮಾಡಲಾಗುತ್ತಿದೆ. ಈ ಬಾರಿ ಲಾಲ್​ಬಾಗ್​ನಲ್ಲಿ ಬೆಳೆದಿರುವ 27 ಲಕ್ಷ ಹೂ ಬಳಕೆ ಮಾಡಲಾಗುತ್ತಿದೆ.

ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಈ ಕುರಿತು ಮಾಹಿತಿ ನೀಡಿದ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಆರ್. ಗಿರೀಶ್, ಈ ಬಾರಿ, ಫಲಪಷ್ಟ ಪ್ರದರ್ಶನಕ್ಕೆ 3.20 ಕೋಟಿ ರೂ.ಗಿಂತ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದ್ದು, ಈ ಬಾರಿ 12 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ನಿರೀಕ್ಷೆಯಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜ.14ರಂದು ಸಂಜೆ 4 ಗಂಟೆಗೆ ಪ್ರದರ್ಶನಕ್ಕೆ ಚಾಲನೆ ನೀಡುವರು, ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್, ರಾಮ ಲಿಂಗಾರೆಡ್ಡಿ, ಶಾಸಕ ಉದಯ್‌ ಬಿ.ಗರುಡಾಚಾರ್ ಸೇರಿದಂತೆ ಇತರರು ಪಾಲ್ಗೊಳ್ಳುವರು ಎಂದು ಹೇಳಿದರು.

ತೋಟಗಾರಿಕೆ ಇಲಾಖೆ (ಪಾರ್ಕ್ಸ್ ಅಂಡ್ ಗಾರ್ಡನ್ಸ್ ) ಅಪರ ನಿರ್ದೇಶಕ ಡಾ.ಎಂ. ಜಗದೀಶ್ ಮಾತನಾಡಿ, ತೇಜಸ್ವಿ ಅವರ ಕಾದಂಬರಿ, ಕಥೆಗಳಲ್ಲಿ ಕಂಡು ಬರುವ ಕಾಡಿನ ಮಾದರಿಯನ್ನು ಗಾಜಿನ ಮನೆಯಲ್ಲಿ ನಿರ್ಮಿಸಲಾಗಿದೆ. 45/45 ಅಡಿ ವ್ಯಾಸದ 25 ಅಡಿ ಎತ್ತರದ ಬೃಹತ್ ಬೆಟ್ಟ, ಜಲಪಾತದ ಮಾದರಿ ಇರಲಿದ್ದು ಅದರ ತಪ್ಪಲಿನಲ್ಲಿ ತೇಜಸ್ವಿ ಅವರ ಮೂಡಿಗೆರೆಯ ಹ್ಯಾಂಡ್‌ಪೋಸ್ಟ್ ಸಮೀಪವಿರುವ 'ನಿರುತ್ತರ' ಮನೆಯ ಪುಷ್ಪಮಾದರಿ ನಿರ್ಮಾಣಗೊಳ್ಳಲಿದೆ. ಅದರ ಮುಂದೆ ನಾಲ್ಕು ಅಡಿ ಎತ್ತರದ ತೇಜಸ್ವಿ- ರಾಜೇಶ್ವರಿಯವರ ಪ್ರತಿಮೆಗಳು ಇರಲಿವೆ ಎಂದು ಮಾಹಿತಿ ನೀಡಿದರು.

Lalbagh
2026 ಗಣರಾಜ್ಯೋತ್ಸವ ಪ್ರಯುಕ್ತ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ: ವಿವಿಧ ಸ್ಪರ್ಧೆಗಳಿಗೆ ಅರ್ಜಿ ಆಹ್ವಾನ

ತೇಜಸ್ವಿಯವರ ಸ್ಕೂಟರ್ ಮತ್ತು ಕರ್ವಾಲೋ ಕಾದಂಬರಿಯಲ್ಲಿ ಬರುವ ಕಿವಿ ನಾಯಿ, ಕರಿಯಪ್ಪ, ಮಂದಣ್ಣ ತೇಜಸ್ವಿಯವರ ಜೀರುಂಡೆ, ಏರೋಪ್ಲೇನ್ ಚಿಟ್ಟೆ ಮೊದಲಾದ ಪ್ರಾಣಿ ಪಕ್ಷಿ-ಕೀಟಗಳ ಪುಷ್ಪ ಮಾದರಿಗಳು ಇರಲಿವೆ. ಬೆಟ್ಟದ ಬಲಭಾಗದ ತಪ್ಪಲಿ ನಲ್ಲಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಕಟ್ಟ ಡದ ಪುಷ್ಪ ಮಾದರಿ ಇತ್ಯಾದಿಗಳು ಇರಲಿವೆ ಎಂದು ಹೇಳಿದರು.

ನಿರುತ್ತರ ಮನೆ, ತೇಜಸ್ವಿ ಪ್ರತಿಷ್ಠಾನದ ಕಟ್ಟಡ, ಜೇನುಹುಳ, ಬಣ್ಣದ ಚಿಟ್ಟೆಗಳು, ಕಪ್ಪೆ, ಜೀರುಂಡೆ ಮತ್ತು ಬಸವನ ಹುಳಗಳ ಸೇರಿದಂತೆ ಹಲವು ಪುಷ್ಪಾ ಕೃತಿಗಳನ್ನು ನಿರ್ಮಿಸಲು ಒಂದು ಬಾರಿಗೆ 4.50 ಲಕ್ಷ ದಂತೆ ಎರಡು ಬಾರಿಗೆ ಒಂಬತ್ತು ಲಕ್ಷ ಹೂವುಗಳನ್ನು ಬಳಸಲಾಗುವುದು ಎಂದು ತಿಳಿಸಿದರು.

ಜ.15ರಿಂದ 26ರವರೆಗೆ ಲಾಲ್‌ಬಾಗ್‌ನಲ್ಲಿ ನಿತ್ಯವೂ ಸಂಜೆ 5 ರಿಂದ 7ರವರೆಗೆ ಮಳಿಗೆಗಳ ಪಕ್ಕದ ಹುಲ್ಲುಹಾಸಿನ ಮೇಲೆ ನನ್ನ ತೇಜಸ್ವಿ ಕರ್ವಾಲೊ, ಜುಗಾರಿ ಕ್ರಾಸ್, ಕೃಷ್ಣ ಗೌಡನ ಆನೆ, ಯಮಳ ಪ್ರಶ್ನೆ ಸೇರಿದಂತೆ ತೇಜಸ್ವಿಯ ವರ ಪ್ರಸಿದ್ದ ನಾಟಕಗಳು, ಸಿನಿಮಾ-ಸಾಹಿತ್ಯ ಕುರಿತಾ ದ ಸಂವಾದಗಳು ನಡೆಯಲಿವೆ. ಜತೆಗೆ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯೂ ಇರಲಿದೆ.

ಸ್ತಬ್ಧ ಚಿತ್ರ

ಇದೇ ಮೊದಲ ಬಾರಿಗೆ ಪರಿಸರ ಮತ್ತು ಕಾಡು ಪ್ರಾಣಿಗಳ ಕುರಿತಾದ ಎರಡು ಬೃಹತ್‌ ಸ್ತಬ್ದ ಚಿತ್ರಗಳನ್ನು ನಿರ್ಮಿಸಲಾಗುತ್ತಿದೆ. ಒಂದರಲ್ಲಿ ಆನೆ, ಮತ್ತೊಂದರಲ್ಲಿ ಮಂಗಟೆಹಕ್ಕಿ (ಹಾರ್ನ್ ಬಿಲ್) ಪ್ರತಿಕೃತಿ ಇರಲಿದೆ. ಜೊತೆಗೆ ವಿವಿಧ ಪ್ರಾಣಿ, ಪಕ್ಷಿಗಳ ಸಣ್ಣ, ಪುಟ್ಟವನ್ಯ ಪ್ರಾಣಿ, ಪಕ್ಷಿಗಳ ಪ್ರತಿಕೃತಿಗಳು ಚಲನವಲನದಿಂದ ಕೂಡಿರಲಿದ್ದು, ಇವು ನೋಡುಗರಿಗೆ ಖುಷಿ ಕೊಡಲಿವೆ.

ಪ್ರವೇಶ ಶುಲ್ಕ

ಫ್ಲವರ್ ಶೋಗೆ ಟಿಕೆಟ್​ ದರ ನಿಗದಿ ಮಾಡಲಾಗಿದ್ದು, ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 80 ರೂ ಹಾಗೂ ರಜೆ ದಿನಗಳಲ್ಲಿ 100 ರೂ ಟಿಕೆಟ್ ದರ ಇರಲಿದೆ. ಇನ್ನು ಮಕ್ಕಳಿಗೆ 30 ರೂ, 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶ ಇರಲಿದೆ.

Lalbagh
ಲಾಲ್ ಬಾಗ್ ಫಲಪುಷ್ಪ ಪ್ರದರ್ಶನ :ಈ ಬಾರಿ ದಾಖಲೆ ಪ್ರಮಾಣದ ಆದಾಯ

ವಿದ್ಯಾರ್ಥಿಗಳಿಗೆ ಉಚಿತ

ಶಾಲಾ ಸಮವಸ್ತ್ರಧರಿಸಿ ಬರುವ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪುಷ್ಪ ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ. ಸರ್ಕಾರಿ ರಜಾ ದಿನಗಳಲ್ಲಿ ಇದು ಅನ್ವಯ ಆಗುವುದಿಲ್ಲ.

ಆನ್​​ಲೈನ್​​ನಲ್ಲಿ ಟಿಕೆಟ್​

ಲಾಲ್‌ಬಾಗ್​​‌ನ ಎಲ್ಲ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟಿಂಗ್ Online payment, Online advance booking ಹಾಗೂ Cash Pay ಮೂಲಕ ಪ್ರವೇಶ ಟಿಕೆಟ್‌ಗಳನ್ನು ಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಅಲ್ಲದೆ, . <https://hasiru.karnataka.gov.in/flowe show/login.aspx> ನಲ್ಲಿಯೂ ಟಿಕೆಟ್ ಬುಕ್ ಮಾಡಬಹುದು.

ಪಾರ್ಕಿಂಗ್‌ ವ್ಯವಸ್ಥೆ

ಡಬಲ್ ರೋಡ್ ಶಾಂತಿನಗರ ಬಸ್ ನಿಲ್ದಾಣದ ಬಳಿ ಇರುವ ಬಹುಮಹಡಿ ವಾಹನ ನಿಲುಗಡೆ, ಹಾಪ್‌ಕಾಮ್ಸ್ ಆವರಣ ಹಾಗೂ ಜೆ.ಸಿ ರಸ್ತೆಯಲ್ಲಿನ ಬಿಬಿಎಂಪಿ ಬಹುಮಹಡಿ ವಾಹನ ನಿಲುಗಡೆ, ದ್ವಿಚಕ್ರ ವಾಹನದಲ್ಲಿ ಬರುವವರು ಲಾಲ್ ಬಾಗ್ ಮುಖ್ಯದ್ವಾರದ ಬಳಿ ಇರುವ ಅಲ್ ಅಮೀನ್ ಕಾಲೇಜು ಆವರಣದ ನಿಲ್ದಾಣ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com