

ಬೆಂಗಳೂರು: ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ಸಚಿವ ಈಶ್ವರ್ ಖಂಡ್ರೆ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬುಧವಾರ ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದಾರೆ.
ಭೇಟಿ ವೇಳೆ ಲಿಂಗಾಯತ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಹೆಚ್ಚಿಸುವುದು, ಮುಂದಿನ ಚುನಾವಣೆಗಳಲ್ಲಿನ ಸಮುದಾಯದ ಪಾತ್ರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಅತಿದೊಡ್ಡ ಸಮುದಾಯವಾಗಿರುವ ಲಿಂಗಾಯತರು 100ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಹೊಂದಿದ್ದಾರೆ. ಆದರೆ, 1970ರ ದಶಕದಲ್ಲಿ 92 ಶಾಸಕರಷ್ಟು ಇದ್ದ ಲಿಂಗಾಯತ ಪ್ರತಿನಿಧಿತ್ವ ಇತ್ತೀಚಿನ ವರ್ಷಗಳಲ್ಲಿ 55–56ಕ್ಕೆ ಇಳಿದಿದೆ.
ಈ ಹಿನ್ನೆಲೆ ಖಂಡ್ರೆ ಅಧ್ಯಕ್ಷತ್ವವನ್ನು ಲಿಂಗಾಯತ ಸಮುದಾಯದ ರಾಜಕೀಯ ಒಕ್ಕೂಟವನ್ನು ಪುನರ್‌ಸಂಘಟಿಸಲು ಮಹತ್ವದ ಹೆಜ್ಜೆಯೆಂದು ನೋಡಲಾಗುತ್ತಿದೆ.
ಕಾಂಗ್ರೆಸ್‌ನ ಪ್ರಮುಖ ಲಿಂಗಾಯತ ನಾಯಕರಾಗಿರುವ ಖಂಡ್ರೆ, ಮಹಾಸಭಾ ಮೂಲಕ ಸಮುದಾಯದ ಬೇಡಿಕೆಗಳನ್ನು ಸಂಘಟಿತವಾಗಿ ಮುಂದಿಟ್ಟು ಮುಂದಿನ ಚುನಾವಣೆಗಳಲ್ಲಿ ಹೆಚ್ಚು ಟಿಕೆಟ್‌ಗಳು ಹಾಗೂ ಪ್ರಾತಿನಿಧ್ಯ ಪಡೆಯಲು ಪ್ರಯತ್ನಿಸುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಸಿದ್ದರಾಮಯ್ಯ ಹಾಗೂ ಖರ್ಗೆಯವರನ್ನು ಭೇಟಿಯಾದ ದಿನವೇ ಈಶ್ವರ್ ಖಂಡ್ರೆ ಅವರು, ವೀರಶೈವ ಲಿಂಗಾಯತ ಮಹಾಸಭಾ ಕಚೇರಿಯಲ್ಲಿ ಡಾ. ಶಿವಕುಮಾರ ಮಹಾಸ್ವಾಮಿಜಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಶಿಕ್ಷಣ, ಅನ್ನದಾಸೋಹ ಮತ್ತು ಸಾಮಾಜಿಕ ಸೇವೆಯ ಮೂಲಕ ಸಮಾಜದ ಎಲ್ಲ ವರ್ಗಗಳಿಗೆ ಮಹತ್ವದ ಕೊಡುಗೆ ನೀಡಿದ ಮಹಾಸ್ವಾಮಿಜಿಯವರ ಸೇವೆಯನ್ನು ಅವರು ಸ್ಮರಿಸಿದರು.
ಈ ಸಂದರ್ಭದಲ್ಲಿ ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆ ಅಲ್ಲ, ಎಲ್ಲರೂ ಒಂದೇ ಎಂಬ ಶ್ರೀಗಳ ಸಂದೇಶವನ್ನು ಉಲ್ಲೇಖಿಸಿದ ಅವರು, ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳು ದೂರವಾಗಿ ಏಕತೆ ಬೆಳೆಸಬೇಕೆಂದು ಕರೆ ನೀಡಿದರು.
ಏತನ್ಮಧ್ಯೆ ಲಿಂಗಾಯತ ಸಮುದಾಯದ ರಾಜಕೀಯ ಏಕತೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಗಳಿಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Advertisement