

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಕ್ಷೇತ್ರವಾದ ವರುಣಾ ವಿಧಾನಸಭಾ ಕ್ಷೇತ್ರದ ವರುಣಾ ಹೋಬಳಿಯ ಗುಡಮಾದನಹಳ್ಳಿ ಗ್ರಾಮದಲ್ಲಿ, ಸರ್ಕಾರಿ ಜಮೀನು ಪರಿಶೀಲನೆಗೆ ತೆರಳಿದ್ದ ಮಹಿಳಾ ಗ್ರಾಮ ಆಡಳಿತಾಧಿಕಾರಿ ಮತ್ತು ಗ್ರಾಮ ಸಹಾಯಕನಿಗೆ ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.
ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ. ಭವ್ಯಾ ಹಾಗೂ ಗ್ರಾಮ ಸಹಾಯಕ ನವೀನ್ ಕುಮಾರ್ ಅವರು, ಸರ್ಕಾರ ಸ್ವಾಧೀನಕ್ಕೆ ಪಡೆಯಲು ಗುರುತಿಸಿರುವ ಜಮೀನಿನ ಪರಿಶೀಲನೆಗಾಗಿ ಸ್ಥಳಕ್ಕೆ ತೆರಳಿದ್ದ ವೇಳೆ, ಗುಡಮಾದನಹಳ್ಳಿ ಗ್ರಾಮದ ನಿವಾಸಿ ಜಿ.ಎಂ. ಪುಟ್ಟಸ್ವಾಮಿ ಅವರು ಬೆದರಿಕೆ ಹಾಕಿದ್ದಾರೆ ಎಂದು ತಿಳಇದುಬಂದಿದೆ.
ವರುಣ ಹೋಬಳಿಯ ಗುಡಮಾದನಹಳ್ಳಿಯಲ್ಲಿ ‘ನಿಮ್ಹಾನ್ಸ್ ಆಸ್ಪತ್ರೆ’ ನಿರ್ಮಿಸಲು ಸರ್ವೆ ನಂ.8ರಲ್ಲಿ 5 ಎಕರೆ 5 ಗುಂಟೆ ಹಾಗೂ ಸರ್ವೆ ನಂ. 60ರಲ್ಲಿ 6 ಎಕರೆ 10 ಗುಂಟೆ, ಸರ್ವೆ ನಂ. 68ರಲ್ಲಿ 8 ಎಕರೆ 25 ಗುಂಟೆ ಸೇರಿ ಒಟ್ಟು 20 ಎಕರೆ ಜಾಗ ಮೀಸಲಿಡಲಾಗಿದೆ.
ಈ ಜಮೀನು ಪರಿಶೀಲನೆಗೆಂದು 2025ರ ಡಿ.31ರಂದು ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ ಜಿ.ಭವ್ಯಾ ಹಾಗೂ ಗ್ರಾಮ ಸಹಾಯಕ ನವೀನ್‌ಕುಮಾರ್ ತೆರಳಿದ್ದರು. ಆಗ ಜಮೀನಿನಲ್ಲಿ ಅಡಿಕೆ ತೋಟ ಮಾಡಿಕೊಂಡಿರುವ ಪುಟ್ಟಸ್ವಾಮಿ, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ. ‘ಮೊದಲು ನಿಮ್ಮ ಹೆಣ ಬೀಳುತ್ತೆ’ ಎಂದು ಜೀವ ಬೆದರಿಕೆ ಒಡ್ಡಿದ್ದಾರೆಂದು ತಿಳಿದುಬಂದಿದೆ.
ಮೊಬೈಲ್ ಫೋನ್‌ನಲ್ಲಿ ವಿಡಿಯೊ ಮಾಡುತ್ತಿದ್ದ ನವೀನ್‌ಕುಮಾರ್ ಅವರಿಗೆ ಬೆದರಿಕೆ ಹಾಕಿ ಮೊಬೈಲ್ ಕಿತ್ತುಕೊಂಡಿದ್ದರು ಎಂದು ಆರೋಪಿಸಲಾಗಿದೆ. ಭವ್ಯಾ ಅವರು ನೀಡಿದ ದೂರು ಆಧರಿಸಿ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರು ಬೆನ್ನಲ್ಲೇ ಪುಟ್ಟಸ್ವಾಮಿ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ನೋಟಿಸ್ ಜಾರಿಗೊಳಿಸಿದ್ದರು. ಬಳಿಕ ಅವರನ್ನು ‘ಸ್ಟೇಷನ್ ಬೇಲ್’ ಮೇಲೆ ಬಿಡುಗಡೆ ಮಾಡಿದ್ದರು.
ಬಿಜೆಪಿ ತೀವ್ರ ಕಿಡಿ
ಇನ್ನು ಘಟನೆ ಸಂಬಂಧ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ನಂತರ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ, ಕೊಲೆ ಬೆದರಿಕೆ ಸಾಮಾನ್ಯ ಎಂಬಂತಾಗಿದೆ. ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಯ ಮೇಲೆ ಕಾಂಗ್ರೆಸ್ ನಾಯಕನ ದಬ್ಬಾಳಿಕೆ ನಡೆದ ಎರಡೇ ದಿನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರವಾದ ವರುಣಾದಲ್ಲಿ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ, ಕೊಲೆ ಬೆದರಿಕೆ ನಡೆದಿದೆ.
ಜಮೀನು ಪರಿಶೀಲನೆಗೆ ತೆರಳಿದ್ದ ಗ್ರಾಮ ಆಡಳಿತಾಧಿಕಾರಿ ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲೇ ಮಹಿಳಾ ಅಧಿಕಾರಿಗೆ ರಕ್ಷಣೆ ಇಲ್ಲವೆಂದರೆ, ರಾಜ್ಯದ ಉಳಿದೆಡೆ ಸಾಮಾನ್ಯ ಮಹಿಳೆಯರ ಗತಿಯೇನು? ಇದೇನಾ ನಿಮ್ಮ ಮಹಿಳಾ ರಕ್ಷಕ ಆಡಳಿತ? ಎಂದು ಪ್ರಶ್ನಿಸಿದೆ.
ಈ ಘಟನೆ ಭಯತದ ವಾತಾವರಣ ನಿರ್ಮಿಸಿದೆ. ಕರ್ತವನ್ನು ಮುಕ್ತವಾಗಿ ನಿರ್ವಹಿಸದಂತೆ ತಡೆಯುತ್ತಿದೆ. ನನಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ಭವ್ಯಾ ಅವರು ಹೇಳಿದ್ದಾರೆ. ಇದೇವೇಳೆ ಆರೋಪಗಳ ವಿರುದ್ಧ ಕಾನೂನು ಕ್ರಮಕ್ಕೂ ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಮಾತನಾಡಿ, ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಪರಿಹರಿಸಲು ಪ್ರಯತ್ನಿಸಬೇಕು. ಜನರು ಕೂಡ ಸಂಯಮದಿಂದ ವರ್ತಿಸಬೇಕು ಎಂದು ಹೇಳಿದ್ದಾರೆ.
Advertisement