

ಭಾಗಲ್ಪುರ: ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಭರಣ ಮಳಿಗೆಯೊಂದರಲ್ಲಿ ಡಿ.28ರಂದು ನಡೆದಿದ್ದ 10 ಕೋಟಿ ರು. ಮೌಲ್ಯದ ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ವ್ಯಕ್ತಿಗಳನ್ನು ದರ್ಭಾಂಗದ ಹೃಷಿಕೇಶ್ ಸಿಂಗ್ ಮತ್ತು ಭಾಗಲ್ಪುರದ ಪಂಕಜ್ ಕುಮಾರ್ ಅಲಿಯಾಸ್ ಸತುವಾ ಎಂದು ಗುರುತಿಸಲಾಗಿದೆ, ಇವರು ಕರ್ನಾಟಕದ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿರುವ ಆಭರಣ ಮತ್ತು ವಜ್ರದ ಅಂಗಡಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳಾಗಿದ್ದಾರೆ.
ಕರ್ನಾಟಕ ಪೊಲೀಸರ ಸಹಯೋಗದೊಂದಿಗೆ ಬಿಹಾರದ ಎಸ್‌ಟಿಎಫ್ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತರಿಂದ ಆಭರಣ ಮಳಿಗೆಯಲ್ಲಿ ಕಳವು ಮಾಡಿದ್ದ ಚಿನ್ನದ ಸರ, ಉಂಗುರ, 1 ಲಕ್ಷ ರು. ನಗದು, ಬೈಕ್ ವಶಪಡಿಸಿಕೊಳ್ಳಲಾಗಿದೆ.
ಕಳೆದ ಡಿ.28ರಂದು 2 ಬೈಕ್‌ನಲ್ಲಿ ಬಂದಿದ್ದ 5 ದರೋಡೆಕೋರರ ಗುಂಪು ಹಾಡಹಗಲೇ ಹುಣಸೂರಿನ ಸ್ಕೈ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಎಂಬ ಆಭರಣ ಶೋರೋಂಗೆ ನುಗ್ಗಿತ್ತು. ಈ ವೇಳೆ ಗನ್ ಹಿಡಿದು ಅಲ್ಲಿದ್ದ ಸಿಬ್ಬಂದಿ ಮತ್ತು ಗ್ರಾಹಕರನ್ನು ಬೆದರಿಸಿದ್ದ ದರೋಡೆಕೋರರು ಕೇವಲ 4 ನಿಮಿಷಗಳ ಅವಧಿಯಲ್ಲಿ 10 ಕೋಟಿ ರು. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಆರೋಪಿ ಪಂಕಜ್ ವಿರುದ್ಧ ಬಿಹಾರ, ಜಾರ್ಖಂಡ್, ಕರ್ನಾಟಕ, ರಾಜಸ್ಥಾನದ ವಿವಿಧ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ 16 ಪ್ರಕರಣಗಳು ದಾಖಲಾಗಿವೆ. ಹೃಷಿಕೇಶ್ ಸಿಂಗ್ ವಿರುದ್ಧ ಕೊಲೆ, ದರೋಡೆ, ಡಕಾಯಿತಿ ಬಿಹಾರದ ಪೂರ್ನಿಯಾ, ನೌಗಚಿಯಾ ಹಾಗೂ ಮೈಸೂರಿನ ಹುಣಸೂರು ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ 4 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement