70 ಸಾವಿರ ಮೌಲ್ಯದ ಕಾರಿಗೆ 1.11 ಲಕ್ಷ ರೂ ದಂಡ: ಸೈಲೆನ್ಸರ್ ಮಾಡಿಫೈ ಮಾಡಿಸಿದ್ದ ಭೂಪನಿಗೆ ಬೆಂಗಳೂರು ಟ್ರಾಫಿಕ್ ಪೊಲೀಸ್ ಶಾಕ್! Video

ಸೈಲೆನ್ಸರ್‌, ಗಾಜು, ಬಣ್ಣ, ಲೈಟ್‌ ಮಾರ್ಪಾಡು ಮಾಡಿದ್ದ ಕಾರಿಗೆ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು 1,11,500 ರೂ ದಂಡ ವಿಧಿಸಿದ್ದಾರೆ.
Modified silencer Car
ಸೈಲೆನ್ಸರ್ ಮಾಡಿಫೈ ಮಾಡಿಸಿದ್ದ ಕಾರು
Updated on

ಬೆಂಗಳೂರು: ಕಾರಿನ ಸೈಲೆನ್ಸರ್ ಅಕ್ರಮವಾಗಿ ಮಾರ್ಪಡಿಸಿ, ಬೆಂಕಿ ಚಿಮ್ಮಿಸುತ್ತಾ, ವಿಪರೀತ ಶಬ್ದ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿಗೆ ಬೆಂಗಳೂರು ಸಂಚಾರಿ ಪೊಲೀಸರು ಬಿಗ್ ಶಾಕ್ ನೀಡಿದ್ದು, ಬೃಹತ್ ದಂಡ ವಿಧಿಸಿದ್ದಾರೆ.

ಹೌದು.. ಸೈಲೆನ್ಸರ್‌, ಗಾಜು, ಬಣ್ಣ, ಲೈಟ್‌ ಮಾರ್ಪಾಡು ಮಾಡಿದ್ದ ಕಾರಿಗೆ ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು 1,11,500 ರೂ ದಂಡ ವಿಧಿಸಿದ್ದಾರೆ. ಈ ಕಾರು ಸುಮಾರು 17 ವರ್ಷಗಳಷ್ಟು ಹಳೆಯದಾಗಿದ್ದು ಇದರ ಮೌಲ್ಯ ಕೇವಲ 70 ಸಾವಿರ ರೂ ಎಂದು ಅಂದಾಜಿಸಲಾಗಿದೆ.

ಆದರೆ ಇದೀಗ ಪೊಲೀಸರು ವಿಧಿಸಿರುವ ದಂಡ ಇದರ ದುಪ್ಪಟ್ಟಾಗಿದೆ. ಕಾರಿನ ಮೌಲ್ಯಕ್ಕಿಂತ ದಂಡದ ಮೊತ್ತವೇ ಹೆಚ್ಚಾಗಿರುವುದು ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.

ಕೇರಳದ ಎರ್ನಾಕುಲಂ ಆರ್‌ಟಿಒ ನೋಂದಣಿ ಸಂಖ್ಯೆ (ಕೆಎಲ್7 ಎಬಿ 8764) ಹೊಂದಿರುವ ಕಾರು ಬೆಂಗಳೂರಿನ ಭಾರತಿ ನಗರ–ಹೆಣ್ಣೂರು ರಸ್ತೆಯಲ್ಲಿ ಕರ್ಕಶವಾಗಿ ಸದ್ದು ಮಾಡುತ್ತಾ ಸಾಗುತ್ತಿತ್ತು. ಕಿರಿಕಿರಿ ಸಹಿಸಲಾಗದ ಸಾರ್ವಜನಿಕರು ಇದರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಲ್ಲದೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

Modified silencer Car
ಬೆಂಗಳೂರು ವಾಹನ ಚಾಲಕರೇ ಎಚ್ಚರ... ಇನ್ಮುಂದೆ ಟ್ರಾಫಿಕ್​​ ನಿಯಮ ಉಲ್ಲಂಘಿಸಿದರೆ ಜೇಬಿಗೆ ಕತ್ತರಿಯಷ್ಟೇ ಅಲ್ಲ, FIR ಫಿಕ್ಸ್..!

ಕಾರ್ಯಾಚರಣೆ ನಡೆಸಿ ಹಿಡಿದ ಪೊಲೀಸರು

ಯಲಹಂಕ ಸಂಚಾರ ಪೊಲೀಸರು ಕಾರ್ಯಾಚರಣೆ ನಡೆಸಿ ಈ ಕಾರನ್ನು ಪತ್ತೆ ಹಚ್ಚಿದರು. ಬೆಂಗಳೂರಿನಲ್ಲಿ ಓದುತ್ತಿರುವ ಕೇರಳದ ಮಹಮ್ಮದ್‌ ಸೈಫನ್‌ ಎಂಬ ವಿದ್ಯಾರ್ಥಿ ಚಲಾಯಿಸುತ್ತಿದ್ದ ಈ ಕಾರಿನ ಸೈಲೆನ್ಸರ್‌ ಸೇರಿದಂತೆ ಪೂರ್ಣವಾಗಿ ಮಾರ್ಪಾಡು ಆಗಿರುವುದನ್ನು ಕಂಡ ಪೊಲೀಸರು ಯಲಹಂಕ ಪ್ರಾದೇಶಿಕ ಸಾರಿಗೆ ಕಚೇರಿಗೆ ಮಾಹಿತಿ ನೀಡಿದ್ದರು.

ಸಾರಿಗೆ ಇನ್‌ಸ್ಪೆಕ್ಟರ್‌ ನಾಗರತ್ನ ಮತ್ತು ಸಿಬ್ಬಂದಿ ಬಂದು ಕಾರನ್ನು ವಶಕ್ಕೆ ತೆಗೆದುಕೊಂಡರು. 2007–08 ಮಾಡೆಲ್‌ ಕಾರು ಇದಾಗಿದ್ದು, ಕಾರಿನಲ್ಲಿ ಯಾರಿದ್ದಾರೆ ಎಂಬುದು ಗೊತ್ತಾಗದಂತೆ ಕಪ್ಪು ಗಾಜು ಅಳವಡಿಸಲಾಗಿತ್ತು. ಬಹುಬಣ್ಣದ ಕಾರನ್ನಾಗಿ ಪರಿವರ್ತಿಸಲಾಗಿತ್ತು. ಹೆಡ್‌ಲೈಟ್‌ ಅನ್ನು ಡಿಸ್ಕೊಲೈಟ್‌ ಆಗಿ ಮಾರ್ಪಾಡು ಮಾಡಲಾಗಿತ್ತು. ಮಾಲೀಕರಿಗೆ ಮೋಟಾರು ವಾಹನ ಕಾಯ್ದೆಯ 182 (1)ಎ ಸೆಕ್ಷನ್‌ ಪ್ರಕಾರ ದಂಡ ವಿಧಿಸಲಾಗಿದೆ.

ಡ್ರೈವಿಂಗ್ ಲೈಸೆನ್ಸ್ ಕೂಡ ಅಮಾನತು?

ಕಾರಿನ ನೋಂದಣಿ ಪ್ರಮಾಣಪತ್ರವನ್ನು, ಮಹಮ್ಮದ್‌ ಸೈಫನ್‌ನ ಚಾಲನಾ ಪರವಾನಗಿಯನ್ನು ಅಮಾನತು ಮಾಡಲು ಸಾರಿಗೆ ಪ್ರಾಧಿಕಾರಕ್ಕೆ ಬರೆಯಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಮರೇಶ್‌ ಚೆಲುವ ತಿಳಿಸಿದ್ದಾರೆ. ‘ಈ ರೀತಿ ಸೈಲೆನ್ಸರ್‌ ಮಾರ್ಪಾಡು ಮಾಡಿ ಕರ್ಕಶ ಸದ್ದು ಮಾಡಿಕೊಂಡು ಹೋಗುವ ಕಾರುಗಳ ಬಗ್ಗೆ ದೂರು ನೀಡಿದರೆ, ಇಲ್ಲವೇ ನಮ್ಮ ಅಧಿಕಾರಿಗಳ ಗಮನಕ್ಕೆ ಬಂದರೆ ಅಂಥ ಕಾರುಗಳ ನೋಂದಣಿ ಪ್ರಮಾಣಪತ್ರ (ಆರ್‌ಸಿ) ಹಾಗೂ ಚಾಲಕರ ಚಾಲನಾ ಪರವಾನಗಿ (ಡಿಎಲ್‌) ರದ್ದು ಮಾಡಲಾಗುವುದು ಎಂದು ಸಾರಿಗೆ ಹೆಚ್ಚುವರಿ ಆಯುಕ್ತ (ಪ್ರವರ್ತನ) ಸಿ. ಮಲ್ಲಿಕಾರ್ಜುನ ತಿಳಿಸಿದ್ದಾರೆ.

ರಾಜಕಾರಣಿಗಳ ಒತ್ತಡ

ವಿದ್ಯಾರ್ಥಿ ಪರವಾಗಿ ಕೆಲ ರಾಜಕಾರಣಿಗಳು ಮಧ್ಯಪ್ರವೇಶಿಸಿ, ಕಡಿಮೆ ದಂಡ ವಿಧಿಸಿ ವಾಹನ ಬಿಡುಗಡೆ ಮಾಡುವಂತೆ ಪೊಲೀಸರ ಮೇಲೆ ಒತ್ತಡ ತಂದಿದ್ದರು. ಕನಿಷ್ಠ ದಂಡವನ್ನು ಸಂಗ್ರಹಿಸಿದ ನಂತರ ವಾಹನವನ್ನು ಬಿಡುಗಡೆ ಮಾಡುವಂತೆ ಪೊಲೀಸರ ಮೇಲೆ ಪ್ರಭಾವ ಬೀರಲು ಹಲವಾರು ರಾಜಕಾರಣಿಗಳು ಪ್ರಯತ್ನಿಸಿದ್ದಾರೆ. ಆದರೆ, ಬೆಂಗಳೂರು ಪೊಲೀಸರು ತಮ್ಮ ನಿಲುವಿನಲ್ಲಿ ಸ್ಥಿರರಾಗಿದ್ದರು.

ಅಂತಿಮವಾಗಿ, ಆರ್‌ಟಿಒ ಅಧಿಕಾರಿಗಳು ಕಾನೂನಿನ ಪ್ರಕಾರ ಗರಿಷ್ಠ ದಂಡವಾದ 1,11,500 ರೂಪಾಯಿ ವಿಧಿಸಿದರು. ವಿದ್ಯಾರ್ಥಿ ಈ ದಂಡವನ್ನು ಬುಧವಾರ ಪಾವತಿಸಿದ ನಂತರ, ವಾಹನವನ್ನು ಬಿಡುಗಡೆ ಮಾಡಲಾಯಿತು ಎನ್ನಲಾಗಿದೆ.

"ವಾಹನ ಸೈಲೆನ್ಸರ್‌ಗಳನ್ನು ಮಾರ್ಪಡಿಸುವ ಮತ್ತು ಕಾನೂನನ್ನು ಉಲ್ಲಂಘಿಸುವವರಿಗೆ ಇದು ಒಂದು ಪಾಠ. ಬೆಂಗಳೂರು ಪೊಲೀಸರು ಅಂತಹ ಉಲ್ಲಂಘನೆಗಳ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದಾರೆ" ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com