

ದಾವಣಗೆರೆ: ಕೆರೆಯ ಮಣ್ಣು ತುಂಬುವ ವಿಚಾರದಲ್ಲಿ ಜಾತಿನಿಂದನೆ ಮಾಡಿದ್ದಾರೆ ಎಂಬ ಆರೋಪದಡಿ ಹರಿಹರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ವಿರುದ್ಧ ದಾವಣಗೆರೆಯ ಡಿಸಿಆರ್‌ಇ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಕಾಡಜ್ಜಿ ಕೆರೆಯ ಅಂಗಳದಲ್ಲಿ ವ್ಯವಸಾಯಕ್ಕೆಂದು ಟ್ರ್ಯಾಕ್ಟರ್ ಗೆ ಮಣ್ಣನ್ನು ತುಂಬಿಕೊಳ್ಳುತ್ತಿದ್ದಾಗ ಸ್ಥಳಕ್ಕೆ ಬಂದ ಶಾಸಕ ಬಿ.ಪಿ.ಹರೀಶ್, ಅವರ ಪುತ್ರ ಹಾಗೂ ಆಪ್ತ ಸಹಾಯಕ ಜಾತಿ ನಿಂದನೆ ಮಾಡಿದ್ದಾರೆ ಎಂದು ಕಾಡಜ್ಜಿ ಗ್ರಾಮದ ನಿವಾಸಿ, ಭೋವಿ ಸಮುದಾಯದ ಕಾಂತರಾಜ್ ಎಚ್. ದೂರು ನೀಡಿದ್ದಾರೆ.
ದೂರಿನ ಅನ್ವಯ ಪೊಲೀಸರು ಶಾಸಕ ಬಿ.ಪಿ.ಹರೀಶ್, ಅವರ ಪುತ್ರ ಹಾಗೂ ಶಾಸಕರ ಆಪ್ತ ಸಹಾಯಕನ ವಿರುದ್ಧ ಎಸ್ ಸಿ, ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆರೆಯಿಂದ ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ವರದಿಗಳನ್ನು ಪರಿಶೀಲಿಸಲು ಜನವರಿ 12 ರಂದು ಹರೀಶ್ ಗ್ರಾಮಕ್ಕೆ ಹೋಗಿದ್ದರು. ಕೆರೆಯಿಂದ ಹೂಳು ಸಾಗಿಸುತ್ತಿದ್ದಾಗ ಶಾಸಕರ ಕಾರು ಅವರ ಟ್ರ್ಯಾಕ್ಟರ್ ಅನ್ನು ಅಡ್ಡಗಟ್ಟಿದೆ ಎಂದು ದೂರಿನಲ್ಲಿ ಕಾಂತರಾಜ್ ಹೇಳಿಕೊಂಡಿದ್ದಾರೆ.
"ನಾನು ಟ್ರ್ಯಾಕ್ಟರ್‌ನಿಂದ ಇಳಿದು ಕಾರಿನ ಬಳಿ ಹೋಗಿ ಶಾಸಕ ಹರೀಶ್ ಅವರನ್ನು ನೋಡಿದೆ. ನೀವು ನನ್ನ ಟ್ರ್ಯಾಕ್ಟರ್ ಅನ್ನು ಏಕೆ ತಡೆದಿದ್ದೀರಿ ಎಂದು ನಾನು ಕೇಳಿದಾಗ, ಶಾಸಕರು, ಅವರ ಮಗ ಮತ್ತು ಅವರ ಪಿಎ ಕಾರಿನಿಂದ ಇಳಿದು ನಾನು ಯಾವ ಆಧಾರದ ಮೇಲೆ ಮಣ್ಣು ತುಂಬುತ್ತೀದ್ದೀಯಾ ಎಂದು ಕೇಳಿದರು. ನಂತರ ಅವರು ನನ್ನನ್ನು ಅಸಭ್ಯವಾಗಿ ನಿಂದಿಸಿದರು ಎಂದು ದೂರುದಾರರು ಆರೋಪಿಸಿದ್ದಾರೆ. ಇತ್ತೀಚೆಗೆ, ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಅವರನ್ನು ಅವಮಾನಿಸಿ ನಿಂದಿಸಿದ ಆರೋಪದ ಮೇಲೆ ಹರೀಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
Advertisement